ADVERTISEMENT

ಅಹಿಂಸೆ ಬೋಧಿಸುವ ತಾಣಗಳಿಂದ ಕ್ರೌರ್ಯ

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:40 IST
Last Updated 8 ಫೆಬ್ರುವರಿ 2016, 19:40 IST
ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ತಮ್ಮ ‘ಮಹಾಯಾನ’ ಕಾದಂಬರಿಯನ್ನು ಎಚ್‌.ಎಸ್‌. ದೊರೆಸ್ವಾಮಿ ಅವರಿಗೆ ನೀಡಿದರು. ವಿಮರ್ಶಕ ಪ್ರೊ. ಎಂ.ಎಚ್‌. ಕೃಷ್ಣಯ್ಯ, ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇದ್ದಾರೆ   –ಪ್ರಜಾವಾಣಿ ಚಿತ್ರ
ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ತಮ್ಮ ‘ಮಹಾಯಾನ’ ಕಾದಂಬರಿಯನ್ನು ಎಚ್‌.ಎಸ್‌. ದೊರೆಸ್ವಾಮಿ ಅವರಿಗೆ ನೀಡಿದರು. ವಿಮರ್ಶಕ ಪ್ರೊ. ಎಂ.ಎಚ್‌. ಕೃಷ್ಣಯ್ಯ, ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನೈತಿಕ, ಮಾನವೀಯ ಮೌಲ್ಯಗಳನ್ನು ಬೋಧಿಸುವ ಸ್ಥಳಗಳು ಅನೈತಿಕ, ಅಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡುವ ತಾಣಗಳಾಗಿ ಪರಿವರ್ತನೆ ಹೊಂದಿವೆ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಾಣಗೆರೆ ಪತ್ರಿಕೆ ಪ್ರಕಾಶನ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ ‘ಮಹಾ
ಯಾನ’ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಶಾಂತಿ, ಪ್ರೀತಿಯನ್ನು ಸಾರುವ ಕೇಂದ್ರಗಳು ಅಶಾಂತಿ, ದ್ವೇಷವನ್ನು ಹುಟ್ಟುಹಾಕುವ ಕೇಂದ್ರಗಳಾಗಿ ಮಾರ್ಪಡುತ್ತಿವೆ. ಅಹಿಂಸೆ ಬೋಧಿಸುವ ತಾಣ
ಗಳು ಕ್ರೌರ್ಯವನ್ನು ಬೋಧಿಸುತ್ತಿವೆ.  ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವವರು ಮಾರ್ಗದರ್ಶನ ಮಾಡುವ ಯೋಗ್ಯತೆ ಪಡೆದಿಲ್ಲ. ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಸಾಹಿತ್ಯ ಹಾಗೂ ಹೋರಾಟಕ್ಕೆ ಎಂದಿಗೂ ವೈಯಕ್ತಿಕ ಲಾಲಸೆ ಇರಬಾರದು’ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ‘ರಾಜಕೀಯ ಮೇಲಾಟ, ಆರ್ಭಟ ಹೆಚ್ಚಾಗಿದೆ. ಕೆಲವರು ಸರ್ವಾಧಿಕಾರಿಗಳಾ
ಗಲು ಹೊರಟಿದ್ದಾರೆ. ಅಧಿಕಾರಿಗಳು ತಮ್ಮ ಕಾಲಿಗೆ ಬೀಳಬೇಕು ಎಂಬ ಮನೋಧರ್ಮವನ್ನು ಬೆಳೆಸಿಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಿಮರ್ಶಕ ಬೈರಮಂಗಲ ರಾಮೇಗೌಡ ಮಾತನಾಡಿ, ‘ಗ್ರಾಮ ಭಾರತದ ನೈತಿಕ ಅಧಃಪತನದ ಕುರಿತು ಮಹಾಯಾನ ಕಾದಂಬರಿ ಹೇಳುತ್ತದೆ.  ಗಾಂಧೀಜಿ ಅವರ ತತ್ವಗಳನ್ನು ಮರೆತಿದ್ದೇ ಇಂದಿನ ಸಂಕಟ, ಕ್ಷೋಭೆಗೆ ಕಾರಣ. ಇಂದಿನ ಆಪತ್ತು, ಅಪಾಯಗಳಿಂದ ಬಿಡಿಸಿಕೊಳ್ಳಲು ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಜಾಣಗೆರೆ ವೆಂಕಟರಾಮಯ್ಯ ಅವರು ಪ್ರತಿಪಾದಿಸುತ್ತಾರೆ’ ಎಂದು ಹೇಳಿದರು.

‘ಸಹಪಂಕ್ತಿ ಭೋಜನಕ್ಕೆ ಒಪ್ಪುವುದಿಲ್ಲ’
‘ಅಡ್ಡಪಲ್ಲಕ್ಕಿ, ಗುರುವಂದನೆ ಸ್ವೀಕರಿಸುವ ಸ್ವಾಮೀಜಿಗಳೇ ನಮ್ಮ ನಡುವೆ ಇದ್ದಾರೆ. ಅಸ್ಪೃಶ್ಯತೆ ಬಗ್ಗೆ ಮಾತನಾಡುವ ಪೇಜಾವರ ಸ್ವಾಮೀಜಿ ದಲಿತ ಕೇರಿಗಳಿಗೆ ಭೇಟಿ ನೀಡುತ್ತಾರೆ. ಆದರೆ ಸಹಪಂಕ್ತಿ ಭೋಜನಕ್ಕೆ ಮಾತ್ರ ಒಪ್ಪುವುದಿಲ್ಲ. ವಿಚಾರಣೆಗೆ ಹಾಜರಾಗುವ ಸ್ವಾಮೀಜಿಯೊಬ್ಬರು ಯಾವುದೇ ತಪ್ಪು ಮಾಡಿಲ್ಲವೆಂದೂ ಪೇಜಾವರ ಸ್ವಾಮೀಜಿ ಹೇಳಿಕೆ ನೀಡುತ್ತಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ಹಾಲಂಬಿ ದೂರಿದರು.

‘ಪೇಜಾವರ ಸ್ವಾಮೀಜಿ ಅವರು ಮೌಢ್ಯ ನಿಷೇಧ ವಿಧೇಯಕ ಜಾರಿಗೆ ತರಬಾರದೆಂದು ಒತ್ತಾಯಿಸುತ್ತಾರೆ. ಅವರು ಏನು ಮಾತನಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ಮುಂದಿನ ಅಧಿವೇಶನದಲ್ಲಿ ಮೌಢ್ಯ ನಿಷೇಧ ವಿಧೇಯಕ ಜಾರಿಗೆ ತರಬೇಕು. ಇಲ್ಲವಾದಲ್ಲಿ ನಿಡುಮಾಮಿಡಿ ಸ್ವಾಮೀಜಿ ನೇತೃತ್ವದಲ್ಲಿ ಮತ್ತೊಮ್ಮೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಟ್ಯಂತರ ರೂಪಾಯಿಗಳ ಲೂಟಿ ನಡೆದಿದೆ ಎಂದು ಕಸಾಪ ಚುನಾವಣೆಗೆ ನಿಂತಿರುವ ವಕೀಲರೊಬ್ಬರು ಹೈಕೋರ್ಟ್‌ಗೆ ದೂರು ನೀಡಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಭ್ರಷ್ಟಾಚಾರದ ಬಗ್ಗೆ ಒಂದು ದಾಖಲೆ ತೋರಿಸಲಿ’ ಎಂದು ಸವಾಲು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT