ADVERTISEMENT

ಅರವಿಂದ ಲಿಂಬಾವಳಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:57 IST
Last Updated 2 ಮೇ 2016, 19:57 IST
ಲಿಂಬಾವಳಿ
ಲಿಂಬಾವಳಿ   

ಬೆಂಗಳೂರು: ಮಹದೇವಪುರ ಸಮೀಪದ ಹೂಡಿ ಗ್ರಾಮದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಹಿರಿಯ ಪುರುಷ ಮತ್ತು ಮಹಿಳೆಯರ ಕಬ್ಬಡಿ ಪಂದ್ಯಾವಳಿ ವೀಕ್ಷಿಸಲು ಬಂದಿದ್ದ ಶಾಸಕ ಅರವಿಂದ ಲಿಂಬಾವಳಿ  ಸೋಮವಾರ ರಾತ್ರಿ ಅಸ್ವಸ್ಥಗೊಂಡ ಘಟನೆ ನಡೆಯಿತು.

ಐಟಿಪಿಎಲ್ ಬಳಿಯಲ್ಲಿರುವ ಹೂಡಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ ರಾತ್ರಿ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಗೆ  ಚಾಲನೆ ದೊರೆತಿತ್ತು.
ಸೋಮವಾರ ಸಂಜೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಲಿಂಬಾವಳಿ ಅವರು ಸೇರಿದಂತೆ ಅನೇಕ ಗಣ್ಯರು ಪಂದ್ಯಾವಳಿ ವೀಕ್ಷಣೆಗೆ ಆಗಮಿಸಿದ್ದರು.

ಪಂದ್ಯಾವಳಿಯ ವೇದಿಕೆ ಮೇಲೆ ಯಡಿಯೂರಪ್ಪ ಅವರು ಮಾತನಾಡಿ ಆಸೀನರಾದರು. ಬಳಿಕ ಲಿಂಬಾವಳಿ ಅವರು  ಮಾತನಾಡಲು ಏಳುತ್ತಿದ್ದಂತೆ ಅವರಿಗೆ ರಕ್ತದೊತ್ತಡ ಹೆಚ್ಚಾಗಿ ಮೂರ್ಛೆ ಹೋಗಿ ಕುಸಿದು ಬಿದ್ದರು.

ಈ ವೇಳೆ ಅವರು ಒಳದವಡೆ ಕಚ್ಚಿಕೊಂಡ ಕಾರಣ ಬಾಯಿಂದ ರಕ್ತ ಸುರಿಯಲು ಆರಂಭಿಸಿತು. ಇದರಿಂದ ಪಂದ್ಯಾವಳಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಸಂಘಟಕರು ಮತ್ತು ಪಕ್ಷದ ಕಾರ್ಯಕರ್ತರು ಲಿಂಬಾವಳಿ ಅವರನ್ನು  ಐಟಿಪಿಎಲ್‌ನಲ್ಲಿರುವ ನಾರಾಯಣ ಆಸ್ಪತ್ರೆಗೆ ದಾಖಲಿಸಿದರು.

ಆಸ್ಪತ್ರೆಗೆ ದಾಖಲಾದ ಅರ್ಧಗಂಟೆಯಲ್ಲಿಯೇ ಲಿಂಬಾವಳಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.
ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ  ಯಡಿಯೂರಪ್ಪ ಅವರು ಲಿಂಬಾವಳಿ ಅವರ ಆರೋಗ್ಯ ವಿಚಾರಿಸಿದರು.

‘ಸದ್ಯ ಲಿಂಬಾವಳಿ ಅವರ ದೇಹಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ. ಮಂಗಳವಾರ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ’ ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.