ADVERTISEMENT

ಕೆಎಫ್‌ಸಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:45 IST
Last Updated 20 ನವೆಂಬರ್ 2014, 19:45 IST

ಬೆಂಗಳೂರು: ‘ಮೀನಾಕ್ಷಿ ಮಾಲ್‌ನ ಕೆಎಫ್‌ಸಿಗೆ ಊಟಕ್ಕೆ ತೆರಳಿದ್ದಾಗ ಅಲ್ಲಿನ ವ್ಯವಸ್ಥಾಪಕ ಮೊಬೈಲ್‌ನಲ್ಲಿ ನನ್ನ ಛಾಯಾಚಿತ್ರ ಸೆರೆ ಹಿಡಿದಿದ್ದಾನೆ’ ಎಂದು ಆರೋಪಿಸಿ 21 ವರ್ಷದ ಯುವತಿ ಹುಳಿಮಾವು ಠಾಣೆಗೆ ದೂರು ಕೊಟ್ಟಿದ್ದಾರೆ.

ದೂರು ಕೊಟ್ಟ ಯುವತಿ ಅಸ್ಸಾಂ ಮೂಲದವರು. ನಗರದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಇತ್ತೀಚೆಗೆ ಉದ್ಯೋಗ ತ್ಯಜಿ ಸಿದ್ದರು. ನ.2ರಂದು ಅವರು ಸ್ನೇಹಿತರ ಜತೆ ಊಟಕ್ಕೆಂದು ಕೆಎಫ್‌ಸಿಗೆ ಹೋಗಿದ್ದರು. ಯುವತಿ, ಬಲಗಾಲಿನ ಮಂಡಿ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ದಿನ ತುಂಡುಡುಗೆ ಧರಿಸಿದ್ದ ಕಾರಣ  ಟ್ಯಾಟೂ ಕಾಣಿಸುತ್ತಿತ್ತು. ಈ ವೇಳೆ ವ್ಯವಸ್ಥಾಪಕ ವಿವೇಕ್, ಮೊಬೈಲ್‌ನಲ್ಲಿ ಅದರ ಚಿತ್ರ ಕ್ಲಿಕ್ಕಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಛಾಯಾಚಿತ್ರ ಕ್ಲಿಕ್ಕಿಸಿದಾಗ ಮೊಬೈಲ್‌ ನಿಂದ ಬೆಳಕು ಬಂದಿತ್ತು. ಆಗ ಎಚ್ಚೆತ್ತು ಕೊಂಡ ಯುವತಿ, ಕೂಡಲೇ ಆತನ ಬಳಿ ಹೋಗಿ ಮೊಬೈಲ್ ಕಸಿದುಕೊಂಡಿದ್ದರು. ನಂತರ ಈ ಸಂಗತಿಯನ್ನು ಮಾಲೀಕರ ಗಮನಕ್ಕೆ ತಂದಿದ್ದರು. ಪೊಲೀಸರಿಗೆ ದೂರು ಕೊಡುವುದಾಗಿ ಕೆಎಫ್‌ಸಿಯಿಂದ ಹೊರ ನಡೆದಿದ್ದ ಯುವತಿ, ಆ ದಿನ ದೂರು ನೀಡದೆ ಮನೆಗೆ ಮರಳಿದ್ದರು.

ಪೋಷಕರು ಮತ್ತು ಕುಟುಂಬ ಸದಸ್ಯರ ಸಲಹೆ ಪಡೆದು ಯುವತಿ ನ.18ರಂದು ದೂರು ಕೊಟ್ಟಿದ್ದಾರೆ. ಘಟನಾ ದಿನವೇ ಕೆಎಫ್‌ಸಿ ಮಾಲೀಕರು ವಿವೇಕ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಕೋಡಿಚಿಕ್ಕನಹಳ್ಳಿಯಲ್ಲಿ ವಾಸವಾಗಿದ್ದ ಆತ, ಮನೆ ಖಾಲಿ ಮಾಡಿದ್ದಾನೆ.

ಆರೋಪಿ ನಾಪತ್ತೆ; ಯುವತಿ ಕೊಟ್ಟ ದೂರಿನ ಅನ್ವಯ ವಿವೇಕ್‌ ವಿರುದ್ಧ ಮಹಿಳೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಆರೋಪ (ಐಪಿಸಿ 354) ಹಾಗೂ  ಅಶ್ಲೀಲ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ (ಐಪಿಸಿ 509) ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಫ್‌ಸಿ ನೌಕರರಿಂದ ಆರೋಪಿಯ ಮೊಬೈಲ್‌ ಸಂಖ್ಯೆ ಪಡೆದು ಪತ್ತೆ ಕಾರ್ಯ ನಡೆಸುತ್ತಿದ್ದೇವೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೇಪಟ್ ‘ಪ್ರಜಾವಾಣಿ’ಗೆ ತಿಳಿಸಿದರು

ಕಟ್ಟಡದಿಂದ ಬಿದ್ದು ಸಾವು: ಬನ್ನೇರುಘಟ್ಟ ಸಮೀಪದ ಅರಕೆರೆಯಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಹನುಮಂತು (26) ಎಂಬುವರು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಅರಕೆರೆ ನಿವಾಸಿಯಾದ ಹನುಮಂತು ಕಟ್ಟಡದಲ್ಲಿ ಗಾರೆ ಕೆಲಸ ಮಾಡು ತ್ತಿದ್ದರು. ಈ ವೇಳೆ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ತೀವ್ರವಾಗಿ ಗಾಯ ಗೊಂಡಿದ್ದ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕಟ್ಟಡದ ಮಾಲೀಕರು ಹಾಗೂ ಗುತ್ತಿಗೆದಾರನ ವಿರುದ್ಧ ಹುಳಿಮಾವು ಠಾಣೆಯಲ್ಲಿ  ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT