ADVERTISEMENT

ಕೆಎಲ್‌ಇ ಕಾಲೇಜಿನ ಪ್ರಾಂಗಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 19:30 IST
Last Updated 23 ಜುಲೈ 2016, 19:30 IST
ಹೊಸ ಪ್ರಾಂಗಣವನ್ನು ಕೇಂದ್ರ ಸಚಿವ  ಅರುಣ್ ಜೇಟ್ಲಿ ಉದ್ಘಾಟಿಸಿದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಇದ್ದಾರೆ –ಪ್ರಜಾವಾಣಿ ಚಿತ್ರ
ಹೊಸ ಪ್ರಾಂಗಣವನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಉದ್ಘಾಟಿಸಿದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯು (ಕೆಎಲ್‌ಇ) ನಿರ್ಮಿಸಿರುವ ಕಾನೂನು ವಿದ್ಯಾಲಯದ ನೂತನ ಪ್ರಾಂಗಣವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  ಶನಿವಾರ ಉದ್ಘಾಟಿಸಿದರು.  

ಸುಮಾರು 30 ಸಾವಿರ ಚದರ ಅಡಿ ವಿಸ್ತಾರದ ಈ ಪ್ರಾಂಗಣ ನಿರ್ಮಾಣಕ್ಕೆ ₹20 ಕೋಟಿಗೂ ಅಧಿಕ ವೆಚ್ಚವಾಗಿದೆ. ಸುಮಾರು ಮೂರು ಎಕರೆಯಲ್ಲಿ ವ್ಯಾಪಿಸಿರುವ  ಪ್ರಾಂಗಣದಲ್ಲಿ  ನಿರ್ಮಾಣ ವಾಗಿರುವ ಹೊಸ ಕಟ್ಟಡದಲ್ಲಿ ಐದು ಮಹಡಿಗಳಿವೆ. ನೆಲ ಮಹಡಿ ಸೇರಿದಂತೆ ಮೂರು ಮಹಡಿಗಳ ಕೆಲಭಾಗ ಗ್ರಂಥಾಲಯಕ್ಕೆ ಮೀಸಲಿಡ
ಲಾಗಿದೆ.

ಒಂದರಿಂದ 4 ಮಹಡಿಯಲ್ಲಿ ಪಾಠದ ಕೊಠಡಿಗಳು ಹಾಗೂ ಬೋಧಕ ಸಿಬ್ಬಂದಿಯ ಕಚೇರಿಗಳಿವೆ. ಐದನೇ ಮಹಡಿಯಲ್ಲಿ ವಿಶಾಲವಾದ ಸಭಾಂ
ಗಣವಿದ್ದು, ಆಡಿಯೊ, ವಿಡಿಯೊ ಸೌಲಭ್ಯವನ್ನು ಹೊಂದಿದೆ. 150 ಜನ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಅಣಕು ನ್ಯಾಯಾಲಯ:  ನಾಲ್ಕನೇ ಮಹಡಿಯಲ್ಲಿ ಅಣಕು ನ್ಯಾಯಾಲಯ ನಡೆಸಲು ಸ್ಥಾಪಿಸಿರುವ ವಿಶೇಷ ಕೊಠಡಿ ಕ್ಯಾಂಪಸ್‌ನ ವಿಶೇಷ. ಇದು ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ನೈಜ  ನ್ಯಾಯಾಲಯದ ಅನುಭವ ನೀಡು
ವಂತಿದೆ.

ಸುಸಜ್ಜಿತ ಗ್ರಂಥಾಲಯ: ಕ್ಯಾಂಪಸ್‌ನಲ್ಲಿ 18 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವಿದೆ. ಜತೆಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಸುಲಭ್ಯ
ಗಳಿರುವ ಇ–ಗ್ರಂಥಾಲಯ ಮತ್ತು ವೈ–ಫೈ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಕಾನೂನು ಶಿಕ್ಷಣದ ಚಿತ್ರಣವೇ ಬದಲು: ಜೇಟ್ಲಿ

‘ಜಾಗತೀಕರಣ, ಆರ್ಥಿಕತೆ ಹಾಗೂ ತಂತ್ರಜ್ಞಾನ - ಈ ಮೂರು ಅಂಶಗಳು ದೇಶದಲ್ಲಿನ ಕಾನೂನು ಶಿಕ್ಷಣದ ಚಿತ್ರಣವನ್ನೇ ಬದಲಿಸಿವೆ. ವೈದ್ಯಕೀಯ ಮಾದರಿಯಲ್ಲಿ ಕಾನೂನು ಶಿಕ್ಷಣದಲ್ಲೂ ನಿರ್ದಿಷ್ಟ ವಿಷಯದ ತಜ್ಞತೆಗೆ ಭವಿಷ್ಯದಲ್ಲಿ  ಹೆಚ್ಚು ಬೆಲೆ ಸಿಗಲಿದೆ’ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟರು.
‘ಅಪರಾಧದ ಸ್ವರೂಪ ಬದಲಾಗುತ್ತಿರುವ ಈ ದಿನಗಳಲ್ಲಿ, ಸಾಂಪ್ರದಾಯಿಕ ಕ್ರಿಮಿನಲ್‌ ಹಾಗೂ ಸಿವಿಲ್‌ ಕ್ಷೇತ್ರಗಳಿಗಿಂತ ಹೆಚ್ಚಿನ ತಜ್ಞತೆ ಬೇಕಿದೆ. ನಿರ್ದಿಷ್ಟ ವಿಷಯದಲ್ಲಿ ವಿಶೇಷ ಪ್ರಾವೀಣ್ಯ ಸಾಧಿಸಿದವರು ಮಾತ್ರವೇ ಯಶಸ್ವಿ ವಕೀಲರಾಗಲು ಸಾಧ್ಯ’ ಎಂದರು. ‘ನೀತಿ ನಿರೂಪಣೆಯಲ್ಲಿ ನೆರವಾಗುವಂಥ ವಕೀಲರ ಅಗತ್ಯವಿದೆ’ ಎಂದು ಅವರು ಹೇಳಿದರು.
ಕೆಎಲ್‌ಇ ಸಂಸ್ಥೆಯ  ಕಾರ್ಯಾ ಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಆದಿಯಿಂದಲೂ ದಾನಿಗಳ ನೆರೆವಿನಿಂದ ನಡೆಯುತ್ತಿರುವ ಈ ಸಂಸ್ಥೆಯು ಇಂದು 252 ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ’ ಎಂದರು.
ಕೇಂದ್ರ ಸಚಿವ ಅನಂತ್‌ ಕುಮಾರ್ ಮಾತನಾಡಿ, ‘ಸಿಎಸ್ಆರ್‌(ಕಾರ್ಪೋರೆಟ್‌–ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ)  ಮಾದರಿಯಲ್ಲಿ  ಕಾನೂನು ವಿದ್ಯಾರ್ಥಿಗಳು ಎಲ್‌ಎಸ್‌ಆರ್‌(ಲಾ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ) ಹೊಂದಿರಬೇಕು. ವಂಚಿತರಿಗೆ, ದುರ್ಬಲರಿಗೆ, ಉಚಿತವಾಗಿ ಕಾನೂನು ಸೌಲಭ್ಯ ಒದಗಿಸಲು ಕಾನೂನು ಸಂಸ್ಥೆಗಳು ಮುಂದಾಗಬೇಕು’ ಎಂದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.