ADVERTISEMENT

ಕರ್ನಾಟಕ ಸಂಗೀತದಲ್ಲಿ ‘ಐದನಿ’ ರಾಗ ಬಳಕೆ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ

​ಪ್ರಜಾವಾಣಿ ವಾರ್ತೆ
Published 1 ಜನವರಿ 2017, 20:28 IST
Last Updated 1 ಜನವರಿ 2017, 20:28 IST
ಬೆಂಗಳೂರು: ‘ಬುಡಕಟ್ಟು ಜನಾಂಗಗಳಲ್ಲಿ    ಹೆಚ್ಚು ಪ್ರಚಲಿತವಾಗಿರುವ ‘ಐದನಿ’ (ಔಧವ) ರಾಗವನ್ನು ಬಳಸಿಕೊಂಡು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗುವುದು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. 
 
‘ದೇಸಿ ವಿದ್ಯಾಸಂಸ್ಥೆ’ ಮತ್ತು ‘ಹಂಪಿ ಕನ್ನಡ ವಿಶ್ವವಿದ್ಯಾಲಯ’ ಸಹಯೋಗದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ  ಭಾನುವಾರ ಆಯೋಜಿಸಿದ್ದ ‘ಹಿಂದೂಸ್ತಾನಿ ಸಂಗೀತ ದಿಗ್ಗಜರಿಗೆ ಸನ್ಮಾನ’ ಹಾಗೂ ‘ಐದನಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
 
‘ಪಂಚರಾಗಗಳ ಮಿಶ್ರಣ ಈ ಐದನಿ ರಾಗದಲ್ಲಿದೆ. ಸಂಗೀತದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವರನ್ನು ಗುರುತಿಸಿ ಪೋಷಿಸುವ ಕೆಲಸಕ್ಕಾಗಿ ಈ ‘ಐದನಿ’ ಕಾರ್ಯಕ್ರಮಕ್ಕೆ  ಚಾಲನೆ ನೀಡಿದ್ದೇವೆ. ಇಡೀ ವರ್ಷವನ್ನು ಐದನಿ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ’ ಎಂದು ಹಂಸಲೇಖ ಹೇಳಿದರು. 
 
ಪಂಡಿತ ಎಂ. ವೆಂಕಟೇಶ್‌ ಕುಮಾರ್‌ ಮಾತನಾಡಿ, ‘ಸಂಗೀತಗಾರರನ್ನು ಸಂಗೀತದ ಮೂಲಕವೇ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಹಂಸಲೇಖ ಅವರು ಮಾಡಿದ್ದಾರೆ. ಸಮಾಜಮುಖಿ ಕಾರ್ಯಕ್ಕೆ ಮತ್ತು ಜ್ಞಾನ ಪ್ರದರ್ಶನಕ್ಕೆ ಹೊಸ ಆಯಾಮ ಬರೆದಿರುವುದು ಹೆಮ್ಮೆಯ ವಿಚಾರ’ ಎಂದು ಹೇಳಿದರು.
ಇದೇ ವೇಳೆ ಕೌದಿ ಶಾಲು ಹಾಗೂ ಕೊಳಲು ನೀಡಿ ಹಿಂದೂಸ್ತಾನಿ ಸಂಗೀತಗಾರರನ್ನು  ಸನ್ಮಾನಿಸಿದ್ದು ವಿಶೇಷವಾಗಿತ್ತು.
 
ಪರಿಷತ್‌ ಹೊರಾಂಗಣ ಆವರಣ ವೇದಿಕೆಯಲ್ಲಿ  ಹಂಸಲೇಖ ಹಾಗೂ ಸಂಗಡಿಗರು ಹೊಸ ರಾಗಗಳ ಸ್ತುತಿ ಗೀತೆಗಳನ್ನು ಹಾಡಿದರು.
 
**
ಶಾಸ್ತ್ರೀಯತೆ ಜನಿಸಿದ್ದು ದೇಸಿ ಸಂಗೀತದಿಂದ. ಈ ‘ಐದನಿ’ ರಾಗವು ಜನಪದ ಸಾಹಿತ್ಯ ಲೋಕವನ್ನು ಮತ್ತಷ್ಟು ಮನೆಮಾತಾಗಿಸಲಿದ್ದು, ಅದರಿಂದ  ಬದಲಾವಣೆ ಕಿಚ್ಚು ಹೊತ್ತಲಿದೆ
-ಚೇತನ್‌, ನಟ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.