ADVERTISEMENT

ಐದು ತಾಸುಗಳಲ್ಲಿ 974 ಪ್ರಕರಣ

ಪಾನಮತ್ತ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:52 IST
Last Updated 20 ಏಪ್ರಿಲ್ 2014, 19:52 IST

ಬೆಂಗಳೂರು: ನಗರದ ವಿವಿಧೆಡೆ ಶನಿ­ವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು ಪಾನ­ಮತ್ತ­ರಾಗಿ ವಾಹನ ಚಾಲನೆ ಮಾಡು­ತ್ತಿದ್ದ 974 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರ ಚಾಲನಾ ಪರವಾನಗಿ ಅಮಾನತುಪಡಿ­ಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ­ಗಳಿಗೆ (ಆರ್‌ಟಿಒ) ಶಿಫಾರಸು ಮಾಡಿದ್ದಾರೆ.

ಸುಗಮ ಸಂಚಾರಕ್ಕೆ ಅವ­ಕಾಶ ಮಾಡಿಕೊಡುವ ಉದ್ದೇಶದಿಂದ ನಗರದ 126 ಸ್ಥಳಗಳಲ್ಲಿ ರಾತ್ರಿ 9 ಗಂಟೆ­ಯಿಂದ 2ರವರೆಗೆ ವಿಶೇಷ ಕಾರ್ಯಾ­ಚರಣೆ ನಡೆಸಿ, 13,677 ಮಂದಿ ವಾಹನ ಸವಾರರನ್ನು ತಪಾಸಣೆ ಮಾಡ­ಲಾಯಿತು ಎಂದು ಹಿರಿಯ ಅಧಿಕಾರಿ­ಗಳು ತಿಳಿಸಿದ್ದಾರೆ.

ತಪಾಸಣೆ ವೇಳೆ ಒಂದು ಬಸ್‌, 21 ಲಾರಿ, 50 ಆಟೊ, 162 ಕಾರು, 12 ಮ್ಯಾಕ್ಸಿ ಕ್ಯಾಬ್‌, 15 ಟೆಂಪೊ ಚಾಲಕರು ಮತ್ತು 713 ಬೈಕ್‌ ಸವಾರರು ಪಾನಮತ್ತರಾಗಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ 972 ಪುರುಷರು ಮತ್ತು ಇಬ್ಬರು ಮಹಿಳೆ­ಯರು ಸೇರಿದ್ದಾರೆ. ಪೀಣ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅತಿ  ಹೆಚ್ಚು ಪ್ರಕರಣಗಳನ್ನು ದಾಖಲಿಸ­ಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆ ಎಲ್ಲಾ ವಾಹನ ಸವಾರರ ಚಾಲನಾ ಪರವಾನಗಿ ಅಮಾನತುಪಡಿ­ಸು­ವಂತೆ ಆರ್‌ಟಿಒಗಳಿಗೆ ವರದಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏ.5 ಹಾಗೂ ಏ.12ರ ರಾತ್ರಿ ಇದೇ ರೀತಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಸಂಚಾರ ಪೊಲೀಸರು  1,953 ವಾಹನ ಸವಾ­ರರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.