ADVERTISEMENT

ಎರವಲು ಅಧಿಕಾರಿಗಳನ್ನು ವಾಪಸ್‌ ಕಳಿಸಿ

ಬಿಬಿಎಂಪಿ ನೌಕರರ ಸಂಘದ ಆಗ್ರಹ: 22ರಂದು ಕೆಲಸ ಸ್ಥಗಿತಗೊಳಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಸರ್ಕಾರದ ವಿವಿಧ ಇಲಾಖೆಗಳಿಂದ ನಿಯೋಜನೆ ಮೇಲೆ ಬಂದಿರುವ ಕೆಎಎಸ್‌ಯೇತರ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವರ್ಗಾಯಿಸಬೇಕು’ ಎಂದು ಆಗ್ರಹಿಸಿ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಸದಸ್ಯರು ಸೆ. ೨೨ರಂದು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ.

ಸಂಘದ ಅಧ್ಯಕ್ಷ ಪಿ. ದಯಾನಂದ್ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದರು. ‘ಕೇಂದ್ರ ಕಚೇರಿ ಮಾತ್ರವಲ್ಲದೆ ಎಲ್ಲ ಎಂಟು ವಲಯ ಕಚೇರಿಗಳಲ್ಲೂ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಬಿಬಿಎಂಪಿ ಆಯಕಟ್ಟಿನ ಸ್ಥಾನದಲ್ಲಿ ಕೆಎಎಸ್‌ಯೇತರ ಅಧಿಕಾರಿಗಳನ್ನು ಉಪ ಆಯುಕ್ತರ ಹುದ್ದೆಗೆ ನಿಯೋಜನೆ ಮಾಡುವ ಮೂಲ ನೌಕರರನ್ನು ಮೂಲೆಗುಂಪು ಮಾಡಲಾಗುತ್ತಿದೆ. ನಗರರಾಭಿವೃದ್ಧಿ ಇಲಾಖೆ ನೇರವಾಗಿ ನಿಯೋಜನೆ ಮಾಡಿ ಆಯುಕ್ತರ ಮೇಲೆ ಸವಾರಿ ಮಾಡುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿದ್ದ ಸಿ.ಟಿ. ಮುದ್ದುಕುಮಾರ್ ಎಂಬುವವರನ್ನು ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರನ್ನಾಗಿ ನಗರಾಭಿವೃದ್ಧಿ ಇಲಾಖೆ ನಿಯೋಜನೆ ಮಾಡಿದೆ. ಆಯುಕ್ತರ ಮೂಲಕ ನಿಯೋಜನೆಗೊಳ್ಳಬೇಕಿದ್ದ ಹುದ್ದೆಗೆ ಈ ಇಲಾಖೆಯೇ ನೇರವಾಗಿ ನೇಮಕ ಮಾಡುವ ಮೂಲಕ ಬಿಬಿಎಂಪಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದೆ’ ಎಂದು ದೂರಿದರು. ‘ಬಿಬಿಎಂಪಿಗೆ ಎರವಲು ಅಧಿಕಾರಿಗಳ ಅಗತ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಎಂಟು ಮಂದಿ ಕೆಎಎಸ್‌ಯೇತರ ಅಧಿಕಾರಿಗಳು ಬಿಬಿಎಂಪಿಯಲ್ಲಿ ಜಂಟಿ ಆಯುಕ್ತರು ಹಾಗೂ ಉಪ ಆಯುಕ್ತರ ಹುದ್ದೆಗೆ ನಿಯೋಜನೆ ಮೇಲಿದ್ದಾರೆ. ಅವರಿಗೆ ಸ್ಥಳೀಯ ಸಂಸ್ಥೆಯ ಬಗ್ಗೆ ಏನೂ ಗೊತ್ತಿಲ್ಲ. ಇದರಿಂದ ಗೊಂದಲಗಳು ಸೃಷ್ಟಿಯಾಗುತ್ತಿವೆ’ ಎಂದು ಹೇಳಿದರು.

‘ನಮ್ಮ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ನಡೆಸಲಿದ್ದೇವೆ’ ಎಂದು ತಿಳಿಸಿದರು.
‘ನಗರಾಭಿವೃದ್ಧಿ ಇಲಾಖೆಯೇ ನೇರವಾಗಿ ಅಧಿಕಾರಿಗಳ ನಿಯೋಜನೆ ಮಾಡುತ್ತಿರುವುದರಿಂದ ಅವರ ಮೇಲೆ ಆಯುಕ್ತರಿಗೆ ಹಿಡಿತ ಸಾಧಿಸುವುದು ಕಷ್ಟವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.