ADVERTISEMENT

ಈ ವರ್ಷ 3.70 ಲಕ್ಷ ಮನೆ ನಿರ್ಮಾಣ: ಅಂಬರೀಷ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 19:39 IST
Last Updated 23 ಏಪ್ರಿಲ್ 2014, 19:39 IST

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಒಟ್ಟು 3.70 ಲಕ್ಷ ಮನೆಗಳನ್ನು ನಿರ್ಮಿಸ ಲಾಗುವುದು ಎಂದು ವಸತಿ ಸಚಿವ ಎಂ.ಎಚ್‌.ಅಂಬರೀಷ್‌ ಹೇಳಿದರು.

ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013–14ನೇ ಸಾಲಿನಲ್ಲಿ ಮೂರು ಲಕ್ಷ
ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ, ವಾಸ್ತವವಾಗಿ 3,17,485 ಮನೆಗಳನ್ನು ನಿರ್ಮಿಸಲಾಗಿದೆ ಎಂದರು.
2014–15ನೇ ಸಾಲಿನಲ್ಲಿ 3.70 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ 2 ಲಕ್ಷ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.

ರಾಜ್ಯದಲ್ಲಿ 13 ಲಕ್ಷ ಕುಟುಂಬಗಳಿಗೆ ವಸತಿ ಇಲ್ಲ. ನಾಲ್ಕು ವರ್ಷಗಳಲ್ಲಿ ಎಲ್ಲರಿಗೂ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ರಾಜೀವ್‌ ಆವಾಸ್‌ ಯೋಜನೆಯಡಿ 1,347 ಕೋಟಿ ಮೊತ್ತದ 26 ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಶೇ 70ರಷ್ಟು ಹಣವನ್ನು ಕೇಂದ್ರ ಹಾಗೂ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ. ಕೊಳಗೇರಿ ವಾಸಿಗಳಿಗೆ 26,845 ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.

ಟೆಂಡರ್ ಪ್ರಕ್ರಿಯೆ ಶುರುವಾಗಿದ್ದು, ಬೆಂಗಳೂರು ಹಾಗೂ ತುಮಕೂರಿನ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಉಳಿದ ಯೋಜನೆಗಳಿಗೆ ಮೇ ತಿಂಗಳಲ್ಲಿ ಒಪ್ಪಿಗೆ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಎರಡನೇ ಹಂತದಲ್ಲಿ ₨ 777 ಕೋಟಿ ಮೊತ್ತದ 27 ಯೋಜನೆಗಳಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಇದರಡಿ 16,425 ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಬೆಂಗಳೂರಿನ ಸೂರ್ಯನಗರ 4ನೇ ಹಂತದ ಬಡಾವಣೆ ನಿರ್ಮಾಣಕ್ಕೆ 2200 ಎಕರೆ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮೈಸೂರಿನಲ್ಲಿ ಮೂರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲದೆ ಮಂಡ್ಯದ ತೂಬಿನಕೆರೆ ಬಳಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಬಡಾವಣೆ ನಿರ್ಮಾಣ ಮಾಡಲಾಗುವುದು. ಈ ಎಲ್ಲ ಯೋಜನೆಗಳಿಂದ ಒಟ್ಟು ಆರು ಸಾವಿರ ನಿವೇಶನಗಳನ್ನು ಹಂಚಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.