ADVERTISEMENT

ಎಲ್ಲಾ ನ್ಯಾಯಮಂಡಳಿಗಳೂ ಚೆನ್ನೈಗೆ ಏಕೆ?

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 20:10 IST
Last Updated 15 ಸೆಪ್ಟೆಂಬರ್ 2014, 20:10 IST

ಬೆಂಗಳೂರು: ‘ಚೆನ್ನೈನಲ್ಲಿರುವ ಎಂಟು ನ್ಯಾಯಮಂಡಳಿಗಳಲ್ಲಿ ಕೆಲವನ್ನಾದರೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ವರ್ಗ ಮಾಡಬೇಕು’ ಎಂದು ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್‌ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿರುವ ಅವರು, ‘ದೆಹಲಿ, ಮುಂಬೈ, ಮತ್ತು ಚೆನ್ನೈನಲ್ಲಿರುವ ನ್ಯಾಯಮಂಡಳಿಗಳಿಗೆ ಹೋಗುವುದು ಕಕ್ಷಿದಾರರ ಪಾಲಿಗೆ ತ್ರಾಸದಾಯಕ ಎನಿಸಿದೆ. ಉದ್ಯಮ ಮತ್ತು ವಾಣಿಜ್ಯ ಪ್ರಕರಣಗಳ ನ್ಯಾಯಮಂಡಳಿಯ ಕಕ್ಷಿದಾರರು ತಾವು ಭರಿಸುವ ಭಾರಿ ವೆಚ್ಚವನ್ನು ಜನಸಾಮಾನ್ಯರ ಜೇಬಿಗೇ ವರ್ಗಾಯಿಸುತ್ತಾರೆ. ಹೀಗಾಗಿ ಪ್ರಕರಣಗಳ ಪ್ರಮಾಣ ಮತ್ತು ಅನಿವಾರ್ಯತೆಯನ್ನು ಅನುಸರಿಸಿ ದಕ್ಷಿಣ ಭಾರತದ ಒಂದೊಂದು ರಾಜ್ಯಕ್ಕೆ ಒಂದೊಂದು ನ್ಯಾಯಮಂಡಳಿಗಳನ್ನು ನೀಡುವಂತಾಗಬೇಕು. ಇದು ಆರ್ಥಿಕವಾಗಿ ತುಸು ಹೊರೆ ಎನಿಸಿದರೂ ಕಕ್ಷಿದಾರರ ಹಿತದೃಷ್ಟಿಯಿಂದ ತುಂಬಾ ಅನಿವಾರ್ಯ’ ಎಂದು 

‘ವಕೀಲರ ಅವ್ಯಕ್ತ ಸಂಕಟ’
‘ಚೆನ್ನೈನಲ್ಲಿ ನಮ್ಮ ರಾಜ್ಯದ ವಕೀಲರು ಮತ್ತು ಕಕ್ಷಿದಾರರು ಹೇಳಿಕೊಳ್ಳಲಾಗದ ಸಂಕಟ ಅನು­ಭವಿಸುತ್ತಿದ್ದಾರೆ. ಅಲ್ಲಿಗೆ ಹೋಗುವ ನಮ್ಮ ವಕೀಲರು ಮತ್ತು ಕಕ್ಷಿದಾರ­ರನ್ನು ಕೀಳಾಗಿ ಕಾಣಲಾಗುತ್ತಿದೆ.  ನಮ್ಮ ಪಾಲಿಗೆ ಮರ್ಯಾದೆ ಎಂಬುದು ಮರೀಚಿಕೆಯಾಗಿದೆ. ನ್ಯಾಯ ಕೇಳುವವರ ಆತ್ಮಗೌರವಕ್ಕೆ ಧಕ್ಕೆ ಉಂಟಾದರೆ ಅದನ್ನು ಸಹಿಸಿಕೊಳ್ಳುವುದಾದರೂ ಹೇಗೆ’ ಎಂದು ರಂಗನಾಥ್ ಪ್ರಶ್ನಿಸಿದ್ದಾರೆ.

ಪ್ರತಿಪಾದಿಸಿದ್ದಾರೆ.

‘ನ್ಯಾಯಮೂರ್ತಿ ವಾಧ್ವಾ ಅವರ ಕಾಲದಲ್ಲಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬೆಂಗಳೂರಿನಲ್ಲಿ ಆಗಾಗ್ಗೆ ಕಾರ್ಯ ನಿರ್ವಹಿಸುತ್ತಿತ್ತು. ಈಗ ಅದೂ ಸ್ಥಗಿತಗೊಂಡಿದೆ. ಆದ್ದರಿಂದ ಈ ಆಯೋಗದ ಕೇಂದ್ರವು ಬೆಂಗಳೂರಿಗೇ ಬರುವಂತಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ವೀರಪ್ಪ ಮೊಯಿಲಿ ಅವರು ಕೇಂದ್ರ  ಕಾನೂನು ಸಚಿವರಾಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕಂಪೆನಿ ಕಾನೂನು ಮಂಡಳಿ ಸ್ಥಾಪಿಸುವ ಭರವಸೆ ದೊರೆತಿತ್ತು. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಆದರೆ ಇದು ಈತನಕ ಬಿಸಿಲುಗುದುರೆಯಾಗಿಯೇ ಉಳಿದಿದೆ. ಬೆಂಗಳೂರು ನಗರವು ಬೌದ್ಧಿಕ ಆಸ್ತಿ ಹಕ್ಕು, ಇಂಧನ ಕಾನೂನು, ಸೈಬರ್‌ ಕಾನೂನು, ಕಂಪೆನಿ ಕಾನೂನು... ಇತ್ಯಾದಿ ಕ್ಷೇತ್ರಗಳಲ್ಲಿ ಸಾಕಷ್ಟು ಛಾಪು ಮೂಡಿಸಿದೆ. ಆದರೆ ಈ ವಿಷಯಗಳಿಗೆ ಸಂಬಂಧಿಸಿದ ಯಾವೊಂದು ನ್ಯಾಯಮಂಡಳಿಗಳೂ ಇಲ್ಲಿಲ್ಲ’ ಎಂದು ಅವರು ಪತ್ರದಲ್ಲಿ ಪ್ರಧಾನಿಯವರ ಗಮನ ಸೆಳೆದಿದ್ದಾರೆ.

15 ಕೋಟಿ ಮೀರುವ ವ್ಯಾಜ್ಯಗಳು: ‘
2040ರ ವೇಳೆಗೆ ನ್ಯಾಯಾಲಯಗಳಲ್ಲಿನ ಒಟ್ಟು ಮೊಕದ್ದಮೆಗಳ ಸಂಖ್ಯೆ 15 ಕೋಟಿ ಮುಟ್ಟಲಿದೆ ಎಂಬ ಅಂಶವು ಆತಂಕದ ವಿಚಾರ. ಕೆಲವು ವಿಶೇಷ ಕ್ಷೇತ್ರಗಳ ವ್ಯಾಜ್ಯಗಳನ್ನು ಬಗೆಹರಿಸುವ ಸಲುವಾಗಿಯೇ ರಚನೆಯಾದ ಈ ನ್ಯಾಯಮಂಡಳಿಗಳು ಒಂದೇ ಕಡೆ ಕೇಂದ್ರೀಕೃತವಾದರೆ ಹೇಗೆ? ಅಲ್ಲದೆ ಇವುಗಳ ಶುಲ್ಕವೂ ದುಬಾರಿ.  ಇದರಿಂದಾಗಿ ಇವುಗಳ ರಚನೆಯ ಮೂಲ ಉದ್ದೇಶವೇ ಈಡೇರಿದಂತಾಗುವುದಿಲ್ಲ’    ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT