ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ

ರೈಲ್ವೆ ಇಲಾಖೆಯಿಂದ ಸಾಧ್ಯತಾ ವರದಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 20:12 IST
Last Updated 15 ಸೆಪ್ಟೆಂಬರ್ 2014, 20:12 IST

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರು ಭವಿಷ್ಯದಲ್ಲಿ ಬಿಎಂಟಿಸಿ ಬಸ್‌ ಮಾತ್ರ ಅವಲಂಬಿಸಬೇಕಿಲ್ಲ, ಅವರು ರೈಲಿನ ಮೂಲಕ ಸುಲಭವಾಗಿ ನಿಲ್ದಾಣ ತಲುಪಬಹುದು.

ಈಗಿರುವ ಚಿಕ್ಕಬಳ್ಳಾಪುರ ರೈಲ್ವೆ ಮಾರ್ಗದಲ್ಲೇ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಒದಗಿಸಲು ನೈರುತ್ಯ ರೈಲು ಹಾಗೂ ರಾಜ್ಯ ಸರ್ಕಾರ ಜತೆ­ಗೂಡಿ ಸಾಧ್ಯತಾ ವರದಿ ತಯಾರಿಸಲು ಮುಂದಾಗಿವೆ. ಈ ಯೋಜನೆ ಈಗ ಆರಂಭಿಕ ಹಂತದಲ್ಲಿದೆ. ಪ್ರಸ್ತುತ ಬೆಂಗಳೂರು ನಗರ– ದೇವನಹಳ್ಳಿ–ಚಿಕ್ಕಬಳ್ಳಾಪುರ ಮಾರ್ಗದಲ್ಲೇ ಕೆಲವೇ ರೈಲುಗಳು ಸಂಚಾರ ನಡೆಸುತ್ತಿವೆ. ಯಶವಂತಪುರ–ಯಲಹಂಕ–ದೇವನಹಳ್ಳಿ, ಬೆಂಗಳೂರು ನಗರ– ಯಶವಂತಪುರ–ಯಲಹಂಕ, ದೇವನಹಳ್ಳಿ– ಚಿಕ್ಕಬಳ್ಳಾಪುರ, ಬೆಂಗ­ಳೂರು ನಗರ–ಯಲಹಂಕ–ದೇವನ­ಹಳ್ಳಿ– ಚಿಕ್ಕಬಳ್ಳಾಪುರ–ಶಿಡ್ಲಘಟ್ಟ– ಚಿಂತಾಮಣಿ–ಕೋಲಾರ ರೈಲುಗಳು ಸಹ ಇದರಲ್ಲಿ ಸೇರಿವೆ.

ರಾಷ್ಟ್ರೀಯ ಹೆದ್ದಾರಿಯಿಂದ  ವಿಮಾನ ನಿಲ್ದಾಣದ ಕಡೆಗೆ ಸಾಗುವ ಮೇಲ್ಸೇತುವೆ ಬಳಿ ಯಾವುದೇ ರೈಲ್ವೆ ನಿಲ್ದಾಣ ಇಲ್ಲ. ವಿಮಾನ ನಿಲ್ದಾಣಕ್ಕೆ ತೆರಳುವವರು ದೇವನಹಳ್ಳಿ ರೈಲು ನಿಲ್ದಾಣದಿಂದ ಇಳಿದು ಹೋಗಬೇಕಿದೆ. ವಿಮಾನ ನಿಲ್ದಾಣ– ದೇವನಹಳ್ಳಿ ನಡುವಿನ ಅಂತರ ಎಂಟು ಕಿ.ಮೀ. ಈಗ ವಿಮಾನ ನಿಲ್ದಾಣಕ್ಕೆ ತೆರಳುವವರು ಬಿಎಂಟಿಸಿ ವೋಲ್ವೊ ಬಸ್‌ ಅಥವಾ ಕ್ಯಾಬ್‌ ಅಥವಾ ಸ್ವಂತ ವಾಹನವನ್ನು ಬಳಸಬೇಕಿದೆ. ‘ನಮ್ಮ ಮೆಟ್ರೊ’ ಮೂರನೇ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಜಾಲವನ್ನು ಒದಗಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಚಿಂತನೆ ನಡೆಸಿದೆ.

ಈಗಿರುವ ರೈಲ್ವೆ ಮಾರ್ಗವನ್ನೇ ಬಳಸುವುದೇ ಹಾಗೂ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವುದೇ ಎಂಬ ಬಗ್ಗೆ ಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಈ ಮಾರ್ಗದಲ್ಲಿ ವಿರಳ ರೈಲುಗಳ ಕಾರಣದಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರದಿಂದ ಪ್ರತಿನಿತ್ಯ ನಗರಕ್ಕೆ ಬರುವವರು ಬಸ್‌ಗಳ ಮೊರೆ ಹೋಗಿ­ದ್ದಾರೆ. ಬೆಳಿಗ್ಗೆ ಸಂಚಾರ ನಡೆಸುವ ರೈಲು ನಗರಕ್ಕೆ ಬರುವಾಗ ವಿಳಂಬವೂ ಆಗುತ್ತಿದೆ. ಒಂದು ವೇಳೆ ರೈಲುಗಳ ಸಂಖ್ಯೆ ಹೆಚ್ಚಿಸಿದರೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ ನಿಲ್ದಾಣ ನಿರ್ಮಿಸಿದರೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.