ADVERTISEMENT

ಎಲ್ಲರ ಗಮನ ಸೆಳೆದ ಬೈರಸಂದ್ರ ‘ಕೆರೆ ಹಬ್ಬ’

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2015, 20:00 IST
Last Updated 28 ನವೆಂಬರ್ 2015, 20:00 IST

ಬೆಂಗಳೂರು: ನಮ್ಮ ಬೆಂಗಳೂರು ಫೌಂಡೇಷನ್‌  ಮತ್ತು ಆರ್‌ಬಿಐ ಕಾಲೊನಿಯ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಬೈರಸಂದ್ರ ಕೆರೆ ಆವರಣದಲ್ಲಿ ಶನಿವಾರ ‘ಕೆರೆ ಹಬ್ಬ’ವನ್ನು ಆಯೋಜಿಸಲಾಗಿತ್ತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಸಿ ನೆಡುವ ಮೂಲಕ ಕೆರೆ ಹಬ್ಬಕ್ಕೆ ಚಾಲನೆ ನೀಡಿದರು. ಮೇಯರ್‌ ಬಿ.ಎನ್.ಮಂಜುನಾಥ್‌ ರೆಡ್ಡಿ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅವರು ಹಾಜರಿದ್ದರು.

ಕೆರೆ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ನೃತ್ಯ, ಸುಗಮ ಸಂಗೀತ ಕಾರ್ಯಕ್ರಮ ಜನರನ್ನು ರಂಜಿಸಿದವು. ಅಲ್ಲದೇ,  ಚಿತ್ರಕಲಾ ಸ್ಪರ್ಧೆ, ನಡಿಗೆ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ನಮ್ಮ ಬೆಂಗಳೂರು ಫೌಂಡೇಷನ್ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ, ‘ಕೆರೆಹಬ್ಬ ಸರಣಿಯ ಮೂಲಕ ಜನರಿಗೆ ಮನರಂಜನೆ ನೀಡುವ ಜತೆಗೆ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ವರ್ಷಕ್ಕೆ 12 ಕೆರೆಗಳಂತೆ ಮುಂದಿನ ಐದು ವರ್ಷಗಳಲ್ಲಿ 60 ಕೆರೆಗಳ ಆವರಣದಲ್ಲಿ ಹಬ್ಬ ಆಚರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಬೈರಸಂದ್ರ ಕೆರೆ ಉಳಿಸುವಲ್ಲಿ ಕೆರೆ ಸುತ್ತಮುತ್ತಲಿನ ನಿವಾಸಿಗಳ ಪಾತ್ರ ಹೆಚ್ಚಿದೆ. ಆರ್‌ಬಿಐ ಕಾಲೊನಿ ನಿವಾಸಿಗಳು ಹೋರಾಟ ನಡೆಸದಿದ್ದರೆ ಬೈರಸಂದ್ರ ಕೆರೆ ಭೂಗಳ್ಳರ ಪಾಲಾಗುತ್ತಿತ್ತು ಎಂದರು.

ಆರ್‌ಬಿಐ ಕಾಲೊನಿಯ ವೆಂಕಟಸುಬ್ಬರಾವ್‌, ‘ನಗರದ ಬಹುತೇಕ ಕೆರೆಗಳು ಇಂದು ವಿನಾಶದ ಅಂಚಿನಲ್ಲಿವೆ. ತ್ಯಾಜ್ಯ, ಚರಂಡಿ ನೀರು, ವಿಷಯುಕ್ತ ರಾಸಾಯನಿಕಗಳನ್ನು ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲದೇ, ಬಹುತೇಕ ಕೆರೆಗಳ ಜಾಗವನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದರು.

ಕೆರಗಳ ರಕ್ಷಣೆಗಾಗಿ ನಗರದ ನಾಗರಿಕರು ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.