ADVERTISEMENT

ಕಟ್ಟೆ ಒಡೆದ ಆಕ್ರೋಶ, ಹೆದ್ದಾರಿ ಸಂಚಾರ ಸ್ತಬ್ಧ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 20:02 IST
Last Updated 27 ಫೆಬ್ರುವರಿ 2015, 20:02 IST

ಬೆಂಗಳೂರು: ಹೆಬ್ಬಾಳದ ಕೆಂಪಾಪುರ ಜಂಕ್ಷನ್‌ನಲ್ಲಿ ಸಂಭವಿಸಿದ ಭೀಕರ ಅಪಘಾತ ಖಂಡಿಸಿ ಕಾಲೇಜು ವಿದ್ಯಾ­ರ್ಥಿ­­­ಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಸದಸ್ಯರು ಘಟನಾ ಸ್ಥಳದಲ್ಲಿ ಶುಕ್ರವಾರ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದ­ರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ತಬ್ಧವಾಯಿತು.

ಸಿಂಧಿ, ಪ್ರೆಸಿಡೆನ್ಸಿ, ವಿದ್ಯಾನಿಕೇತನ ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿ­ಗಳು ಹಾಗೂ ಶಿಕ್ಷಕರು ಬೆಳಿಗ್ಗೆ 10 ಗಂಟೆಗೆ ಘಟನಾ ಸ್ಥಳ­ದಲ್ಲಿ ಜಮಾಯಿ­ಸಿ­ದರು. ‘ಪಾದ­ಚಾ­ರಿ­­ಗಳ ಓಡಾಟಕ್ಕೆ ಸ್ಕೈವಾಕ್‌ ಅಥವಾ ಸುರಂಗ ಮಾರ್ಗ ನಿರ್ಮಿಸಬೇಕು. ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಪಟ್ಟು ಹಿಡಿದರು.

ಪ್ರತಿಭಟನೆ ಕಾರಣದಿಂದ ನಗರದ ಬಳ್ಳಾರಿ ರಸ್ತೆಯಲ್ಲಿ ಸವಾರರಿಗೆ ‘ದಟ್ಟಣೆ’ಯ ಬಿಸಿ ತಟ್ಟಿತು. ವಾಹನ­ಗಳು ಕಿಲೋಮೀಟರ್‌­ಗಟ್ಟಲೇ ಸಾಲು­ಗಟ್ಟಿ ನಿಂತವು. ಮುಂಜಾಗ್ರತಾ ಕ್ರಮ­ವಾಗಿ ಪೊಲೀಸರು ಅಂಗಡಿ–ಮುಂಗ­ಟ್ಟುಗಳನ್ನು ಮುಚ್ಚಿಸಿದರು. ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿದ್ದ ಪ್ರಯಾಣಿಕರು, ವಾಹನಗಳಿಂದ ಇಳಿದು ಕಾಲ್ನಡಿಗೆಯಲ್ಲೇ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಬಸ್‌ಗಳನ್ನು ಏರಿದ ಪ್ರತಿ­ಭಟ­ನಾ­ನಿರತ ವಿದ್ಯಾರ್ಥಿಗಳು, ‘ನ್ಯಾಯ ಒದ­ಗಿಸಿ’ ಎಂಬ ಘೋಷಣೆ ಕೂಗಿದರು. ಪರಿಸ್ಥಿತಿ ನಿಯಂತ್ರಿ­ಸಲು ಸಂಚಾರ ಪೊಲೀಸರು ಹರಸಾ­ಹಸ ಪಡಬೇಕಾ­ಯಿತು. ಮಧ್ಯಾಹ್ನ 12.30ರ ಸುಮಾ­ರಿಗೆ ಸ್ಥಳಕ್ಕೆ ಬಂದ ಕಾನೂನು ಮತ್ತು ಸುವ್ಯವಸ್ಥೆ ವಿಭಾ­ಗದ ಹೆಚ್ಚುವರಿ ಪೊಲೀಸ್ ಕಮಿಷ­ನರ್ ಅಲೋಕ್‌­ಕುಮಾರ್, ವಾಹನ­ಗಳ ಸಂಚಾರಕ್ಕೆ ಅನುವು ಮಾಡಿ­ಕೊಡುವಂತೆ ವಿದ್ಯಾ­ರ್ಥಿ­ಗ­ಳಲ್ಲಿ ಮನವಿ ಮಾಡಿದರು. ಆ ನಂತರ ಪ್ರತಿಭಟ­ನಾಕಾರರು ‘ಎಸ್ಟೀಮ್‌ ಮಾಲ್‌’ನ ಆವರಣಕ್ಕೆ ಬಂದು ಧರಣಿ ಕುಳಿತರು.

‘ಕೆಂಪಾಪುರ ಜಂಕ್ಷನ್‌ ಸುತ್ತಮುತ್ತ ಸಿಂಧಿ, ಪ್ರೆಸಿಡೆನ್ಸಿ, ವಿದ್ಯಾನಿಕೇತನ, ಸೇಂಟ್‌ ಕ್ಲಾರೇಟ್, ಜೈನ್‌ ಹೆರಿ­ಟೇಜ್, 2 ಸರ್ಕಾರಿ ಸೇರಿ ಹತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಇವೆ. ನಿತ್ಯ ಏಳು ಸಾವಿರ ವಿದ್ಯಾರ್ಥಿ­ಗಳು ಸೇರಿ 40 ಸಾವಿರ ಜನ ಈ ರಸ್ತೆ ದಾಟು­ತ್ತಾರೆ. ಈ ಪ್ರದೇಶವನ್ನು ಶಾಲಾ ವಲಯ ಅಥವಾ ಸೂಕ್ಷ್ಮ ವಲಯ ಎಂದೇ ಪರಿಗಣಿಸಲಾಗಿದೆ’ ಎಂದು ಸಿಂಧಿ ಕಾಲೇಜಿನ ಸಿಬ್ಬಂದಿ ಕವಿತಾ  ಹೇಳಿದರು.

‘ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕೆಂಪಾ­ಪುರ ಜಂಕ್ಷನ್ ಮತ್ತು ಸಮೀಪದ ಯೋಗೇಶ್‌ನಗರ ಜಂಕ್ಷನ್‌ನಲ್ಲಿ ಸ್ಕೈವಾಕ್‌ ನಿರ್ಮಿಸಬೇಕು ಎಂದು ಎರಡು ವರ್ಷಗಳ ಹಿಂದೆಯೇ ಸ್ಥಳೀಯ ಶಾಸಕರಾದ ಸಚಿವ ಕೃಷ್ಣಬೈರೇಗೌಡ ಮತ್ತು ಪಾಲಿಕೆ ಸದಸ್ಯ ಇಂದ್ರಮ್ಮ ಅವರಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕರು ಮತ್ತು ಪಾಲಿಕೆ ಸದಸ್ಯರ ನಿರ್ಲಕ್ಷ್ಯ­ದಿಂದ ಗುರುವಾರ ಈ ಸ್ಥಳದಲ್ಲಿ ಇಬ್ಬರು ಬಲಿಯಾಗಿ­ದ್ದಾರೆ. ಬೆಳಿಗ್ಗೆಯಿಂದ ಪ್ರತಿಭಟನೆ ನಡೆಯುತ್ತಿದ್ದರೂ ಆ ಇಬ್ಬರು ರಾಜಕಾರಣಿಗಳು ಸ್ಥಳಕ್ಕೆ ಬಂದಿಲ್ಲ. ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ದೂರಿದರು.

‘ಸ್ಕೈವಾಕ್ ನಿರ್ಮಿಸಿ ಪಾದಚಾರಿಗಳ ಸುರಕ್ಷತೆಗೆ ಇಬ್ಬರು ಪೊಲೀಸರನ್ನು ನಿಯೋ­ಜಿ­ಸ­ಬೇಕು’  ಎಂದು ಚಿರಂಜೀವಿ­ಲೇಔಟ್‌ ನಿವಾಸಿಗಳ ಕ್ಷೇಮಾ­ಭಿವೃದ್ಧಿ ಸಂಘದ ವತಿ­ಯಿಂದ ಸಂಚಾರ ವಿಭಾಗದ ಎಸಿಪಿ ಕಚೇ­ರಿಗೆ ೨ ಬಾರಿ ಮನವಿ ಮಾಡಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಕೆಲವೆಡೆ ಅನಗತ್ಯ­ವಾಗಿ ಸ್ಕೈವಾಕ್‌­ಗಳನ್ನು ನಿರ್ಮಿಸ­ಲಾಗಿದೆ’ ಎಂದು ಸಿಂಧಿ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ ಹರ್ಷಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್, ‘15 ದಿನಗಳಲ್ಲಿ ಸ್ಕೈವಾಕ್‌ ನಿರ್ಮಾಣ ಮಾಡಲಾಗುವುದು. ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಸಂಬಂಧ ಸಿ.ಎಂ ಜತೆ ಚರ್ಚಿಸಲಾಗುವುದು’ ಎಂದು ಭರವಸೆ ಕೊಟ್ಟ ನಂತರ ವಿದ್ಯಾರ್ಥಿಗಳು ಹೋರಾಟ ಕೈಬಿಟ್ಟರು.

ಪರ್ಯಾಯ ವ್ಯವಸ್ಥೆ
ಸಂಚಾರ ದಟ್ಟಣೆಯಿಂದ ಕೆಐಎಎಲ್‌ಗೆ ಹೊರ­ಟಿದ್ದ ವಿಮಾನ ಪ್ರಯಾಣಿಕರಿಗೆ ತೊಂದರೆಯಾ­ಗ­ದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರ­ದಿಂದ ಹೊರಟಿದ್ದ ಪ್ರಯಾಣಿಕರು ಮೇಕ್ರಿ ವೃತ್ತದಲ್ಲಿ ಎಡತಿರುವು ಪಡೆದು, ಸದಾಶಿವನಗರ, ಬಿಇಎಲ್‌ ವೃತ್ತ, ವಿದ್ಯಾರಣ್ಯಪುರ, ಕೊಡಿಗೇಹಳ್ಳಿ ಮಾರ್ಗ­ವಾಗಿ ಸಾಗಿ ಕೆಐಎಎಲ್‌ ತಲುಪಿದರು ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿಬಾಬು ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

‘ಸೂಚನೆ ನೀಡಿದ್ದೇನೆ’
ಇದು ದುರದೃಷ್ಟಕರ ಘಟನೆ. ಹೆಬ್ಬಾಳ ಮತ್ತು ವಿಮಾನ ನಿಲ್ದಾಣ ಕಡೆಯಿಂದ ಬಂದರೂ ಇಳಿ­ಜಾರು ಇರುವುದರಿಂದ ವಾಹನಗಳ ವೇಗ ಹೆಚ್ಚಿರು­ತ್ತದೆ. ಪಾದಚಾರಿಗಳ ಸುರಕ್ಷತೆ ದೃಷ್ಟಿ­ಯಿಂದ ಶೀಘ್ರ­ಸ್ಕೈವಾಕ್‌ ನಿರ್ಮಿಸುವಂತೆ ಬಿಬಿಎಂಪಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಮಜಗೆ ಹೇಳಿದರು.

ಹಿಂದೆ ತಾಯಿ–ಮಗು ಸತ್ತಿದ್ದರು
‘ನಾಲ್ಕು ವರ್ಷಗಳಿಂದ ಸಿಂಧಿ ಕಾಲೇಜಿನಲ್ಲೇ ಓದುತ್ತಿದ್ದೇನೆ. ಈ ಜಂಕ್ಷನ್‌ನಲ್ಲಿ ನಿತ್ಯವೂ ಸಣ್ಣ–ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೆ.  ಆರು ತಿಂಗಳ ಹಿಂದೆಯೂ ಇದೇ ಸ್ಥಳದಲ್ಲಿ ಕಾರು ಡಿಕ್ಕಿ ಹೊಡೆದು ಚಿಂದಿ ಆಯುತ್ತಿದ್ದ ತಾಯಿ–ಮಗು ಮೃತ­ಪಟ್ಟಿದ್ದರು. ಪಾದಚಾರಿ ಸಿಗ್ನಲ್‌ ಹಿಂದೆ–ಮುಂದೆ ಕನಿಷ್ಠ ರಸ್ತೆ ಉಬ್ಬುಗಳನ್ನು ಸಹ ಹಾಕಿಲ್ಲ. ಇದರಿಂದಾಗಿ ಸಿಗ್ನಲ್ ಬೀಳುವ ಮೊದಲೇ ಹಾದು ಹೋಗುವ ಆತುರದಲ್ಲಿ ಚಾಲಕರು ವಾಹನದ ವೇಗ­ವನ್ನು ತಗ್ಗಿಸುವುದಿಲ್ಲ.
– ಚಂದ್ರಕಾಂತ್, ಬಿಬಿಎಂ ವಿದ್ಯಾರ್ಥಿ

ಸಿಗ್ನಲ್‌ 30 ಸೆಕೆಂಡ್‌ಗೆ ಮಿತಿ

ಕೆಂಪಾಪುರ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರ­ಕ್ಷತೆ ಹೆಸರಿನಲ್ಲಿ ಸಿಗ್ನಲ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, 30 ಸೆಕೆಂಡ್‌ಗಳಲ್ಲಿ 200 ಅಡಿ ಅಗಲದ ಎರಡು ರಸ್ತೆಗಳನ್ನು ದಾಟಬೇಕಿದೆ. ಅಷ್ಟು ಸಮಯ ಕಾಯುವ ತಾಳ್ಮೆ ಕೂಡ ಚಾಲಕರಿಗೆ ಇರುವುದಿಲ್ಲ. ವಾಹನಗಳು ಸುಗಮವಾಗಿ ಸಾಗುವುದರಿಂದ ಪೊಲೀ­ಸರು ಸಹ ಈ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸು­ವುದಿಲ್ಲ. ಹೀಗಾಗಿ ಪಾದಚಾರಿಗಳ ಗೋಳು ಕೇಳಲು ಈ ಜಂಕ್ಷನ್‌ನಲ್ಲಿ ಯಾರೂ ಇರುವುದಿಲ್ಲ.
– ಅನಿತಾ, ಸಿಂಧಿ ಕಾಲೇಜಿನ ಕಚೇರಿ ಸಿಬ್ಬಂದಿ

ಆರ್‌ಟಿಒ ವರದಿ ಬಳಿಕ ಕ್ರಮ
ಎಸಿಪಿ ಮಟ್ಟದ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಬ್ರೇಕ್‌ ವೈಫಲ್ಯದಿಂದ ಘಟನೆ ನಡೆ­ಯಿತು ಎಂದು ಚಾಲಕ ಹೇಳಿಕೆ ಕೊಟ್ಟಿದ್ದಾನೆ. ಆದರೆ, ಆತನ ಹೇಳಿಕೆಯನ್ನು ನಂಬಲು ಸಾಧ್ಯ­ವಿಲ್ಲ. ಘಟನೆಗೆ ಕಾರಣವೇನು, ಟ್ಯಾಂಕರ್‌ನಲ್ಲಿ ಏನಾ­ದರೂ ದೋಷ­ವಿತ್ತೇ ಎಂಬ ಬಗ್ಗೆ ಆರ್‌ಟಿಒ ಅಧಿ­ಕಾರಿ­ಗಳು ಪರಿಶೀ­ಲನೆ ನಡೆಸುತ್ತಿದ್ದು ಅವರ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು.
– ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಕಮಿಷನರ್‌

ಡಿಸಿಪಿ ಕಚೇರಿಯಲ್ಲಿ ಸಭೆ
ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಕಚೇರಿ­ಯಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಮುಖ್ಯ ಕಾರ್ಯ­ದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆ­ಯ­ಲಿದೆ. ಭಾರ­ತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿ­ಕಾರ, ಪಾಲಿಕೆ ಅಧಿಕಾರಿಗಳು ಪಾಲ್ಗೊಳ್ಳ­ಲಿ­ದ್ದಾರೆ. ಈ ಜಂಕ್ಷನ್‌-­­ನಲ್ಲಿ ಸ್ಕೈವಾಕ್‌ ನಿರ್ಮಾಣ ಯಾರ ವ್ಯಾಪ್ತಿಗೆ ಬರುತ್ತದೆ, ಯಾರಿಂದ ವಿಳಂಬವಾ­ಗಿದೆ ಎಂಬ ಬಗ್ಗೆ ಚರ್ಚೆ ನಡೆ­ಯ­ಲಿದ್ದು ಎಷ್ಟು ದಿನ­ದೊಳಗೆ ನಿರ್ಮಿ­ಸ­ಬೇಕೆಂದೂ ನಿರ್ಣಯವಾಗಲಿದೆ

– ಶ್ರೀನಿವಾಸ್ ರೆಡ್ಡಿ, ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್,   ಬ್ಯಾಟರಾಯನಪುರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.