ADVERTISEMENT

ಕೆಎಸ್‌ಪಿಸಿಬಿಯಿಂದ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌

ಮಂಡೂರಿಗೆ ಸ್ಥಗಿತಗೊಳ್ಳದ ಕಸ ಸಾಗಾಟ: ತ್ಯಾಜ್ಯ ನಿರ್ವಹಣೆಯಲ್ಲಿ ವೈಫಲ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:44 IST
Last Updated 20 ಅಕ್ಟೋಬರ್ 2014, 19:44 IST

ಬೆಂಗಳೂರು: ‘ಮಂಡೂರಿಗೆ ತ್ಯಾಜ್ಯ ಸಾಗಾಟದ ಪ್ರಮಾ­ಣ­ವನ್ನು ಕಡಿಮೆ ಮಾಡಲು ವಿಫಲ ಆಗಿರು­ವುದಕ್ಕೆ ನಿಮ್ಮ ವಿರುದ್ಧ ಏಕೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬಾರದು’ ಎಂದು ಕಾರಣ ಕೇಳಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿ­ಸಿಬಿ) ಷೋಕಾಸ್‌ ನೋಟಿಸ್‌ ಜಾರಿಮಾಡಿದೆ.

ಬಿಬಿಎಂಪಿ ಆಯುಕ್ತರಿಗೆ ಷೋಕಾಸ್‌ ನೋಟಿಸ್‌ ನೀಡಿದ್ದನ್ನು ಕೆಎಸ್‌ಪಿಸಿಬಿ ಅಧ್ಯಕ್ಷ ವಾಮನ್‌ ಆಚಾರ್ಯ ‘ಪ್ರಜಾವಾಣಿ’ಗೆ ಖಚಿತಪಡಿಸಿದರು. ‘ಕಸದ ಸಮಸ್ಯೆ ನಿರ್ವಹಣೆಯಲ್ಲಿ ಆಗಿರುವ ಲೋಪಕ್ಕೆ ಯಾರು ಹೊಣೆ ಎಂಬುದನ್ನು ಗುರುತಿಸಬೇಕು ಎಂಬ ಒತ್ತಡ ಹೆಚ್ಚಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ನಗರದ ಕಸ ನಿರ್ವಹಣೆಯು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಸಮಸ್ಯೆ ನಿವಾರಣೆಗೆ ಕೆಎಸ್‌ಪಿಸಿಬಿಯಿಂದ ಏನು ಮಾಡಲಾಗಿದೆ ಎಂಬ ಪ್ರಶ್ನೆ ಮತ್ತೆ ಮತ್ತೆ ಕೇಳಿ ಬರು­ತ್ತಿದೆ. ವೈಫಲ್ಯಕ್ಕೆ ಯಾರು ಹೊಣೆ ಎನ್ನುವುದನ್ನು ಪತ್ತೆ ಮಾಡು­ವಂತೆ ಒತ್ತಡವೂ ಹೆಚ್ಚಾಗಿದೆ. ನಮ್ಮಲ್ಲಿ ಅಗತ್ಯ­ವಾದ ಸಿಬ್ಬಂದಿ ಬಲ ಇಲ್ಲ ಎಂದು ಹೇಳಿದರೂ ಒತ್ತಡ ಕಡಿಮೆಯಾಗಿಲ್ಲ. ಹೀಗಾಗಿ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ವಿವರಿಸಿದರು.

‘ವಿಶೇಷ ಆಯುಕ್ತ ದರ್ಪಣ್‌ ಜೈನ್‌ ಅವರು ಕಸದ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನ ನಡೆಸಿ­ದ್ದಾರೆ. ಆದರೆ, ಮಂಡೂರಿಗೆ ತ್ಯಾಜ್ಯ ಸಾಗಾಟ ನಿಲ್ಲಿ­ಸಲು ಇನ್ನೂ ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ತ್ಯಾಜ್ಯ ಸಂಸ್ಕರಣೆಗೆ 7–8 ಕಡೆ ಪ್ರಯತ್ನಗಳು ನಡೆ­ದಿವೆ. ಆದರೆ, ಅಲ್ಲಿ ಸಂಸ್ಕರಣೆ ಕಾರ್ಯ ಆರಂಭ­ವಾಗಲು ಇನ್ನೂ ಒಂದು ವರ್ಷವಾದರೂ ಬೇಕು. ಇನ್ನೊಂದು ತಿಂಗಳಲ್ಲಿ ಮಂಡೂರಿಗೆ ಕಸ ಸಾಗಾಟ ಮಾಡು­ವು­ದನ್ನು ಸ್ಥಗಿತಗೊಳಿಸುವ ಕುರಿತು ಅನು­ಮಾನ ಇದೆ. ನಾವು ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮ­ವಾಗಿ ಗಮನಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಕಸ ಸಂಗ್ರಹಕ್ಕೆ ಬಿಬಿಎಂಪಿ ಕೆಲವು ಸ್ಥಳಗಳನ್ನು ಗುರುತಿಸಿತ್ತು. ಆದರೆ, ಅದಕ್ಕೆ ಕೆಎಸ್‌ಪಿಸಿಬಿ ಅನುಮತಿ ನೀಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಬಿಬಿಎಂಪಿಗೆ ನೀಡಲಾದ ಷೋಕಾಸ್‌ ನೋಟಿಸ್‌ ವಾಪಸ್‌ ಪಡೆಯುವಂತೆ ಕೆಎಸ್‌ಪಿಸಿಬಿ ಮೇಲೆ ರಾಜ್ಯ ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳು ಭಾರಿ ಒತ್ತಡ ಹಾಕಿದ್ದರು ಎನ್ನಲಾಗಿದೆ. ಆದರೆ, ಕೆಎಸ್‌ಪಿಸಿಬಿ ತನ್ನ ನಿಲುವಿಗೆ ಬದ್ಧವಾಗಿ ನಿಂತಿದ್ದು, ನೋಟಿಸ್‌ ವಾಪಸ್‌ ಪಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.