ADVERTISEMENT

ಅಸಹಿಷ್ಣುತೆಗೆ ಕೇಂದ್ರದ ನೈತಿಕ ಬೆಂಬಲ

ಪ್ರಸಾದ್ ಉಚ್ಚಂಗಿ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2015, 20:05 IST
Last Updated 26 ಅಕ್ಟೋಬರ್ 2015, 20:05 IST

ಬೆಂಗಳೂರು: ದಾವಣಗೆರೆಯ ಯುವ ಲೇಖಕ ಪ್ರಸಾದ್ ಉಚ್ಚಂಗಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಲೇಖಕರು ಹಾಗೂ ಚಿಂತಕರು ನಗರದ ಪುರಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಾಹಿತಿ ಕೆ. ಮರುಳ ಸಿದ್ದಪ್ಪ, ‘ಕೋಮುವಾದಿಗಳಿಗೆ ಕೇಂದ್ರ ಸರ್ಕಾರದ ನೈತಿಕ ಬೆಂಬಲ ಇರುವುದರಿಂದ, ದೇಶದಲ್ಲಿ ಪ್ರಗತಿಪರರ ಮೇಲಿನ ಹಲ್ಲೆ ಹಾಗೂ ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗುತ್ತಿದೆ’ ಎಂದು ಆರೋಪಿಸಿದರು.

‘ಇತ್ತೀಚೆಗೆ ಕೋಮು ಗಲಭೆ, ದಲಿತರ ಮೇಲಿನ ಹಲ್ಲೆಗಳಂತಹ ಕೃತ್ಯಗಳು ಸಾಮಾನ್ಯವೆಂಬಂತಾಗಿವೆ. ಅಲ್ಲದೆ, ನಾವು ಸೇವಿಸುವ ಆಹಾರ, ಧರಿಸುವ ಬಟ್ಟೆ, ಬರವಣಿಗೆ ಹಾಗೂ ಸ್ನೇಹವನ್ನು ನಿಯಂತ್ರಿಸುವ ಮಟ್ಟಕ್ಕೆ ಕೋಮುವಾದಿಗಳು ಬೆಳೆದಿದ್ದಾರೆ’ ಎಂದು ಹೇಳಿದರು.

‘ಪ್ರಸಾದ್‌ ಮೇಲಿನ ಹಲ್ಲೆಯೂ ಇದೇ ಕಾರಣದ್ದಾಗಿದೆ. ಬೆರಳು ಕತ್ತರಿಸುವ ಪರಂಪರೆ ದ್ವಾಪರಯುಗದಿಂದಲೇ ನಡೆದಿದೆ. ಅಂದು ದ್ರೋಣಾಚಾರ್ಯ ಏಕಲವ್ಯನ ಬೆರಳು ಕಿತ್ತುಕೊಂಡಿದ್ದ. ಆತನಿಗೆ ಆ ಕುರಿತು ಪಾಪಪ್ರಜ್ಞೆ ಕಾಡಿತ್ತು. ಆದರೆ, ಇಂದಿನ ಕೋಮುವಾದಿಗಳಿಗೆ ಅದ್ಯಾವುದೂ ಇಲ್ಲ’ ಎಂದು ಕಿಡಿಕಾರಿದರು.

ವಿಚಾರವಾದಿ ಜಿ.ಕೆ. ಗೋವಿಂದರಾವ್ ಮಾತನಾಡಿ, ‘ಮೋದಿಯ ಮೌನ ಸಮ್ಮತಿಯಿಂದಾಗಿಯೇ, ವಿ.ಕೆ. ಸಿಂಗ್‌ನಂತಹ ಸಚಿವ ದಲಿತರ ಹತ್ಯೆಯನ್ನು ನಾಯಿಗೆ ಹೋಲಿಸುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಇಂತಹ ಅಸಹನೆ ಹೊರ ಹಾಕಿದರೆ, ಇನ್ನು ಕೋಮುವಾದಿಗಳನ್ನು ನಿಯಂತ್ರಿಸಲಾದೀತೆ? ಹೆಚ್ಚುತ್ತಿರುವ ಅಸಹನೆಗೆ ದೇಶದಾದ್ಯಂತ ಪ್ರಗತಿಪರ ಸಂಘಟನೆಗಳು ಒಗ್ಗೂಡಿ, ಕಾರ್ಯತಂತ್ರ ರೂಪಿಸುವುದೊಂದೇ ಪರಿಹಾರ’ ಎಂದರು.

ಚಲನಚಿತ್ರ ನಿರ್ದೇಶಕ ಬಿ. ಸುರೇಶ, ‘ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗೆ ಅಸಹನೆ ಮತ್ತು ಧರ್ಮ ಶ್ರೇಷ್ಠ ಪ್ರಜ್ಞೆಯೇ ಕಾರಣ.  ಅಭಿಪ್ರಾಯಭೇದವಿದ್ದರೂ ಪರಸ್ಪರ ಗೌರವದಿಂದ ಕಾಣಬೇಕು. ಅದೇ ಈ ನೆಲದ ಜೀವಾಳ’ ಎಂದು ತಿಳಿಸಿದರು.

ಸದಾ ವಿದೇಶ ಪ್ರವಾಸದಲ್ಲೇ ಇರುವ ಪ್ರಧಾನಿಗೆ, ದೇಶದೊಳಗೆ ಏನು ನಡೆಯುತ್ತಿದೆ ಎಂಬುದರ ಒಂದಿಂಚೂ ಅರಿವಿಲ್ಲ. ಅಲ್ಲದೆ, ಅದರ ಅಗತ್ಯವೂ ಇಲ್ಲ ಎಂಬಂತಿದೆ ಅವರ ವೈಖರಿ
– 
ಕೆ. ಮರುಳಸಿದ್ದಪ್ಪ,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.