ADVERTISEMENT

ಅರ್ಕಾವತಿ ಪುನಶ್ಚೇತನ- 41 ಕೋಟಿ ಗುಳುಂ?

ಸಮಗ್ರ ತನಿಖೆಗೆ ಆರ್‌ಟಿಐ ಕಾರ್ಯಕರ್ತನ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 20:52 IST
Last Updated 4 ಡಿಸೆಂಬರ್ 2016, 20:52 IST
ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಅರ್ಕಾವತಿ ಪುನಃಶ್ಚೇತನ ಕಾಮಗಾರಿಗೆ ಪಡೆದಿರುವ ಬಿಲ್‌ಗಳ ದಾಖಲೆ ಪ್ರತಿ
ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಅರ್ಕಾವತಿ ಪುನಃಶ್ಚೇತನ ಕಾಮಗಾರಿಗೆ ಪಡೆದಿರುವ ಬಿಲ್‌ಗಳ ದಾಖಲೆ ಪ್ರತಿ   

– ವಡ್ಡನಹಳ್ಳಿ ಭೋಜ್ಯಾನಾಯ್ಕ್

ದೇವನಹಳ್ಳಿ: ತಾಲ್ಲೂಕಿನ ನಂದಿ ತಪ್ಪಲು ಪ್ರದೇಶದಿಂದ ಹರಿದು ಬರುವ ಅರ್ಕಾವತಿ ನದಿ ಪುನಶ್ಚೇತನ ಅಭಿವೃದ್ಧಿಗಾಗಿ ನಡೆದ ಕಾಮಗಾರಿಯಲ್ಲಿ ₹41 ಕೋಟಿಗೂ ಹೆಚ್ಚು  ಅವ್ಯವಹಾರ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ನದಿ ಪುನಶ್ಚೇತನದಿಂದ ನೀರು ಹರಿದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ (ಚಾಮರಾಜ ಸಾಗರ) ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಮತ್ತು ನದಿ ಪಾತ್ರಗಳನ್ನು ಅಭಿವೃದ್ಧಿ ಪಡಿಸಿ ಅಂತರ್ಜಲದ ಮಟ್ಟ ಹೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿತ್ತು.

ನದಿ ವ್ಯಾಪ್ತಿಯ ಸ್ಥಳ ಪರಿಶೀಲಿಸಿ ಸರ್ವೆ ಕೈಗೊಂಡು ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರ ತಿಳಿಸಿತ್ತು. ಅದರನ್ವಯ ಸಂಬಂಧಿಸಿದ ಇಲಾಖೆ 2004 ರಿಂದ 2009ರವರೆಗೆ 6 ವರ್ಷಗಳ ಸರಾಸರಿ ಮಳೆ ಪ್ರಮಾಣವನ್ನು ದೃಢೀಕರಿಸಿ ಪ್ರದೇಶವನ್ನು 1, 2, 3, 4 ಎಂದು ವರ್ಗೀಕರಿಸಿತ್ತು. ಹಂತ 1 ಮತ್ತು 2ರಂತೆ ವಿಂಗಡಣೆ ಮಾಡಿ 2010–11ನೇ ಸಾಲಿನಲ್ಲಿ ₹125 ಲಕ್ಷವನ್ನು ಖರ್ಚು ಮಾಡಿರುವುದಾಗಿ ಸರ್ಕಾರಕ್ಕೆ ವರದಿಯನ್ನು ನೀಡಿದೆ. ನಂತರ ಸರ್ಕಾರ ಅನುದಾನ ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ಕಾಮಗಾರಿ ನಡೆಸುವಂತೆ ಸೂಚಿಸಿದೆ. ಆದರೆ, ಕಾಮಗಾರಿ ನಡೆದಿರುವುದಕ್ಕೆ ಕುರುಹುಗಳೇ ಇಲ್ಲ. ಅರ್ಕಾವತಿ ನದಿ ಪಾತ್ರ ವ್ಯಾಪ್ತಿಯಲ್ಲಿ ಸುತ್ತಾಡಿದರೂ ಹಂತ ಒಂದು (ಫೇಸ್‌ 1) ಮತ್ತು ಎರಡರ ನಾಮಫಲಕ ಬಿಟ್ಟರೆ ಬೇರೇನೂ ಸಿಗುವುದಿಲ್ಲ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.

ಅರ್ಕಾವತಿ ಪುನಃಶ್ಚೇತನ ಯೋಜನೆಯಡಿ ಚಿಕ್ಕಜಾಲ, ದೊಡ್ಡಬಳ್ಳಾಪುರ, ದೊಡ್ಡಬೆಳವಂಗಲ, ಹುಲಿಕುಂಟೆ, ಕನಸವಾಡಿ, ದೇವನಹಳ್ಳಿ ತಾಲ್ಲೂಕಿನ ಕುಂದಾಣ, ನಂದಿಬೆಟ್ಟದ ತಪ್ಪಲು, ಸೊಣ್ಣೇನಹಳ್ಳಿ, ವಿಶ್ವನಾಥಪುರ ಗ್ರಾಮಗಳು, ರಾಮನಾಥಪುರ, ಚಿಕ್ಕೋಬೇನಹಳ್ಳಿ, ನಾಗದೇನಹಳ್ಳಿ, ಲಿಂಗಧೀರಗೊಲ್ಲಹಳ್ಳಿ, ಸೋಲುಕುಂಟೆ, ಅರದೇಶನಹಳ್ಳಿ, ಕಾಮೇನಹಳ್ಳಿ, ಬೆಟ್ಟೇನಹಳ್ಳಿ ಸೇರಿದಂತೆ 24 ಕೆರೆಗಳ ಹೂಳು ತೆಗೆಯಬೇಕಿತ್ತು.

ಅಲ್ಲದೆ ನೀರು ಹರಿದು ಬರುವ ಮಾರ್ಗಗಳನ್ನು ಗಿಡಗಂಟಿಯಿಂದ ಮುಕ್ತಗೊಳಿಸಿ ನೀರು ಸರಾಗವಾಗಿ ಹರಿಯಲು ಕಾಮಗಾರಿ ನಡೆಸಬೇಕಾಗಿತ್ತು. ಆದರೆ ನಾಲ್ಕಾರು ಗಿಡ ಕಡಿದಿದ್ದು ಬಿಟ್ಟರೆ ಒಂದು ದಿನ ಮಾತ್ರ ಜೆಸಿಬಿ ಸದ್ದು ಮಾಡಿದೆ ಎಂದು ಆರೋಪಿಸುತ್ತಾರೆ ರಾಮನಾಥಪುರ ಗ್ರಾಮದ ಮಂಜಣ್ಣ.

‘ಅರ್ಕಾವತಿ ಕಾಮಗಾರಿ ಎಂದು ಇತ್ತೀಚೆಗೆ ಗೊತ್ತಾಗಿದೆ. ಇದರಲ್ಲಿ ಶೇ 10 ರಷ್ಟು ಕೆಲಸ ಆಗಿಲ್ಲ. ಶೇಕಡ 100 ರಷ್ಟು ಬಿಲ್‌ಗಳು ಮಂಜೂರಾಗಿವೆ. . ₹41.88 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆಯೇ ಇಲ್ಲವೇ ಗೊತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಆದಾಯ ತೆರಿಗೆ (ಐಟಿ) ದಾಳಿಗೆ ಒಳಗಾಗಿ ಅಮಾನತುಗೊಂಡಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್‌.ಚಿಕ್ಕರಾಯಪ್ಪ ಅವಧಿಯಲ್ಲೇ ಬಿಲ್‌ಗಳು ಮಂಜೂರಾಗಿವೆ. ಕಾಮಗಾರಿ ನಡೆಸದೆ ನಕಲಿ ಬಿಲ್‌ ಸೃಷ್ಟಿಸಿ ಹಣ ಪಡೆದ ಅನುಮಾನ ಮೂಡುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸುತ್ತಾರೆ ಆರ್‌ಟಿಐ ಕಾರ್ಯಕರ್ತ ಆಂಜಿನಪ್ಪ.

ಅರ್ಕಾವತಿ ಪುನಃಶ್ಚೇತನ ಕಾಮಗಾರಿ ವ್ಯಾಪ್ತಿಯ ಅನೇಕ ಕೆರೆಕುಂಟೆಗಳಲ್ಲಿ ಮರಳು ಫಿಲ್ಟರ್‌, ರಾಷ್ಟ್ರೀಯ ಹೆದ್ದಾರಿ ಅಗಲ ಹೆಚ್ಚಿಸುವುದು, ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಇದನ್ನೇ  ಗುತ್ತಿಗೆದಾರರು ಮತ್ತು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಅಲ್ಲಲ್ಲಿ ಅಳತೆ ಮಾಡಿ ಫೋಟೊ ಪಡೆದು ಬಿಲ್‌ ಮಾಡಿಸಿಕೊಂಡಿದ್ದಾರೆ. ಆದರೆ, ಕೆರೆಗಳಿಗೆ ನೀರು ಸರಾಗ ಹರಿದು ಬರುವ ರಾಜ ಕಾಲು ವೆಗಳನ್ನು ದುರಸ್ತಿ ಮಾಡಿಲ್ಲ  ಎಂದು ಆರೋಪಿಸುತ್ತಾರೆ ವಿಶ್ವನಾಥಪುರ ಗ್ರಾಮದ ನಿವಾಸಿ ಎ.ಶಿವರಾಮಯ್ಯ.

ಅರ್ಕಾವತಿ ನದಿಪಾತ್ರ ನಂದಿ ತಪ್ಪಲು ಪ್ರದೇಶದಿಂದ ದೇವನಹಳ್ಳಿ ದೊಡ್ಡಬಳ್ಳಾಪುರ, ಹೆಸರಘಟ್ಟದ ಮಾರ್ಗವಾಗಿ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೂ 60 ಕಿ.ಮೀ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಮೊದಲ ಹಂತದಲ್ಲಿ 70 ಕೋಟಿಗೂ ಹೆಚ್ಚು ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅದೇನಾಗಿದೆ ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ. ಸಮಗ್ರ ತನಿಖೆಗೆ ಅವರೂ ಆಗ್ರಹಿಸುತ್ತಾರೆ.

***
ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು 2012 ಅಕ್ಟೋಬರ್‌ 22ರಿಂದ 2014ರ ಫೆಬ್ರುವರಿ 7ರ ನಡುವೆ ಒಟ್ಟು ₹41,88,28,244 ಮೊತ್ತದ ಎಂಟು ಬಿಲ್‌ ಮಾಡಲಾಗಿದೆ
-ಆಂಜಿನಪ್ಪ, ಆರ್‌ಟಿಐ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.