ADVERTISEMENT

ಅಧಿಕ ಒತ್ತಡ: ಒಡೆದ ಮುಖ್ಯ ಕೊಳವೆ

ಅಪಾರ ನೀರು ಪೋಲು – ಜಲಮಂಡಳಿಯಿಂದ ಮರು ದುರಸ್ತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ಬೆಂಗಳೂರು: ಮಾಗಡಿ ರಸ್ತೆಯ ಹೆಗ್ಗನಹಳ್ಳಿ ಟ್ಯಾಂಕ್‌ನಿಂದ ರಾಜಾಜಿನಗರ, ಮಹಾಲಕ್ಷ್ಮಿಪುರ ಹಾಗೂ ಸುತ್ತಲಿನ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ಮುಖ್ಯ ಕೊಳವೆ ಮಾರ್ಗವು ಅಧಿಕ ಒತ್ತಡದಿಂದ ಗುರುವಾರ ತಡರಾತ್ರಿ ಒಡೆದಿದ್ದು ಭಾರಿ ಪ್ರಮಾಣದ ನೀರು ಪೋಲಾಗಿದೆ.

ಕಾವೇರಿ ನದಿಯಿಂದ ಪಂಪ್‌ ಮಾಡಲಾದ ನೀರನ್ನು ಹೆಗ್ಗನಹಳ್ಳಿ ಟ್ಯಾಂಕ್‌ನಲ್ಲಿ ಸಂಗ್ರಹ ಮಾಡಿ, ಬಳಿಕ ಅಲ್ಲಿಂದ 36 ಇಂಚಿನ ಈ ಕೊಳವೆ ಮಾರ್ಗದ ಮೂಲಕ ರಾಜಾಜಿನಗರದ ಕಡೆಗೆ ಪಂಪ್‌ ಮಾಡಲಾಗುತ್ತದೆ. ಹೆಗ್ಗನಹಳ್ಳಿ ಟ್ಯಾಂಕ್‌­ನಿಂದ ಕೂಗಳತೆ ದೂರದಲ್ಲೇ ಶ್ರೀಗಂಧ ಕಾವಲ್‌­ನಲ್ಲಿ ಈ ಕೊಳವೆ ಒಡೆದಿದೆ.

‘ಕೊಳವೆ ಒಡೆದಿದ್ದು ಗೊತ್ತಾದ ಕೂಡಲೇ ನೀರು ಪೂರೈಕೆ ಬಂದ್‌ ಮಾಡಲಾಯಿತು. ಆದರೂ ಲಕ್ಷಾಂತರ ಲೀಟರ್‌ ನೀರು ಸೋರಿಕೆ­ಯಾಗಿದೆ’ ಎಂದು ಜಲಮಂಡಳಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಜಿಎಐಎಲ್‌) ಸಂಸ್ಥೆ ದಾಭೋಲ್‌ನಿಂದ ಬಿಡದಿವ­ರೆಗೆ ಅನಿಲ ಪೂರೈಸಲು ಅಳವಡಿಸಿದ ಪೈಪ್‌, ಶ್ರೀಗಂಧ ಕಾವಲ್‌ ಬಳಿ ಈ ನೀರು ಪೂರೈಕೆ ಕೊಳವೆ ಮಾರ್ಗದ ಮೇಲೆ ಹಾಯ್ದು ಹೋಗುತ್ತದೆ. ಎರಡೂ ಮಾರ್ಗಗಳ ಮಧ್ಯೆ ಒತ್ತಡ ಹೀರುವಂತಹ ಸಾಧನಗಳನ್ನು ಅಳವಡಿಸಲಾಗಿದೆ. ಆದರೆ, ಒಳಗೆ ನೀರಿನ ರಭಸ ಹಾಗೂ ಮೇಲೆ ಅನಿಲ ಪೂರೈಕೆ ಪೈಪ್‌ನ ಭಾರದಿಂದ ನೀರು ಪೂರೈಕೆ ಕೊಳವೆ ಸ್ಫೋಟಗೊಂಡಿದೆ’ ಎಂದು ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ಜಿಎಐಎಲ್‌ನ ಅಧಿಕಾರಿಗಳೂ ಧಾವಿಸಿದ್ದು, ಅನಿಲ ಪೂರೈಕೆ ಪೈಪ್‌ಅನ್ನು ಇನ್ನೂ ಎರಡು ಅಡಿ ಎತ್ತರದಲ್ಲಿ ಅಳವಡಿಸಲು ನಿರ್ಧರಿಸ­ಲಾಗಿದೆ ಎಂದು ತಿಳಿಸಿದರು. ‘ಕೊಳವೆ ಮಾರ್ಗದ ದುರಸ್ತಿಗೆ ಎರಡು ಜೆಸಿಬಿ ಹಾಗೂ 20 ಜನ ಕಾರ್ಮಿಕರೊಂದಿಗೆ ಕಾರ್ಯಾಚ­ರಣೆ ನಡೆಸಲಾಗುತ್ತಿದೆ. ರಾತ್ರಿ ವೇಳೆಗೆ ಕಾಮಗಾರಿ ಮುಗಿಯಲಿದ್ದು, ನೀರು ಪೂರೈಕೆ ಯಥಾಪ್ರಕಾರ ಶುರುವಾಗಲಿದೆ’ ಎಂದು ಅಧಿಕಾರಿಗಳು ವಿವರಿಸಿ­ದರು. ‘ತುರ್ತು ದುರಸ್ತಿಗಾಗಿ ಸಂಗ್ರಹಿಸಿ ಇಡಲಾಗಿ­ರುವ ಪೈಪ್‌ಗಳ ಸಹಾಯದಿಂದ ಒಡೆದ ಕೊಳವೆ­ ದುರಸ್ತಿ ಮಾಡಲಾಗುತ್ತಿದೆ’ ಎಂದು ಹೇಳಿದರು.

ಹಳೆಯ ಸಿ.ಐ ಪೈಪ್‌: ಚಾಮರಾಜ ಜಲಾಶಯ­ದಿಂದ ನೀರು ಪಡೆಯಲು 1936ರಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯನವರ ನಿರ್ದೇಶನದಂತೆ  ತಿಪ್ಪಗೊಂಡ­ನ­­ಹಳ್ಳಿಯಿಂದ ಮಲ್ಲೇಶ್ವರದವರೆಗೆ ಈ ಮಾರ್ಗ­ವನ್ನು ಅಳವಡಿಸಲಾಗಿತ್ತು. 1970ರ ದಶಕದಲ್ಲಿ ಕಾವೇರಿ ಮೊದಲ ಹಂತದ ಯೋಜನೆ ಅನುಷ್ಠಾ­ನಕ್ಕೆ ಬಂದ ಬಳಿಕ ಹೆಗ್ಗನಹಳ್ಳಿಯಿಂದ ನಗರಕ್ಕೆ ನೀರು ಪಂಪ್‌ ಮಾಡಲು ಅದೇ ಮಾರ್ಗವನ್ನು ಬಳಸಲಾಗಿತ್ತು. ಎರಕಹೊಯ್ದ ಕಬ್ಬಿಣದ (ಸಿ.ಐ) ಪೈಪ್‌ಗಳಿಂದ ಈ ಮಾರ್ಗದ ನಿರ್ಮಾಣ ಮಾಡಲಾಗಿತ್ತು.

ಅತ್ಯದ್ಭುತ ಗುಣಮಟ್ಟ
ಘಟನಾ ಸ್ಥಳಕ್ಕೆ ನಾನೂ ಭೇಟಿ ನೀಡಿದ್ದೆ. ಅನಿಲ ಪೂರೈಕೆ ಪೈಪ್‌ನ ಭಾರದಿಂದ ನೀರು ಪೂರೈಕೆ ಕೊಳವೆ ಒಡೆದಿದೆ. ಜಲಮಂಡಳಿ ಹಾಗೂ ಭಾರತೀಯ ಅನಿಲ ಪ್ರಾಧಿಕಾರದ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ.
ಸರ್‌ ಎಂ. ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಅಳವಡಿಸಿದ ಈ ಪೈಪ್‌ನ ಗುಣಮಟ್ಟ ಅತ್ಯದ್ಭುತವಾಗಿದೆ.
ಅದು ಆಗಿನವರ ಕರ್ತೃತ್ವ ಶಕ್ತಿ ಹಾಗೂ ದಕ್ಷತೆಗೆ ಸಾಕ್ಷಿಯಾಗಿದೆ. ಪೈಪ್‌ ದುರಸ್ತಿ ಕಾರ್ಯ ರಾತ್ರಿಯೇ ಮುಗಿಯಲಿದ್ದು, ರಾಜಾಜಿನಗರ, ಮಹಾಲಕ್ಷ್ಮಿಪುರ ಮತ್ತು ಗೋವಿಂದರಾಜನಗರ ಪ್ರದೇಶಗಳಿಗೆ ಎಂದಿನಂತೆ ನೀರು ಪೂರೈಕೆ ಆಗಲಿದೆ.
–ಎಸ್‌.ಸುರೇಶಕುಮಾರ್‌,
ರಾಜಾಜಿನಗರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.