ADVERTISEMENT

ಕಲ್ಯಾಣ ಮಂಟಪದ ಮಾಲೀಕನಿಗೆ ಬೆದರಿಕೆ

₹ 2 ಕೋಟಿಗೆ ಬೇಡಿಕೆ ಇಟ್ಟ ಆಗಂತುಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ಕಲ್ಯಾಣ ಮಂಟಪದ ಮಾಲೀಕ ಸತ್ಯಪ್ರಕಾಶ್ (50) ಎಂಬುವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ‘₹ 2 ಕೋಟಿ ಕೊಡದಿದ್ದರೆ, ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಸಿದ್ದಾನೆ.

ಈ ಸಂಬಂಧ ಸತ್ಯಪ್ರಕಾಶ್ ಅವರು ಸೆ.22ರಂದು ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಬೆದರಿಕೆ ಕರೆ ಬಂದಿದ್ದ ಸಂಖ್ಯೆ ಆಧರಿಸಿ ತನಿಖೆ ಪ್ರಾರಂಭಿಸಿರುವ ಪೊಲೀಸರು, ಸೈಬರ್ ತಜ್ಞರ ನೆರವು ಪಡೆದು ಆ ಆಗಂತುಕನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ನಿರಂತರ ಕರೆ: ‘ಸೆ.19ರ ಮಧ್ಯಾಹ್ನ 3.15ರ ಸುಮಾರಿಗೆ +4499936 ಸಂಖ್ಯೆಯಿಂದ ನನ್ನ ಮೊಬೈಲ್‌ಗೆ ಕರೆ ಬಂತು. ಆಗ ಕೆಲಸದ ಒತ್ತಡದಲ್ಲಿದ್ದ ನನಗೆ ಕರೆ ಸ್ವೀಕರಿಸಲು ಆಗಿರಲಿಲ್ಲ. ರಾತ್ರಿ 7.05ಕ್ಕೆ ಪುನಃ ಅದೇ ಸಂಖ್ಯೆಯಿಂದ ಕರೆ ಬಂತು’ ಎಂದು ಸತ್ಯಪ್ರಕಾಶ್ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ನಾನು ಕರೆ ಸ್ವೀಕರಿಸುತ್ತಿದ್ದಂತೆಯೇ ಆತ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ. ‘ನಿನ್ನ ಹೆಸರು ಸತ್ಯಪ್ರಕಾಶ್. ಎರಡು ಕಲ್ಯಾಣ ಮಂಟಪಗಳನ್ನು ನಡೆಸುತ್ತಿದ್ದೀಯಾ. ಎಲ್ಲ ವಿವರಗಳೂ ನನಗೆ ಗೊತ್ತಿವೆ. ನನ್ನ ಹುಡುಗರು ನಿನ್ನನ್ನೇ ಹಿಂಬಾಲಿಸುತ್ತಿದ್ದಾರೆ. ಅಣ್ಣನಿಗೆ ₹2 ಕೋಟಿ ಬೇಕು. ನಾಳೆಯೊಳಗೆ ಹಣ ಹೊಂದಿಸು. ಇಲ್ಲವಾದರೆ, ಸಾಯಲು ಸಿದ್ಧನಾಗು. ಈ ವಿಚಾರ ಪೊಲೀಸರ ಗಮನಕ್ಕೆ ತಂದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಹೇಳಿದ. ಆಗ  ನಾನು, ದೇವಸ್ಥಾನದಲ್ಲಿದ್ದೇನೆ. ನಾಳೆ ಮಾತನಾಡುತ್ತೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದೆ’ ಎಂದು ಹೇಳಿದ್ದಾರೆ.

‘ಅದೇ ರಾತ್ರಿ 12.47ಕ್ಕೆ +602155 677887 ಸಂಖ್ಯೆಯಿಂದ ಮತ್ತೊಂದು ಕರೆ ಬಂತು. ನಾನು ಸ್ಥಗಿತಗೊಳಿಸಿದೆ. ಸೆ.20ರ ಬೆಳಿಗ್ಗೆ 11.50ಕ್ಕೆ ಕೆಲಸದ ನಿಮಿತ್ತ ನ್ಯೂ ಬಿಇಎಲ್ ರಸ್ತೆಗೆ ಹೋಗಿದ್ದೆ. ಆಗ ಪುನಃ ಆ ಸಂಖ್ಯೆಯಿಂದ ಕರೆ ಬಂತು.’

‘ಸ್ನೇಹಿತ ಹರೀಶ್‌ಗೆ ವಿಚಾರ ತಿಳಿಸಿದಾಗ ಆತನೇ ಕರೆ ಸ್ವೀಕರಿಸಿದ. ಅವನ ಜತೆ ಮಾತನಾಡಿದ ಆರೋಪಿ, ‘ಹಣ ಹೊಂದಿಸಿಕೊಳ್ಳಲು ನಿನ್ನ ಗೆಳೆಯನಿಗೆ ಹೇಳು. ಫೋನ್ ಮಾಡಿದರೆ ಸ್ವೀಕರಿಸದೆ ನಾಟಕ ಮಾಡುತ್ತಿದ್ದಾನೆ. ನೀನಾದರೂ ಬುದ್ಧಿ ಹೇಳು’ ಎಂದಿದ್ದ. ಹೀಗೆ, ಎರಡು ದಿನಗಳಿಂದ ಪ್ರಾಣ ಬೆದರಿಕೆ ಹಾಕುತ್ತಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಿ’ ಎಂದು ದೂರಿನಲ್ಲಿ ಸತ್ಯಪ್ರಕಾಶ್ ಮನವಿ ಮಾಡಿದ್ದಾರೆ.

***

ಇಂಗ್ಲೆಂಡ್ (ದೂರವಾಣಿ ಕೋಡ್ + 44) ಹಾಗೂ ಮಲೇಷಿಯಾ (ದೂರವಾಣಿ ಕೋಡ್ +60) ಸಂಖ್ಯೆಗಳಿಂದ ಕರೆಗಳು ಬಂದಿವೆ. ವಾಪಸ್ ಆ ಸಂಖ್ಯೆಗಳಿಗೆ ಕರೆ ಮಾಡಿದರೆ, ಪ್ರತಿಕ್ರಿಯೆ ಸಿಗುತ್ತಿಲ್ಲ
– ಸೈಬರ್ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.