ADVERTISEMENT

ಕಾನ್‌ಸ್ಟೆಬಲ್‌ ವಿರುದ್ಧ ಎಫ್‌ಐಆರ್‌

ಪೊಲೀಸ್‌ ಜೀಪ್ ಡಿಕ್ಕಿ; ಪಾದಚಾರಿ ಸಾವು 

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:57 IST
Last Updated 26 ಸೆಪ್ಟೆಂಬರ್ 2016, 19:57 IST

ಬೆಂಗಳೂರು: ಸ್ಯಾಟಲೈಟ್‌ ಬಸ್‌ ನಿಲ್ದಾಣ ಸಮೀಪ ಗಾಳಿ ಆಂಜನೇಯ ದೇವಸ್ಥಾನ ಬಳಿ ಸೋಮವಾರ ಪೊಲೀಸ್‌ ಜೀಪೊಂದು ಡಿಕ್ಕಿ ಹೊಡೆದಿದ್ದರಿಂದ ಪಾದಚಾರಿ ಮರಿಯಪ್ಪ (60) ಎಂಬುವರು ಗಾಯಗೊಂಡಿದ್ದಾರೆ.

‘ಸ್ಥಳೀಯ ನಿವಾಸಿ ಮರಿಯಪ್ಪ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಾಯಗೊಂಡಿರುವ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಾನ್‌ಸ್ಟೆಬಲ್‌ ರಂಗಣ್ಣ ಅವರು ಕುಡಿದ ಅಮಲಿನಲ್ಲಿ ಜೀಪು ಚಲಾಯಿಸಿದ್ದೇ ಘಟನೆಗೆ ಕಾರಣ ಎಂಬುದು ಗೊತ್ತಾಗಿದೆ’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ತಿಳಿಸಿದರು.

‘ವಿವಿಐಪಿ ಭದ್ರತೆಯ ಪೊಲೀಸ್‌ ಜೀಪಿನ ಚಾಲಕ ರಂಗಣ್ಣ, ಮಧ್ಯಾಹ್ನ 3.30ರ ಸುಮಾರಿಗೆ ಮನೆಗೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ವಾಹನ, ಮರಿಯಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಮರಿಯಪ್ಪ ತಲೆಗೆ ಗಾಯವಾಗಿದೆ’.

‘ಘಟನೆ ಬಳಿಕ ರಂಗಣ್ಣ ಹಾಗೂ ಮರಿಯಪ್ಪ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಅವರಿಬ್ಬರೂ ಮದ್ಯ ಸೇವಿಸಿದ್ದು ಗೊತ್ತಾಯಿತು. ಮದ್ಯ ಸೇವಿಸಿ, ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದ ಆರೋಪದಡಿ ರಂಗಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಿವೃತ್ತಿಗೆ ಒಂದು ತಿಂಗಳು ಬಾಕಿ: ‘ಅಪಘಾತಕ್ಕೆ ಕಾರಣರಾದ ರಂಗಣ್ಣ ಅವರ ಸೇವಾವಧಿ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇತ್ತು’ ಎಂದು ಪೊಲೀಸರು ತಿಳಿಸಿದರು. ‘ಈ ಹಿಂದೆಯೂ ರಂಗಣ್ಣ ಕುಡಿದು ವಾಹನ ಚಲಾಯಿಸುತ್ತಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಘಟನೆ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.