ADVERTISEMENT

ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆ

ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:21 IST
Last Updated 23 ಏಪ್ರಿಲ್ 2017, 20:21 IST

ಬೆಂಗಳೂರು: ಠಾಣೆಗೆ ಬಂದಿದ್ದ ವ್ಯಕ್ತಿ ಹಾಗೂ ಅವರ ಸಹೋದರಿ ಜತೆ ಅನುಚಿತವಾಗಿ ವರ್ತಿಸಿ ಸುಳ್ಳು ಮೊಕದ್ದಮೆ ದಾಖಲಿಸಿಕೊಂಡ ಆರೋಪದಡಿ ಬಸವೇಶ್ವರನಗರ ಠಾಣೆಯ ಇನ್‌ಸ್ಪೆಕ್ಟರ್‌ ಕಲ್ಲಪ್ಪ ಖರಾತ್‌ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. 

ಜ.12ರಂದು ಠಾಣೆಗೆ ನುಗ್ಗಿ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಕೆ. ಕಿರಣ್‌ಕುಮಾರ್‌ (28) ಎಂಬುವರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು.

ಆದರೆ, ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪವೆಸಗಿದ್ದಾರೆ ಎಂದು ಆರೋಪಿಸಿ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಕಿರಣ್‌ಕುಮಾರ್‌ ಸಹೋದರಿ ಕೆ.ರೇಷ್ಮಾ 7 ಪುಟಗಳ ದೂರು ಕೊಟ್ಟಿದ್ದಾರೆ.

ADVERTISEMENT

ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಚಿಕ್ಕಪೇಟೆಯ ಎಸಿಪಿ ಅವರಿಗೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌  ಸೂಚಿಸಿದ್ದಾರೆ.

ದೂರಿನ ವಿವರ: ‘ಕುಟುಂಬದ ಜಾಗದ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಈ ಸಂಬಂಧ ವಕೀಲ ಕಿರಣ್‌ ಅವರಿಗೆ  ಜಾಗದ ದಾಖಲೆಗಳನ್ನು ಕೊಟ್ಟಿದ್ದೆವು.  ಶುಲ್ಕ ಹಾಗೂ ಖರ್ಚು ಸೇರಿ ಲಕ್ಷಾಂತರ ರೂಪಾಯಿ ಪಡೆದಿದ್ದರು. ಅವರು ಈ ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ  ದಾಖಲೆಗಳನ್ನು ಹಿಂತಿರುಗಿಸುವಂತೆ ಕೇಳಿದ್ದೆವು. ಆಗ ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ರೇಷ್ಮಾ ದೂರಿದ್ದಾರೆ.

‘ನಾವು ಹೆಚ್ಚುವರಿ ಹಣ ಕೊಡಲು ಒಪ್ಪಿರಲಿಲ್ಲ. ಕಿರಣ್‌ ಕುಮಾರ್‌ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಕೀಲ ಬಸವೇಶ್ವರನಗರ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ವಿಚಾರಣೆ ನಡೆಸಲು ಸಹೋದರನನ್ನು ಇನ್‌ಸ್ಪೆಕ್ಟರ್‌ ಕಲ್ಲಪ್ಪ,  ಜ. 12ರಂದು ರಾತ್ರಿ 8ಕ್ಕೆ ಠಾಣೆಗೆ ಕರೆಸಿದ್ದರು. ನಾನು ಜತೆಗೆ ಹೋಗಿದ್ದೆ.’

‘ವಕೀಲರು ಕೇಳಿದ್ದಷ್ಟು ಹಣ ಕೊಟ್ಟು ಸಂಧಾನ ಮಾಡಿಕೊಳ್ಳಿ ಎಂದು ಇನ್‌ಸ್ಪೆಕ್ಟರ್‌ ಹೇಳಿದರು. ಆಗ ನಾವು, ‘ಈಗಾಗಲೇ ಶುಲ್ಕ ಕೊಟ್ಟಿದ್ದೇವೆ. ಅವರೇ ಕಿರುಕುಳ ನೀಡುತ್ತಿದ್ದಾರೆ. ಅವರು ಕೊಟ್ಟ ದೂರು ಸಹ ಸುಳ್ಳು’ ಎಂದು  ಹೇಳಿದ್ದೆವು. ಅಷ್ಟಕ್ಕೆ ಕೋಪಗೊಂಡ ಇನ್‌ಸ್ಪೆಕ್ಟರ್‌, ಸಹೋದರನನ್ನು ಎಳೆದಾಡಿದರು. ಅದನ್ನು ಬಿಡಿಸಲು ಹೋದ ನನ್ನನ್ನು ಕೆಲ ಸಿಬ್ಬಂದಿ ಕೊಠಡಿಯಿಂದ ಹೊರಗೆ ಎಳೆದುಕೊಂಡು ಹೋಗಿ ತಳ್ಳಾಡಿದರು.’

‘ಆಗ ನಾನು, ಕುಟುಂಬದ ಆಪ್ತರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ನಸುಕಿನ 3ರವರೆಗೆ ನಮ್ಮನ್ನು ಠಾಣೆಯಲ್ಲಿ ಇಟ್ಟುಕೊಂಡು ಕಿರುಕುಳ ನೀಡಿದರು. ಗಾಯಗೊಂಡಿದ್ದ ನಾನು ನೋವು ತಡೆಯಲಾಗದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದೆ. ಅಷ್ಟರಲ್ಲಿ ಕಿರಣ್‌ಕುಮಾರ್‌ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದ ಬಂಧಿಸಿದ್ದರು’ ಎಂದು ರೇಷ್ಮಾ ಆರೋಪಿಸಿದ್ದಾರೆ.

‘ಪ್ರಕರಣದ ಸತ್ಯಾಂಶವನ್ನು ತಿಳಿಯದೇ ಇನ್‌ಸ್ಪೆಕ್ಟರ್‌, ಪಿಎಸ್‌ಐ ಗೋವಿಂದರಾಜು,  ಕಾನ್‌ಸ್ಟೆಬಲ್‌ ಪಿ.ಎಚ್‌.ರಘು,  ಸಿದ್ದಪ್ಪ ರಾವ್‌, ಗೋಪಾಲ ಅವರು ನಮ್ಮ ಮೇಲೆ ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ನ್ಯಾಯ ಕೊಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಎಸಿಪಿ ತನಿಖೆ ವರದಿ ಆಧರಿಸಿ ಕ್ರಮ

‘ಚಿಕ್ಕಪೇಟೆ ಎಸಿಪಿ ಕೆಲವೇ ದಿನಗಳಲ್ಲಿ ವರದಿ ಸಲ್ಲಿಸಲಿದ್ದಾರೆ. ಇನ್‌ಸ್ಪೆಕ್ಟರ್‌ ಕಲ್ಲಪ್ಪ ಹಾಗೂ ಸಿಬ್ಬಂದಿ ಮೇಲಿನ ಆರೋಪ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.