ADVERTISEMENT

ಎಂಜಿನಿಯರ್‌ ಲೋಪ ತನಿಖೆಯಿಂದ ಬಯಲು

ಬೆಂಗಳೂರು – ಎರ್ನಾಕುಲಂ ರೈಲು ದುರಂತ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:43 IST
Last Updated 6 ಮಾರ್ಚ್ 2015, 19:43 IST

ಬೆಂಗಳೂರು: ಹಿಂದಿನ ದಿನವಷ್ಟೇ ಹಳಿಗಳಿಗೆ ವೆಲ್ಡಿಂಗ್ ಮಾಡಿದ್ದರಿಂದ ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀಗೆ ಮಿತಿಗೊಳಿಸುವಂತೆ ಲೋಕೊ ಪೈಲಟ್‌ಗೆ ಸೂಚನೆ ನೀಡದೇ ಇದ್ದದ್ದೇ ಬೆಂಗಳೂರು– ಎರ್ನಾಕುಲಂ ಇಂಟರ್‌­ಸಿಟಿ ಎಕ್ಸ್‌ಪ್ರೆಸ್‌ ರೈಲು (12677) ದುರಂತಕ್ಕೆ ಕಾರಣ ಎಂದು ತನಿಖೆಯಿಂದ ಗೊತ್ತಾಗಿದೆ.

ಆನೇಕಲ್ ಸಮೀಪದ ಬಿದರಗೆರೆ ದಿಣ್ಣೆ ಬಳಿ ಫೆ.13ರಂದು ರೈಲು ಹಳಿ ತಪ್ಪಿ 9 ಪ್ರಯಾಣಿಕರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು. ರೈಲ್ವೆ ಸುರಕ್ಷತೆ ವಿಭಾಗದ ಆಯುಕ್ತ ಸತೀಶ್‌ ಕುಮಾರ್ ಮಿತ್ತಲ್‌ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದು, ವಿಭಾಗೀಯ ಎಂಜಿನಿ­ಯರ್‌­ಗಳ ನಿರ್ಲಕ್ಷ್ಯ ಖಚಿತವಾಗಿದೆ. 

ಆದರೆ, ಇಲಾಖೆಯ ತಾಂತ್ರಿಕ ವಿಭಾ­ಗದ ತಜ್ಞರು ಸಲ್ಲಿಸುವ ವರದಿ­ ನಿರೀಕ್ಷಿ­ಸು­ತ್ತಿರುವ ಪೊಲೀಸರು, ಆ ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿ­ಗಳ ವಿರುದ್ಧ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ. ‘ದುರಂತದ ಹಿಂದಿನ ದಿನ ಹಳಿಗಳ ವೆಲ್ಡಿಂಗ್ ಕೆಲಸ ನಡೆದಿತ್ತು. ಹೀಗಾಗಿ ಆ ಸ್ಥಳದಲ್ಲಿ 30 ಕಿ.ಮೀ ವೇಗದಲ್ಲಿ ರೈಲು ಓಡಿಸುವಂತೆ ಎಂಜಿನಿಯರ್‌ಗಳು ಎಲ್ಲ ಲೋಕೊ ಪೈಲಟ್‌ಗಳಿಗೂ ಸೂಚಿಸ­ಬೇಕಿತ್ತು. 

ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಲೋಕೊ ಪೈಲಟ್ ಫರ್ನಾಂಡಿಸ್,  ಎಂದಿನಂತೆ 65 ಕಿ.ಮೀ ವೇಗದಲ್ಲೇ ರೈಲು ಓಡಿಸಿದ್ದರು. ಇದು ದುರಂತಕ್ಕೆ ಕಾರಣವಾಯಿತು. ಘಟನೆ ನಡೆದಾಗ ರೈಲು ಚಲಿಸುತ್ತಿದ್ದ ವೇಗದ ಮಾಹಿತಿಯು ಲೋಕೊ ಮೀಟರ್‌ನಲ್ಲಿ ದಾಖಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಂಡೆ ಬಿದ್ದಿರಲಿಲ್ಲ: ‘ಹಳಿ ಮೇಲೆ ದೊಡ್ಡ ಬಂಡೆ ಬಿದ್ದಿತ್ತು ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಆ ರೀತಿ ಬಂಡೆ ಬಿದ್ದಿದ್ದರೆ ರೈಲಿನ ಎಂಜಿನ್‌ಗೆ ಪೆಟ್ಟಾಗುತ್ತಿತ್ತು. ಎಂಜಿನ್‌ಗೆ ಸಣ್ಣ ಹಾನಿ ಕೂಡ ಆಗಿಲ್ಲ. ಹೀಗಾಗಿ ಬಂಡೆಯಿಂದ ಈ ಘಟನೆ ಸಂಭವಿಸಿಲ್ಲ ಎಂಬುದು ಖಚಿತವಾಗಿದೆ’ ಎಂದರು.

ಲಖನೌಗೆ ಹಳಿಗಳು
‘ಹಳಿ ದೋಷದಿಂದ ಈ ದುರಂತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ಘಟನಾ ಸ್ಥಳದಿಂದ ತೆರವು­ಗೊಳಿಸಿದ ಹಳಿ­ಗಳನ್ನು ತಪಾಸಣೆಗಾಗಿ ರೈಲು ತಪಾ­ಸಣೆ ಮತ್ತು ಸಂಶೋಧನಾ ಕೇಂದ್ರಕ್ಕೆ (ಆರ್‌ಎಸ್‌ಆರ್‌ಸಿ) ಕಳುಹಿಸ­ಲಾಗಿದೆ. ಅಲ್ಲಿನ ತಜ್ಞರು ಹಳಿ ಪರಿಶೀಲಿಸಿ  15 ದಿನಗಳಲ್ಲಿ ವರದಿ ಕೊಡಲಿದ್ದಾರೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರೈಲ್ವೆ ಇಲಾಖೆಗೆ ಯುವ ಎಸ್ಐಗಳು
ಬೆಂಗಳೂರು: ಹಿರಿಯ ಸಬ್‌ ಇನ್‌ಸ್ಪೆಕ್ಟರ್‌ಗಳ (ಎಸ್‌ಐ) ಕಾರ್ಯ ಸ್ಥಾನ ಎನಿಸಿಕೊಂಡಿದ್ದ ರೈಲ್ವೆ ಪೊಲೀಸ್ ಇಲಾಖೆಗೆ ಸರ್ಕಾರ ಇದೇ ಮೊದಲ ಬಾರಿಗೆ ಯುವ ಎಸ್‌ಐಗಳನ್ನು ನಿಯೋಜಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಸ್ತುತ ನಡೆಯುತ್ತಿರುವ ಎಸ್‌ಐ ನೇಮಕಾತಿಯಲ್ಲಿ ಶೇ 15ರಷ್ಟು ಹುದ್ದೆಗಳನ್ನು ರೈಲ್ವೆ ವಿಭಾಗಕ್ಕೆ ನೀಡಲು ರಾಜ್ಯ ಗೃಹ ಇಲಾಖೆ ಆದೇಶಿಸಿದೆ. ಮೊದಲ ಹಂತವಾಗಿ 15 ಎಸ್‌ಐಗಳು ರೈಲ್ವೆ ಇಲಾಖೆಯಲ್ಲಿ ಸೇವೆ ಆರಂಭಿಸಲಿದ್ದಾರೆ.

‘ನೇರ ನೇಮಕಾತಿ ಮೂಲಕ ಆಯ್ಕೆಯಾದ ಎಸ್‌ಐಗಳಿಗೆ ಮೊದಲ ಬಾರಿಗೆ ರೈಲ್ವೆ ಇಲಾಖೆಯಲ್ಲಿ ಹುದ್ದೆ ನೀಡಲಾಗುತ್ತಿದೆ. ರಾಜ್ಯದಲ್ಲಿ 18 ರೈಲ್ವೆ ಠಾಣೆಗಳಿದ್ದು, ಈಗ ಬರಲಿರುವ ಎಸ್‌ಐಗಳನ್ನು ಸಿಬ್ಬಂದಿ ಕೊರತೆ ಇರುವ ಠಾಣೆಗಳಿಗೆ ನಿಯೋಜಿಸ­ಲಾಗುವುದು. ಈ ಎಸ್‌ಐಗಳು ಇನ್‌ಸ್ಪೆಕ್ಟರ್‌ ಹುದ್ದೆಗೆ ಬಡ್ತಿ ಪಡೆಯುವವರೆಗೂ ರೈಲ್ವೆ ವಿಭಾಗದಲ್ಲೇ ಕೆಲಸ ಮಾಡಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ’ ಎಂದು ರಾಜ್ಯ ಎಸ್ಪಿ ಎಸ್‌.ಎನ್.ಸಿದ್ದರಾಮಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT