ADVERTISEMENT

ಏಳೂವರೆ ನಿಮಿಷದಲ್ಲೇ 295 ಅರ್ಜಿ!

ರೈತರ ಜಮೀನಲ್ಲಿ ಸೌರ ವಿದ್ಯುತ್‌ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2014, 19:30 IST
Last Updated 9 ಅಕ್ಟೋಬರ್ 2014, 19:30 IST

ಬೆಂಗಳೂರು: ಸೌರ ವಿದ್ಯುತ್‌ ಉತ್ಪಾ­ದನೆ­ಗಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮ ಗುರುವಾರ ನಡೆಸಿದ  ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕಾರ ಪ್ರಕ್ರಿಯೆ ಕೇವಲ ಏಳೂವರೆ ನಿಮಿಷದಲ್ಲೇ ಪೂರ್ಣಗೊಂಡಿದೆ. ಕಿರು ಅವಧಿಯಲ್ಲೇ 295 ರೈತರು ಅರ್ಜಿ ಸಲ್ಲಿಸಿದ್ದಾರೆ!

ಮೂರು ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗಾಗಿ ತುಮಕೂರಿನ ಚಿಕ್ಕಹಳ್ಳಿಯ ಎಚ್‌.ವಿ. ಚೌಧರಿ ಅರ್ಜಿ ಸಲ್ಲಿ­ಸಿದ್ದು ಬೆಳಿಗ್ಗೆ 11 ಗಂಟೆ 23 ಸೆಕೆಂಡ್‌ಗೆ. ಮಂಡ್ಯದ ಮೆಳ್ಳ­ಹಳ್ಳಿಯ ಭಾರತಿ ಎಜುಕೇಶನ್‌ ಟ್ರಸ್ಟ್‌ನವರು ಮೂರು ಮೆಗಾ­ವಾಟ್‌ ಸೌರ ವಿದ್ಯುತ್‌ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದು 11 ಗಂಟೆ ಏಳು ನಿಮಿಷ 25 ಸೆಕೆಂಡ್‌ಗೆ!

ಇಂಧನ ಇಲಾಖೆ ಇತ್ತೀಚೆಗೆ ಪರಿಷ್ಕೃತ ಸೌರ ನೀತಿಯನ್ನು (2014–2021) ಪ್ರಕಟಿಸಿತ್ತು. ಈ ನೀತಿಯನ್ನು ಪರಿಣಾಮ­ಕಾರಿ­ಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ 2014–21ರ ಅವಧಿಯಲ್ಲಿ 300 ಮೆಗಾವಾಟ್‌ ಸೌರವಿದ್ಯುತ್‌ ಉತ್ಪಾ­ದಿಸುವ ಗುರಿ ಹೊಂದಿತ್ತು.

ಐದು ಎಕರೆ ಜಾಗ ಹೊಂದಿರುವವರು ಒಂದು ಮೆಗಾವಾಟ್‌ ಸೌರ ವಿದ್ಯುತ್‌ ಉತ್ಪಾದಿಸಬಹುದು. ಜಮೀನಿನಲ್ಲಿ ಗರಿಷ್ಠ ಮೂರು ಮೆಗಾ­ವಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶ ಕಲ್ಪಿಸಿ ಇಂಧನ ಇಲಾಖೆ ಆದೇಶ ಹೊರಡಿಸಿತ್ತು.

ಇದಕ್ಕಾಗಿ ಆನ್‌ಲೈನ್‌ ಅರ್ಜಿ ಪ್ರಕ್ರಿಯೆ ನಡೆಸಿತ್ತು. ಅರ್ಜಿ ಸಲ್ಲಿಸಲು ಉತ್ಸುಕರಾಗಿದ್ದ ನೂರಾರು ಮಂದಿ ಈ ಕ್ಷಿಪ್ರ­ಗತಿಯ ಪ್ರಕ್ರಿಯೆಯಿಂದ ನಿರಾಸೆಯಿಂದ ಮರಳಬೇಕಾಯಿತು. ‘ಮೊದಲೇ ತಮಗೆ ಬೇಕಾದವರ ಪಟ್ಟಿ ಸಿದ್ಧಪಡಿಸಿಕೊಂಡು ಅದರ ಪ್ರಕಾರ ಅರ್ಜಿಯನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ. ಕಾಟಾಚಾರಕ್ಕೆ ಪ್ರಕ್ರಿಯೆ ನಡೆಸ­ಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.

‘ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 10 ಹಂತದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಈ ಅರ್ಜಿಯನ್ನು ತುಂಬಲು ಕನಿಷ್ಠ 5ರಿಂದ 10 ನಿಮಿಷ ಬೇಕು. ನಾನು ಉತ್ಸು­ಕತೆ­ಯಿಂದ 10.45ಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಲು ಆರಂಭಿಸಿದೆ. 11.10ಕ್ಕೆ ಅರ್ಜಿ ಭರ್ತಿಯಾ­ಯಿತು. ಅಪ್‌ಲೋಡ್‌ ಮಾಡಲು ಪ್ರಯತ್ನಿಸಿದೆ. ಅರ್ಜಿ ಸ್ವೀಕಾರ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂಬ ಉತ್ತರ ಬಂತು. ಆಘಾತಕ್ಕೆ ಒಳಗಾದೆ’ ಎಂದು ಆಕಾಂಕ್ಷಿ ಡಾ. ಉಮೇಶ್‌  ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂತ್ರಜ್ಞಾನ ಪರಿಣಿತನಿಗೂ ಅರ್ಜಿ ತುಂಬಲು ಕನಿಷ್ಠ 5 ನಿಮಿಷ­ವಾದರೂ ಬೇಕು. ಆದರೆ, ಆನ್‌ಲೈನ್‌ ವೇಗ  ನೋಡಿ ಅಚ್ಚರಿ ಆಗಿದೆ. ಪವಾಡ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದು ತಿಳಿಸಿದರು. ಬಳಿಕ 20 ನಿಮಿಷ­ಗಳಲ್ಲೇ ನಿಗಮವು 295 ಅರ್ಜಿದಾರರ ಹೆಸರು, ವಿಳಾಸ ಸೇರಿದಂತೆ ಸಮಗ್ರ ಮಾಹಿತಿಯನ್ನು solar.karnataka.gov.in ­ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. ಪ್ರತಿಕ್ರಿಯೆಗಾಗಿ ನಿಗಮದ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

ಪಟ್ಟಿ ಸಾಚಾತನ: ಅನುಮಾನ
ಪಟ್ಟಿಯ ಸಾಚಾತನದ ಬಗ್ಗೆಯೇ ಅನುಮಾನ ಮೂಡಿದೆ. ಈ ಪಟ್ಟಿಯ­ಲ್ಲಿದ್ದ ತುಮಕೂರು ಹುಲಿ­ಕುಂಟೆಯ ನಿವಾಸಿ ಸಿ.ಎಸ್‌.ನಂಜುಂಡಯ್ಯ ಅವರನ್ನು ಮಾತನಾಡಿಸಿದಾಗ, ‘ಯಾವ ಅರ್ಜಿ? ನನಗೆ ವಿಷಯವೇ ಗೊತ್ತಿಲ್ಲ. ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನನ್ನನ್ನು ಬಿಟ್ಟು ಬಿಡಿ’ ಎಂದು ವಿನಂತಿಸಿ­ದರು. ಅವರು 12 ಎಕರೆ ಜಮೀನು ಹೊಂದಿದ್ದು, ಎರಡು ಮೆಗಾ­ವಾಟ್‌ ವಿದ್ಯುತ್‌ ಉತ್ಪಾದಿಸಲು ಉತ್ಸುಕರಾಗಿದ್ದಾರೆ ಎಂದು ಪ್ರಕಟಿಸಲಾ­ಗಿತ್ತು.

‘ಬೇರೆಯವರ ಜತೆ ಮಾತುಕತೆ ಆಗಿದೆ. ಕಮಿಟ್‌­ಮೆಂಟ್‌ ಆಗಿದೆ. ಈ ವಿಷಯ ಬಿಡಿ ಸಾರ್‌’ ಎಂದು ಅರ್ಜಿದಾರರಾದ ಜಗಳೂರಿನ ಎಂ. ಹನುಮಂತ ಪ್ರತಿ­ಕ್ರಿಯಿಸಿದರು.

‘ನಾನಂತೂ ಅರ್ಜಿಯೇ ಹಾಕಿಲ್ಲ. ಮನೆಯಿಂದ ಹೊರಗಿದ್ದೇನೆ. ಈ ಹಿಂದೆ ಸೌರವಿದ್ಯುತ್‌ ಘಟಕ ಸ್ಥಾಪಿಸ­ಬೇಕು ಎಂದು ಬೆಂಗಳೂರಿನ ಗೆಳೆಯನ ಜತೆ ಚರ್ಚಿಸಿದ್ದೆ.  ವಿಚಾರಿಸಿ ಹೇಳುತ್ತೇನೆ’ ಎಂದು ಗುಲ್ಬರ್ಗದ ಜಾಗೀರ ವೆಂಕಟಾ­ಪುರದ ಮನಿಷ್‌ ಮಲ್ಲಿಕಾರ್ಜುನ ಗೌಡ ಉತ್ತರಿಸಿದರು. ಅವರು 19 ಎಕರೆ ಜಾಗ  ಹೊಂದಿದ್ದು, ಮೂರು ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಆಸಕ್ತಿ ಹೊಂದಿದ್ದಾರೆ ಎಂದು ಪ್ರಕಟಿಸಲಾಗಿತ್ತು.

ಇದೇ ರೀತಿ ಪಟ್ಟಿಯಲ್ಲಿದ್ದ ಅನೇಕ ರೈತರನ್ನು ಸಂಪರ್ಕಿ­ಸಲು ಯತ್ನಿಸ­ಲಾಯಿತು. ಕರೆಗೆ ಸಿಕ್ಕ ಇಬ್ಬರು ರೈತರು, ‘ಪ್ರಕ್ರಿಯೆ ಅದ್ಭುತವಾಗಿ ನಡೆದಿದೆ. ಎರಡೇ ನಿಮಿಷದಲ್ಲಿ ಅರ್ಜಿ ಹಾಕಿದೆ. ಇಲಾಖೆ ಅತ್ಯುತ್ತಮ ಕೆಲಸ ಮಾಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು. ಕೆಲವು ಕರೆಗಳಿಗೆ ‘ನೀವು ರಾಂಗ್‌ ನಂಬರ್‌ಗೆ ಕರೆ ಮಾಡಿದ್ದೀರಿ’ ಎಂಬ ಉತ್ತರ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT