ADVERTISEMENT

ಐಎಎಸ್‌ ಹೆಸರಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2015, 19:41 IST
Last Updated 8 ಅಕ್ಟೋಬರ್ 2015, 19:41 IST

ಬೆಂಗಳೂರು: ಐಎಎಸ್‌ ಅಧಿಕಾರಿ ಎಂದು ಹೇಳಿಕೊಂಡು ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಇಮ್ಮಡಿಹಳ್ಳಿಯ ಎನ್. ಪ್ರಸಾದ್ (30) ಹಾಗೂ ಪಟ್ಟೇಗಾರಪಾಳ್ಯದ ಎಚ್‌.ಎನ್‌. ಮೋಹನ್‌ನನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕೆಲ ಸಚಿವರ ನಕಲಿ ಲೆಟರ್ ಹೆಡ್‌ಗಳು, ಇನ್ನೋವಾ ಕಾರು (ಕೆಎ– 51, ಎಂಎಫ್‌– 1986), ವಿಧಾನಸೌಧದ ಪಾಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಪ್ರಸಾದ್ ಪ್ರಮುಖ ಆರೋಪಿಯಾಗಿದ್ದು, ಮೋಹನ್ ಆತನಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ತಮ್ಮ ಬಳಿ ಇನ್ನೋವಾ ಕಾರು ಇಟ್ಟುಕೊಂಡಿದ್ದ ಇವರು, ಅದಕ್ಕೆ ಸರ್ಕಾರಿ ಲಾಂಛನವಿರುವ ಹಿಂದುಳಿದ ಅಲ್ಪ ಸಂಖ್ಯಾತರ ಸಮಾಜ ಸೇವಾ ಸಂಸ್ಥೆ ರಾಜ್ಯ ಉಪಾಧ್ಯಕ್ಷರು ಎಂಬ ಬೋರ್ಡ್‌ ಹಾಕಿಕೊಂಡು ವಿಧಾನಸೌಧ, ವಿಕಾಸ ಸೌಧ, ಎಂ.ಎಸ್‌. ಬಿಲ್ಡಿಂಗ್ ಸುತ್ತಮುತ್ತ ಅಡ್ಡಾಡುತ್ತಿದ್ದರು.

ಜನರಿಗೆ ತಮ್ಮನ್ನು ಐಎಎಸ್‌ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಗಳು ಎಸ್‌ಡಿಎ, ಎಫ್‌ಡಿಎ, ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಕೊಡಿಸುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಸಾರ್ವಜನಿಕರು, ಅವರು ಕೇಳಿದಷ್ಟು ಹಣ ಕೊಡುತ್ತಿದ್ದರು. ಹಣ ಪಡೆದು
ಕೊಂಡು,ತಲೆಮರೆಸಿಕೊಳ್ಳುತ್ತಿದ್ದರು. 

ಆರೋಪಿಗಳಿಗೆ ₹ 5 ಲಕ್ಷ ಕೊಟ್ಟು ವಂಚನೆಗೊಳಗಾಗಿದ್ದ ಮೈಸೂರು ರಸ್ತೆಯ ಕವಿಕಾ ಲೇಔಟ್‌ನ ಧನಂಜಯ ಎಂಬುವವರು ಠಾಣೆಗೆ ದೂರು ಕೊಟ್ಟಿದ್ದರು. ಆರೋಪಿಗಳು, ಕೆಂಪೇಗೌಡ ರಸ್ತೆಯಲ್ಲಿ ಇದೇ ರೀತಿ ವ್ಯಕ್ತಿಯೊಬ್ಬರಿಗೆ ವಂಚಿಸುತ್ತಿದ್ದಾಗ ಬಂಧಿಸಲಾಯಿತು.ಈ ಪೈಕಿ ಪ್ರಸಾದ್ ಎಂಬಿಎ ಪದವೀಧರನಾಗಿದ್ದು, ಮೋಹನ್ ಬಿಡದಿಯ ಟೊಯೊಟಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇಬ್ಬರು ಎರಡು ವರ್ಷಗಳಿಂದ ಈ ದಂಧೆಗೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.