ADVERTISEMENT

ಎಸ್‌ಎಫ್‌ಐ ಪ್ರತಿಭಟನೆ: ಲಾಠಿ ಪ್ರಹಾರ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 20:31 IST
Last Updated 30 ಜನವರಿ 2015, 20:31 IST

ಬೆಂಗಳೂರು: ಸರ್ಕಾರಿ ವಿದ್ಯಾರ್ಥಿ­ನಿಲಯಗಳನ್ನು ಸುಧಾ­ರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲೆತ್ನಿಸಿದ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಬಂಧಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದ ಎಸ್‌ಎಫ್‌ಐ ಸದಸ್ಯರು ಶುಕ್ರವಾರ ಮಧ್ಯಾಹ್ನ ನಗರ ರೈಲು ನಿಲ್ದಾಣದಿಂದ ರ್‌್ಯಾಲಿ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು.

ಆದರೆ, ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ಜಂಕ್ಷನ್‌ ಬಳಿ ಪೊಲೀಸರು ಪ್ರತಿಭಟನಾ­ಕಾರರನ್ನು ತಡೆದರು. ನಂತರ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತ ಪ್ರತಿಭಟನಾ­ಕಾರರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ­ಪ್ರಕಾಶ್‌ ಪಾಟೀಲ್‌ ಅವರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದರು. ಆದರೆ, ಸಚಿವರು ಸ್ಥಳಕ್ಕೆ ಬರಲಿಲ್ಲ.

ಇದರಿಂದ ಆಕ್ರೋಶಗೊಂಡ ಪ್ರತಿಭಟನಾ­ನಿರತರು ಪೊಲೀಸರೊಂದಿಗೆ ವಾಗ್ವಾದ ನಡೆಸಿ, ರ್‌್ಯಾಲಿ ಮುಂದುವರಿಸಲು ಯತ್ನಿಸಿದರು. ಈ ವೇಳೆ ಪರಸ್ಪರ ತಳ್ಳಾಟ ಉಂಟಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಈ ಹಂತದಲ್ಲಿ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು. ಅಲ್ಲದೇ, 56 ಮಂದಿ ಸದಸ್ಯರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದರು.

ನಂತರ ಸಂಜೆ ವೇಳೆಗೆ ಸ್ಥಳಕ್ಕೆ ಬಂದ ಸಚಿವರಾದ ಶರಣಪ್ರಕಾಶ್‌ ಪಾಟೀಲ್‌ ಮತ್ತು ಕಿಮ್ಮನೆ ರತ್ನಾಕರ್‌ ಅವರು ಬೇಡಿಕೆಗಳ ಸಂಬಂಧ ಎಸ್‌ಎಫ್‌ಐ ಸದಸ್ಯರೊಂದಿಗೆ ಫೆ.6ರಂದು ಸಭೆ ನಡೆಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ 30ರಷ್ಟು ಅನುದಾನ ಮೀಸಲಿಡಬೇಕು. ಸರ್ಕಾರಿ ವಿದ್ಯಾರ್ಥಿನಿಲಯ ಗಳಲ್ಲಿನ ಪ್ರತಿ ವಿದ್ಯಾರ್ಥಿಗೆ ಮಾಸಿಕ ₨ 3,500 ಆಹಾರ ಭತ್ಯೆ ನೀಡಬೇಕು. 2006ರ ವೃತ್ತಿ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು. ಬಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ಪ್ರವೇಶ ಶುಲ್ಕದಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಲಾಠಿ ಪ್ರಹಾರದ ವೇಳೆ ಎಸ್‌ಎಫ್‌ಐ ಸದಸ್ಯರಾದ ಪೂಜಾ, ಗೌತಮಿ, ಶಂಕರ್‌ ಮತ್ತು ಅಮರೇಶ್‌ ಎಂಬುವರು ಗಾಯಗೊಂಡಿದ್ದಾರೆ. ಬಂಧಿತ ಸದಸ್ಯರನ್ನು ಸಂಜೆ ವೇಳೆಗೆ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.