ADVERTISEMENT

‘ಆರಂಭಕ್ಕೆ ಮುನ್ನವೇ ಕಸಾಯಿಖಾನೆಗೆ ಹಣ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 20:00 IST
Last Updated 23 ಮಾರ್ಚ್ 2017, 20:00 IST

ಬೆಂಗಳೂರು:  ‘ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಆರಂಭವಾಗುವ ಮುನ್ನವೇ  ‘ಕ್ಯಾಪ್ರಿ ಮೀಟ್ ಹೌಸ್‌’ ಸಂಸ್ಥೆಗೆ ವಾರ್ಷಿಕ ನಿರ್ವಹಣೆ ಹೆಸರಿನಲ್ಲಿ ₹19.80 ಕೋಟಿ ಪಾವತಿಸಲು ಬಿಬಿಎಂಪಿ ಮುಂದಾಗಿದೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಸಾಯಿಖಾನೆ ಆರಂಭಿಸಲು ಕೆಐಎಡಿಬಿ 2014ರಲ್ಲಿ 35 ಎಕರೆಯನ್ನು ಪಾಲಿಕೆಗೆ ಹಸ್ತಾಂತರಿಸಿತು. ವಿನ್ಯಾಸ, ನಿರ್ಮಾಣ, ನಿರ್ವಹಣೆ ಹಾಗೂ ಹಸ್ತಾಂತರ ಯೋಜನೆಯಡಿ ಇದನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ನಿರ್ಣಯಿಸಿತು. ಚೆನ್ನೈ ಅಬಟೈರ್‌ ಸಂಸ್ಥೆ ತಾಂತ್ರಿಕವಾಗಿ ಹಾಗೂ ಎಸ್‌ಎಜಿಆರ್‌ಆರ್ ಇನ್ಫ್ರಾಸ್ಟ್ರಕ್ಚರ್‌ ಸಂಸ್ಥೆ ಆರ್ಥಿಕವಾಗಿ ನಿರ್ವಹಿಸಲು ಒಪ್ಪಿದವು. ಇದಕ್ಕೆ ವಾರ್ಷಿಕ ನಿರ್ವಹಣೆಗೆ ₹14.25 ಕೋಟಿ ನೀಡಲು ಪಾಲಿಕೆ ಒಪ್ಪಿತು’ ಎಂದರು.

‘ಬಳಿಕ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆಯದೆ  ಈ ಮೊತ್ತವನ್ನು ₹19.80 ಕೋಟಿಗೆ ಏರಿಸಿದರು. ಈ ನಡುವೆ, ಬಂಡವಾಳ ಹೂಡಿಕೆಯ ವಿಷಯದಲ್ಲಿ ಎರಡು ಕಂಪೆನಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು.  ಎಸ್‌ಎಜಿಆರ್ಆರ್‌ ಪಾಲುದಾರಿಕೆಯಿಂದ ಹಿಂದಕ್ಕೆ ಸರಿಯಿತು. ಚೆನ್ನೈ ಕಂಪೆನಿ ತನ್ನ ಹೆಸರನ್ನು ಕ್ಯಾಪ್ರಿ ಮೀಟ್‌ ಹೌಸ್‌ ಎಂದು ಬದಲಿಸಿಕೊಂಡಿತು’ ಎಂದು ಹೇಳಿದರು.
‘ಪಾಲಿಕೆಯ ಅಧಿಕಾರಿಗಳು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಈ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ₹5 ಕೋಟಿ ಪಾವತಿಸಿದ್ದಾರೆ’ ಎಂದರು.

ADVERTISEMENT

‘₹55 ಕೋಟಿ ಸ್ವಂತ ವೆಚ್ಚದಲ್ಲಿ ಮೂಲಸೌಕರ್ಯ, ಕಟ್ಟಡ ಹಾಗೂ ಯಂತ್ರೋಪಕರಣಗಳ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಕರಾರುಪತ್ರದಲ್ಲಿ ತಿಳಿಸಿದ್ದ ಸಂಸ್ಥೆ ಈವರೆಗೂ ನಯಾಪೈಸೆ ಖರ್ಚು ಮಾಡಿಲ್ಲ. ಸಂಸ್ಥೆಯ ಜತೆಗೆ ನಿಯಮಬಾಹಿರವಾಗಿ ಕರಾರು ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥರು ವರದಿ ಸಲ್ಲಿಸಿದ್ದಾರೆ. ಆದರೂ ಮತ್ತೆ ದೊಡ್ಡ ಮೊತ್ತವನ್ನು ಪಾವತಿಸಲು ಪಾಲಿಕೆ ಮುಂದಾಗಿದೆ. ಇದು  ಭ್ರಷ್ಟ ಆಡಳಿತಕ್ಕೆ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.