ADVERTISEMENT

ಏ.1 ರಿಂದ ಸರಕು ಸಾಗಣೆ ವಾಹನ ಮುಷ್ಕರ

ವಾಣಿಜ್ಯ ವಾಹನಗಳ ವಿಮೆ ಮೊತ್ತದ ಹೆಚ್ಚಳಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:38 IST
Last Updated 24 ಮಾರ್ಚ್ 2017, 20:38 IST

ಬೆಂಗಳೂರು: ವಾಣಿಜ್ಯ ವಾಹನಗಳ  ವಿಮೆ ಮೊತ್ತವನ್ನು (ಥರ್ಡ್‌್ ಪಾರ್ಟಿ ಪ್ರೀಮಿಯಂ) ಶೇ 50ರಷ್ಟು ಹೆಚ್ಚಿಸಲು ಮುಂದಾಗಿರುವುದನ್ನು ವಿರೋಧಿಸಿ ಏಪ್ರಿಲ್‌ ಒಂದರಿಂದ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ನಡೆಸಲು ಅಖಿಲ ಭಾರತ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟ ನಿರ್ಧರಿಸಿದೆ.

ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ‘ಇನ್ಸೂರೆನ್ಸ್‌ ಡೆವಲಪ್‌ಮೆಂಟ್‌ ಅಥಾರಿಟಿ ಆಫ್‌ ಇಂಡಿಯಾ (ಐಆರ್‌ಡಿಎಐ) ಸಂಸ್ಥೆಯು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರೀಮಿಯಂ ಮೊತ್ತವನ್ನು ಶೇ 50 ರಷ್ಟು ಹೆಚ್ಚಿಸಲು ಮುಂದಾಗಿದೆ. ಇದರಿಂದ ವಾಹನಗಳ ಮಾಲೀಕರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ’ ಎಂದರು.

‘ಭಾರಿ ವಾಹನವೊಂದು ಒಂದು ಕಿ.ಮೀ. ಕ್ರಮಿಸಲು ₹ 35 ವೆಚ್ಚವಾಗುತ್ತಿದೆ. ಅದರಲ್ಲಿ ಇಂಧನ, ಟೋಲ್‌ ಶುಲ್ಕ, ತೆರಿಗೆ, ಬಿಡಿಭಾಗಗಳ ನಿರ್ವಹಣೆ, ಚಾಲಕ ಮತ್ತು ಸಹಾಯಕರ ಸಂಬಳವೂ ಸೇರಿದೆ. ಪರಿಷ್ಕೃತ ವಿಮಾ ಮೊತ್ತ ಜಾರಿಯಾದರೆ ಲಾರಿ ಮಾಲೀಕರು ವಾಹನಗಳ ಸಾಮರ್ಥ್ಯ ಆಧರಿಸಿ ವಿಮೆಯ ಕಂತಾಗಿ ಕನಿಷ್ಠ ₹ 17 ಸಾವಿರದಿಂದ ಗರಿಷ್ಠ ₹ 45 ಸಾವಿರ ಪಾವತಿಸಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿರುವ 7.5 ಲಕ್ಷ ವಾಹನಗಳು ಸೇರಿದಂತೆ ದೇಶದಲ್ಲಿನ 94 ಲಕ್ಷ ಸರಕು ಸಾಗಣೆ ವಾಹನಗಳು ಮುಷ್ಕರದಲ್ಲಿ ಭಾಗಿಯಾಗಲಿವೆ’ ಎಂದರು. ‘ವಿಮಾ ಕ್ಷೇತ್ರವನ್ನು ಖಾಸಗೀಕರಣ ಮಾಡಲಾಗಿದೆ. ಹಾಗಾಗಿ ವಿಮೆಯ ಕಂತಿನ ಮೊತ್ತವನ್ನು ನಿಗದಿಪಡಿಸುವ ಅಧಿಕಾರವನ್ನು ಖಾಸಗಿ ಕಂಪೆನಿಗಳಿಗೆ ನೀಡಬೇಕು. ಆಗ ವಿಮೆ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟು ವಿಮೆಗಳ ಮೊತ್ತ ಇಳಿಯಲಿದೆ. ಇದರಿಂದ ವಾಹನದ ಮಾಲೀಕರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.