ADVERTISEMENT

ಆಸ್ತಿ ತೆರಿಗೆ ಸಂಗ್ರಹದಲ್ಲಿ ಅವ್ಯವಹಾರ ಆರೋಪ

ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ: ಮಾಸಿಕ ಸಭೆಯಲ್ಲಿ ಪಾಲಿಕೆ ಆಯುಕ್ತರ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 19:29 IST
Last Updated 28 ಫೆಬ್ರುವರಿ 2015, 19:29 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ವಿಶೇಷ ನೋಟಿಸ್‌ ನೀಡಿ ತೆರಿಗೆ ಸಂಗ್ರಹಿಸುವಲ್ಲಿ ₹ 200 ಕೋಟಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಸದಸ್ಯ ಎಸ್‌.ಹರೀಶ್‌, ಪಾಲಿಕೆಯ ಮಾಸಿಕ ಸಭೆ­ಯಲ್ಲಿ ಆರೋಪಿಸಿದರು.

‘ಅಧಿಕಾರಿಗಳ ಕುತಂತ್ರದಿಂದಾಗಿ ಬಡವರ,  ಮಧ್ಯ­ಮ­­ವರ್ಗದವರ ಶೋಷಣೆ ನಡೆಯು­ತ್ತಿದೆ. ಸ್ವಯಂ ಘೋಷಣೆ ಪದ್ಧತಿಯಡಿ ಆಸ್ತಿ ತೆರಿಗೆ ಕಟ್ಟಿ­ರು­ವು­­ದ­ರಲ್ಲಿ ವ್ಯತ್ಯಾಸವಿದೆ ಎಂದು ಅಮಾ­ಯಕ­ರಿಗೆ ನೋಟಿಸ್‌ ನೀಡಿ ಬಡ್ಡಿ ವಸೂಲಿ ಮಾಡ­ಲಾಗುತ್ತಿದೆ. ಆದರೆ, ಶ್ರೀಮಂತರು, ಬಿಲ್ಡರ್‌­ಗಳಿಗೆ ತೆರಿಗೆ ವಂಚಿಸಲು ಅವ­ಕಾಶ ಮಾಡಿಕೊಡ­ಲಾಗು­ತ್ತಿದೆ’ ಎಂದು ದೂರಿ­ದರು.

‘ಖಾಸಗಿ ಸಂಸ್ಥೆಯೊಂದು ₹ 16 ಕೋಟಿ ಮೋಸ ಮಾಡಿದೆ. ಬಡ್ಡಿ ತೆಗೆದುಕೊಳ್ಳದೆ ತೆರಿಗೆ ಕಟ್ಟಿಸಿ­ಕೊಳ್ಳ­ಲಾಗಿದೆ. ಇದರಲ್ಲಿ ಪಾಲಿಕೆಯ ಅಧಿಕಾರಿ ಶೇಷಾದ್ರಿ ಹಾಗೂ ಕಂದಾಯ ವಿಭಾಗದ ನಾಲ್ವರು ಅಧಿಕಾರಿ­ಗಳು ಭಾಗಿಯಾಗಿರುವ ಸಾಧ್ಯತೆ ಇದೆ. ವಿಶೇಷ ನೋಟಿಸ್‌ ನೀಡುವಲ್ಲಿ -ಅಕ್ರಮ ನಡೆಯು­ತ್ತಿದೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಎಂ.ಲಕ್ಷ್ಮಿ­ನಾರಾ­ಯಣ, ತಪ್ಪೆಸಗಿದ ಅಧಿಕಾರಿಗಳನ್ನು ಅಮಾ­ನತು­ಗೊಳಿಸಿ ಕ್ರಿಮಿನಲ್‌ ಮೊಕ­ದ್ದಮೆ ದಾಖಲಿಸಲಾಗು­ವುದು ಎಂದು ಭರವಸೆ ನೀಡಿದರು. ‘ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಕೆಲ ನ್ಯೂನತೆಗಳಿವೆ. ಅಧಿಕಾರಿಗಳು ಸರಿಯಾಗಿ ಪರಿ­ಶೀಲನೆ ನಡೆಸುತ್ತಿಲ್ಲ’ ಎಂದರು.

ಮಾತೃಇಲಾಖೆಗೆ ಶೇಷಾದ್ರಿ: ಕರ್ತವ್ಯ ನಿರ್ಲಕ್ಷ್ಯದ ದೂರಿನ ಮೇರೆಗೆ ಪಾಲಿಕೆಯ ಮಾಹಿತಿ ತಂತ್ರಜ್ಞಾನ ಸಲಹೆಗಾರ ಶೇಷಾದ್ರಿ ಅವರನ್ನು ಮಾತೃ ಇಲಾಖೆಗೆ ವಾಪಸ್‌ ಕಳುಹಿಸಲು ಆಯುಕ್ತರು ಆದೇಶಿಸಿದರು.

ಬೆಂಗಳೂರು ಕಡೆಗಣನೆ: ‘ಬೆಂಗಳೂರು ವೇಗ­ವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ, ಎಲ್ಲಾ ಸರ್ಕಾರಗಳು ಮಹಾನಗರಿಯನ್ನು ನಿರ್ಲಕ್ಷಿ­ಸು­ತ್ತಿವೆ. ಸರಿಯಾದ ಯೋಜನೆ ರೂಪಿಸು­ವಲ್ಲಿ ಎಡವುತ್ತಿವೆ. ಎಲ್ಲಡೆ ಭ್ರಷ್ಟಾಚಾರ ತಾಂಡವವಾಡು­ತ್ತಿದೆ. ಜನರಿಗೆ ಸಮರ್ಪಕ ಸೌಲಭ್ಯ ಕಲ್ಪಿಸಲು ಸಾಧ್ಯ­ವಾಗುತ್ತಿಲ್ಲ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.­ಅಶ್ವತ್ಥನಾರಾಯಣ ಬೇಸರ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರ ನೇಮಕಕ್ಕೆ ಆಗ್ರಹ
4 ಸಾವಿರ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಬೇಕು ಎಂದು ಆಗ್ರ­ಹಿಸಿ ಬಿಬಿಎಂಪಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಧಿಕಾರಿಗಳ ಹಾಗೂ ಸಮಸ್ತ ನೌಕರರ ಸಂಘ­ದವರು ಪಾಲಿಕೆ ಆವರಣದಲ್ಲಿ ಧರಣಿ ನಡೆಸಿದರು.

ಮೇಯರ್‌ ಎನ್‌.­ಶಾಂತ­ಕುಮಾರಿ, ‘ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾ­ಲೋಚಿಸಿ ನೇಮಕಾತಿಗೆ ಚಾಲನೆ ನೀಡೋಣ’ ಎಂದರು. ಬಳಿಕ ಧರಣಿ ಕೈಬಿಟ್ಟರು.

ಎಂಜಿನಿಯರ್‌ ಜಾನ್‌ ಅಮಾನತು
ಒತ್ತುವರಿ ತೆರವು ಪರಿಶೀಲನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಸ್ಥಾಯಿ ಸಮಿತಿ ಸದಸ್ಯರನ್ನು ಕಾಯಿಸಿ ಅವಮಾನ ಮಾಡಿದ್ದರು ಎನ್ನಲಾದ ಸಿ.ವಿ.ರಾಮನ್‌ನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಜಾನ್‌ ಅವರನ್ನು ಅಮಾನತು ಮಾಡಲಾಗಿದೆ.

‘ಹಳೆ ಮದ್ರಾಸ್ ರಸ್ತೆಯ ಆರ್ಎಂಜಡ್ ಇನ್ಪಿನಿಟಿ ಕಟ್ಟಡದ ಪ್ರವೇಶ­ದ್ವಾರದಲ್ಲಿ ಪಾದ­ಚಾರಿ ಮಾರ್ಗಕ್ಕೆ ಅಡ್ಡವಾಗಿ ತಡೆಗೋಡೆ ನಿರ್ಮಿ­ಸ­ಲಾಗಿದೆ. ಆದರೆ, ತಡೆ­­ಗೋಡೆ ತೆರವು ಕಾರ್ಯಾ­­­ಚರಣೆ ವೇಳೆ ಎಂಜಿನಿಯರ್‌ಗಳು ಹಾಜ­ರಾಗದೆ ಬೇಜವಾಬ್ದಾರಿಯಿಂದ ವರ್ತಿಸಿ­ದ್ದಾರೆ. ಅವರನ್ನು ಸೇವೆ­ಯಿಂದ ಅಮಾನತು­ಗೊಳಿ­ಸ­ಬೇಕು’ ಎಂದು ಸಭೆಯಲ್ಲಿ ಬಿಜೆಪಿ ಸದಸ್ಯ ಎಲ್‌.ರಮೇಶ್‌ ಪಟ್ಟು ಹಿಡಿದರು.

‘ನಿಯಮಬಾಹಿರ ಪ್ರಾಣಿ ವಧೆ’
ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆ­ಗಳಲ್ಲಿ ನಿಯಮಬಾಹಿರವಾಗಿ ಪ್ರಾಣಿ ವಧೆ ಮಾಡ­ಲಾಗು­­ತ್ತಿದೆ ಎಂದು ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌ ಅವರು ಪಾಲಿ­ಕೆಯ ಮಾಸಿಕ ಸಭೆಯಲ್ಲಿ ಆರೋಪಿಸಿದರು.

ADVERTISEMENT

‘ಟ್ಯಾನರಿ ರಸ್ತೆಯಲ್ಲಿರುವ ಕಸಾಯಿಖಾನೆ­ಯಲ್ಲಿ ಪ್ರಾಣಿಗಳ ಸಂರಕ್ಷಣಾ ಕಾಯ್ದೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಸು ಹಾಗೂ ಕರುಗಳನ್ನು ಕ್ರೂರವಾಗಿ ವಧೆ ಮಾಡಲಾಗುತ್ತಿದೆ. ಚಪ್ಪಲಿ  ಹೊಲೆಯಲು ಬಳಸುವ ಮೊಳೆಗಳನ್ನು ಆಹಾರದಲ್ಲಿ ಮಿಶ್ರಣ ಮಾಡಿ ಹಸುಗಳಿಗೆ ತಿನ್ನಿಸಲಾಗು­ತ್ತಿದೆ.

ಅಲ್ಲದೆ, 15 ವರ್ಷಗಳಿಂದ ಕಸಾಯಿ­ಖಾನೆ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ’ ಎಂದು ದೂರಿದರು. ‘ರಾಬರ್ಟ್‌ಸನ್‌ ರಸ್ತೆಯ ಅಶೋಕ ಥಿಯೇ­ಟರ್‌ ಎದುರಿರುವ 39 ಸಾವಿರ ಚದರ ಅಡಿ ವಿಸ್ತೀರ್ಣದ ದೊಡ್ಡಿ ಸ್ವತ್ತಿನ ಮೇಲೆ ಭೂ­ಗಳ್ಳರ ಕಣ್ಣು ಬಿದ್ದಿದೆ. ಪಾಲಿಕೆಯ ಈ ಆಸ್ತಿ­ಯ ದಾಖಲೆ ಕಣ್ಮರೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.