ADVERTISEMENT

ಕನ್ನಡ ಅನುಷ್ಠಾನಕ್ಕೆ ಕೌಶಿಕ್‌ ಅಡ್ಡಿ!

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 20:04 IST
Last Updated 29 ಜನವರಿ 2015, 20:04 IST

ಬೆಂಗಳೂರು: ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ  ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸುವ ವಿಚಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು  ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್‌. ಹನುಮಂತಯ್ಯ ಅವರು ನವೆಂಬರ್‌ 28ರಂದು ಕೌಶಿಕ್‌ ಮುಖರ್ಜಿ ಅವರಿಗೆ ಪತ್ರ ಬರೆದು, ‘ಕನ್ನಡ ಅಭಿವೃದ್ಧಿ ಪ್ರಾಧಿಕಾ­ರವು ನಡೆಸಲಿರುವ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಅಭಿಯಾನವನ್ನು ನಿಮ್ಮ ಕಚೇರಿಯಿಂದಲೇ ಆರಂಭಿಸ­ಬೇಕೆಂದಿ­ದ್ದೇವೆ.  ಆ ಕಾರಣದಿಂದ ಡಿಸೆಂಬರ್‌ 1ರಂದು ಮಧ್ಯಾಹ್ನ 2.30ಕ್ಕೆ ನಿಮ್ಮ ಕಚೇರಿಗೆ ಭೇಟಿ ನೀಡಲಿದ್ದೇವೆ. ಆ ಸಂದ­ರ್ಭದಲ್ಲಿ  ನೀವು ಮತ್ತು ನಿಮ್ಮ ಅಧಿ­ಕಾರಿ­ಗಳು ಹಾಜರಿದ್ದು ಪರಿಶೀಲನೆಗೆ ಸಹ­ಕರಿಸಬೇಕು’ ಎಂದು ವಿನಂತಿಸಿ­ಕೊಂಡಿದ್ದಾರೆ.

ಆದರೆ, ಪ್ರಾಧಿಕಾರದ ಪತ್ರಕ್ಕೆ ಮರು­ಪತ್ರ ಬರೆದಿ­ರುವ ಕೌಶಿಕ್‌ ಮುಖರ್ಜಿ, ‘ನೀವು ನನ್ನ ಕಚೇರಿಗೆ ಯಾವುದೇ ಸಮಯದಲ್ಲಿ ಭೇಟಿ ನೀಡಿ ಪರಿಶೀಲಿ­ಸಬಹುದು. ಆದರೆ ಇಲ್ಲಿ ಸಭೆ ನಡೆಸು­ವುದು ಸರಿಯಲ್ಲ.  ಬೇರೆ ಕಡೆ ಸಭೆ ನಡೆ­ಸಿ­ದರೆ ಹಾಜರಾಗು­ತ್ತೇನೆ’ ಎಂಬ ಉತ್ತರ ನೀಡಿದ್ದಾರೆ. ಡಿ. 17ರಂದು ಪ್ರಾಧಿಕಾ­ರದಿಂದ ಮತ್ತೊಂದು ಪತ್ರ ಬರೆದು,  ‘ಡಿ. 26ರಂದು ನಿಮ್ಮ ಕಚೇರಿ­ಯಲ್ಲಿ ಬೆಳಿಗ್ಗೆ 11ರಿಂದ 12ರವರೆಗೆ ಪರಿಶೀಲ­ನೆಗೆ ಅವಕಾಶ ನೀಡಬೇಕು. ನಂತರ ಸಮ್ಮೇಳನ ಸಭಾಂಗ­ಣದಲ್ಲಿ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯ­ದರ್ಶಿಗಳ ಸಭೆ ಕರೆಯುವ ವ್ಯವಸ್ಥೆ ಮಾಡಬೇಕು. ಅಥವಾ ಬೇರೆ ದಿನಾಂಕ­ವನ್ನು ನೀವೇ ನಿಗದಿಪಡಿ­ಸಬೇಕು’ ಎಂದು ತಿಳಿಸಿದ್ದಾರೆ.

ಇದಕ್ಕೆ ಡಿ. 22ರಂದು ಉತ್ತ­ರಿ­ಸಿರುವ ಮುಖರ್ಜಿ­ಯವರು, ‘ಬೆಳ­ಗಾವಿ ಅಧಿ­ವೇ­ಶ­ನದ ಕಡತ ವಿಲೇವಾರಿ ಕೆಲಸ ಇರುವ ಕಾರಣ ಸಾಧ್ಯವಿಲ್ಲ’ ಎಂದಿ­ದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿ­ ಅವರ ಈ ನಡೆಯಿಂದಾಗಿ ಶಕ್ತಿ ಕೇಂದ್ರ­ದಿಂದಲೇ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ಅಭಿಯಾನ ಆರಂಭಿ­ಸಬೇಕು ಎಂಬ ಪ್ರಾಧಿಕಾರದ  ಯೋಜನೆಗೆ ತಡೆ­ಯಾಗಿದೆ ಎಂದು ಹನುಮಂತಯ್ಯ ಆರೋಪಿಸಿದ್ದಾರೆ.

‘ಆಡಳಿತದಲ್ಲಿ ಕನ್ನಡ ಅನುಷ್ಠಾನ­ಗೊಳಿಸಬೇಕು ಎಂದು ಮುಖ್ಯಮಂತ್ರಿ­ಗಳು ಪದೇ ಪದೇ ಹೇಳುತ್ತಲೇ ಬಂದಿ­ದ್ದಾರೆ. ಆದರೆ, ಯಾವುದೇ ಇಲಾ­ಖೆ­­ಗಳಲ್ಲೂ ಕನ್ನಡದಲ್ಲಿ ಪತ್ರ ವ್ಯವ­ಹಾರ, ಅಧಿಸೂಚನೆಗಳನ್ನು ಹೊರ­ಡಿ­ಸುತ್ತಿಲ್ಲ. ಈ ಬಗ್ಗೆ ಅಧಿಕಾರಿ­ಗಳಿಗೆ ಅಸಡ್ಡೆ ಇದೆ. ಪ್ರಾಧಿಕಾರದ ಸೂಚನೆ­ಗಳಿಗೂ ಬೆಲೆ ಕೊಡುತ್ತಿಲ್ಲ’ ಎಂದು ದೂರಿದ್ದಾರೆ.

‘ಕನ್ನಡ ಅನುಷ್ಠಾನದ ಪರಿಶೀಲನೆಗೆ ಯಾವುದೇ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡುವ ಅಧಿಕಾರ ಪ್ರಾಧಿ­ಕಾರಕ್ಕಿದೆ. ಸೌಜನ್ಯದ ಕ್ರಮವಾಗಿ ಪತ್ರ ಬರೆಯ­ಲಾಗಿದೆ. ಮುಖ್ಯ ಕಾರ್ಯದರ್ಶಿ­ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಇನ್ನು ಪತ್ರ ವ್ಯವಹಾರ ನಡೆಸುವುದಿಲ್ಲ. ಖುದ್ದು ಭೇಟಿ ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.

ಐ.ಟಿ, ಬಿ.ಟಿ ಬಿಟ್ಟುಬಿಡಿ ಅನ್ನುತ್ತಾರೆ
‘ಐವತ್ತಕ್ಕಿಂತ ಹೆಚ್ಚು ಕಾರ್ಮಿಕರಿರುವ ಖಾಸಗಿ ಕಂಪೆನಿಗಳ ಸಭೆ ಕರೆಯಲು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗೆ ಪತ್ರ ಬರೆಯ­ಲಾಗಿದೆ. ಆದರೆ, ‘ಐ.ಟಿ, ಬಿ.ಟಿ ಕಂಪೆನಿಗಳಲ್ಲಿ ಕನ್ನಡ ಅನುಷ್ಠಾನ, ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಒತ್ತಡ ಹೇರಿದರೆ ಬೇರೆ ರಾಜ್ಯಗಳಿಗೆ ಹೋಗುವ ಅಪಾಯವಿದೆ. ಹೀಗಾಗಿ ಅವರನ್ನು ಬಿಟ್ಟುಬಿಡಿ’ ಎಂದು ಐ.ಟಿ, ಬಿ.ಟಿ ಇಲಾಖೆ ಉನ್ನತ ಅಧಿಕಾರಿ­ಯೊ­ಬ್ಬರು ಹೇಳಿದ್ದಾರೆ. ಸರ್ಕಾರದ ಅಧಿ­ಕಾರಿಗಳೇ ಹೀಗೆ ಹೇಳಿದರೆ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವ ಪ್ರಾಧಿ­ಕಾರದ ಯೋಜನೆ­ಗಳಿಗೆ ಹಿನ್ನಡೆಯಾ­ಗಲಿದೆ’.
–  ಎಲ್‌. ಹನುಮಂತಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT