ADVERTISEMENT

ಕೆರೆಗಳ ರಕ್ಷಣೆಗೆ ಒಕ್ಕೊರಲಿನ ಒತ್ತಾಯ

ರಾಜಕಾಲುವೆ ಅತಿಕ್ರಮಣ: ಅಧಿಕಾರಿ ವಿರುದ್ಧ ಹರಿಹಾಯ್ದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 19:55 IST
Last Updated 30 ಜುಲೈ 2014, 19:55 IST

ಬೆಂಗಳೂರು: ಒತ್ತುವರಿಯಿಂದ ಶರವೇಗದಲ್ಲಿ ಕಣ್ಮರೆ ಆಗುತ್ತಿರುವ ಕೆರೆಗಳ ದಯನೀಯ ಸ್ಥಿತಿಗೆ ಬುಧವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆ­ಯಲ್ಲಿ ಸದಸ್ಯರು ಪಕ್ಷಭೇದ ಮರೆತು ಕಾಳಜಿ ವ್ಯಕ್ತ­ಪಡಿಸಿದರು. ಒತ್ತುವರಿ ತೆರವುಗೊಳಿಸಿ ಕೆರೆಗಳ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿದ ಡಿ.ಜಿ. ಹಳ್ಳಿ ವಾರ್ಡ್‌ ಸದಸ್ಯ ಆರ್‌. ಸಂಪತ್‌ರಾಜ್‌, ‘ಹೊರಮಾವು ಕೆರೆಯನ್ನು ಒತ್ತುವರಿ ಮಾಡಿ ಅಪಾರ್ಟ್‌­ಮೆಂಟ್‌ ನಿರ್ಮಿಸುವ ಪ್ರಯತ್ನಗಳು ನಡೆದಿವೆ. ಕೊಳಚೆ ನೀರು ಸಹ ಕೆರೆಗೆ ಬಂದು ಸೇರುತ್ತಿದೆ. ಕೆರೆ ವಿಸ್ತೀರ್ಣದ ಸಮೀಕ್ಷೆ ನಡೆಸಿ, ಸುತ್ತಲೂ ಬೇಲಿ ಹಾಕಿಸಬೇಕು’ ಎಂದು ಒತ್ತಾಯಿಸಿದರು. ಹೊರಮಾವು ವಾರ್ಡ್‌ ಸದಸ್ಯೆ ತೇಜಸ್ವಿನಿ ರಾಜು ಸಹ ಸಂಪತ್‌ರಾಜ್‌ ಅವರಿಗೆ ದನಿಗೂಡಿಸಿದರು.

ಜಯಮಹಲ್‌ ವಾರ್ಡ್‌ ಸದಸ್ಯ ಎಂ.ಕೆ. ಗುಣಶೇಖರ್‌, ‘ನಗರ ವ್ಯಾಪ್ತಿಯಲ್ಲಿನ ಎಲ್ಲ ಕೆರೆಗಳಿಗೆ ಬಿಬಿಎಂಪಿಯೇ ಪಾಲಕ ಸಂಸ್ಥೆಯಾ­ಗಿದೆ. ಹೈಕೋರ್ಟ್‌ ಸಹ ಕೆರೆಗಳ ಸಂರಕ್ಷಣೆಗೆ ನಿರ್ದೇ­ಶನ ನೀಡಿದೆ. ಹೀಗಾಗಿ ಕೆರೆಗಳ ಸಂರಕ್ಷಣೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕಿದೆ’ ಎಂದರು.

‘ನಗರದಲ್ಲಿ ಎಷ್ಟು ಕೆರೆಗಳಿವೆ, ಅವುಗಳ ಸ್ಥಿತಿ ಹೇಗಿದೆ, ಒತ್ತುವರಿ ಆಗಿದ್ದು ಎಷ್ಟು, ತೆರವುಗೊ­ಳಿಸಿದ ಪ್ರಮಾಣ ಎಷ್ಟು ಎಂಬ ವಿವರವುಳ್ಳ ಶ್ವೇತಪತ್ರವನ್ನು ತರಬೇಕು’ ಎಂದು ಆಗ್ರಹಿಸಿ­ದರು.

ಜೆಡಿಎಸ್‌ ನಾಯಕ ಆರ್‌. ಪ್ರಕಾಶ್‌, ‘ನಗರದಲ್ಲಿ ಹೆಚ್ಚುತ್ತಿರುವ ಬಹುಮಹಡಿ ಕಟ್ಟಡ­ಗಳೇ ಕೆರೆಗಳ ಇಂದಿನ ದಯನೀಯ ಸ್ಥಿತಿಗೆ ಕಾರಣವಾಗಿವೆ. ಸಂಚಾರ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆ ಎಲ್ಲದಕ್ಕೂ ಈ ಬಹುಮಹಡಿ ಕಟ್ಟಡಗಳೇ ಕಾರಣ’ ಎಂದು  ಅಭಿಪ್ರಾಯಪಟ್ಟರು.
‘ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆ­ಗಳ ಅತಿಕ್ರಮಣಕ್ಕೆ ಬಿಬಿಎಂಪಿ ನಗರ ಯೋಜನಾ ವಿಭಾಗದ ಅಧಿಕಾರಿಗಳೇ ಕಾರಣವಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ­ಬೇಕು. ಕೆರೆಗಳ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯಬೇಕು’ ಎಂದು ಅವರು ಆಗ್ರಹಿಸಿದರು.

ಕೆರೆ, ರಾಜಕಾಲುವೆಗಳ ಕುರಿತು 10 ದಿನ­ದಲ್ಲಿ ವಿಶೇಷ ಸಭೆ ಕರೆಯಲಾ­ಗು­ತ್ತದೆ ಎಂದು ಮೇಯರ್‌ ಸತ್ಯನಾರಾಯಣ ತಿಳಿಸಿದರು. ‘ನಗರದ 60 ಕೆರೆಗಳು ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ. ಅದರಲ್ಲಿ 26 ಕೆರೆಗಳ ಅತಿಕ್ರಮಣ­ವನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಕೆರೆಗಳಲ್ಲಿ 69 ಎಕರೆಯಷ್ಟು ಒತ್ತುವರಿ ಮಾಡ­ಲಾಗಿದ್ದು, ಅದನ್ನು ತೆರವುಗೊಳಿಸಲು ಬೆಂಗ­ಳೂರು ನಗರ ಜಿಲ್ಲಾಧಿಕಾರಿಗಳ ನೆರವಿ­ನಿಂದ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಆಯುಕ್ತ ಎಂ.ಲಕ್ಷ್ಮೀನಾರಾಯಣ ವಿವರಿಸಿದರು.

ರಾಜಕಾಲುವೆಗಳ ಅತಿಕ್ರಮಣ ತೆರವು ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು, ಕಾಲುವೆಗಳ ಪುನರ್‌ ವಿನ್ಯಾಸ ಮಾಡುವಲ್ಲಿ ಬೃಹತ್‌ ನೀರುಗಾ­ಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಎಚ್‌.ಸಿ. ಅನಂತಸ್ವಾಮಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ನಾಯಕ ಅಶ್ವತ್ಥನಾರಾಯಣ ಗೌಡ ಸಹ ಅದಕ್ಕೆ ದನಿಗೂಡಿಸಿದರು.

ಅನುದಾನದ ಕೊರತೆಯಿಂದ ಕೆಲಸ ವಿಳಂಬ­ವಾಗಿದೆ. ಜವಾಹರಲಾಲ್‌ ನೆಹರೂ ನಗರ ಪುನ­ರು­ಜ್ಜೀವನ ಯೋಜನೆ (ಜೆ–ನರ್ಮ್‌) ಯೋಜನೆ­ಯಿಂದ ಅನುದಾನ ಲಭ್ಯವಾಗಲಿದ್ದು, ರಾಜಕಾ­ಲುವೆ ಯೋಜನೆಗಳಿಗೆ ವೇಗ ನೀಡಲಾಗುವುದು ಎಂದು ಆಯುಕ್ತರು ಸ್ಪಷ್ಟನೆ ನೀಡಿದರು.

‘ನಾನು ಬೆಂಗಳೂರಿನ ರಸ್ತೆ. ಮೊದಲು 4ರಿಂದ 5 ವರ್ಷ ಬದುಕಿರುತ್ತಿದ್ದೆ. ಈಗ ನನ್ನ ಆಯುಷ್ಯ 6 ತಿಂಗಳಿಗೆ ಇಳಿದಿದೆ. ನನ್ನ ಆಯುಷ್ಯನ್ನು ಕಿತ್ತಿಕೊಂಡವರು ಯಾರು?’

ಬೆಂಗಳೂರು ರಸ್ತೆಯ ಆತ್ಮಕಥೆ
ಹೊಸಹಳ್ಳಿ ವಾರ್ಡ್‌ ಸದಸ್ಯ ಡಾ.ಎಸ್‌.ರಾಜು ರಸ್ತೆಯ ದುಃಸ್ಥಿತಿಯನ್ನು ಅದರದೇ ಆತ್ಮಕಥೆ ರೂಪದಲ್ಲಿ ಹೇಳುವ ಮೂಲಕ ಗಮನಸೆಳೆದರು. ‘ನನ್ನ ಮೇಲೆ ಕರಿಬಣ್ಣ ಬಳಿದಂತೆ ಮುಂದೆ, ಮುಂದೆ ಟಾರು ಹಾಕುತ್ತಾ ಹೋಗಲಾಗುತ್ತದೆ. ಹಿಂದಿನಿಂದ ಜಲಮಂಡಳಿ, ಬೆಸ್ಕಾಂ ಮತ್ತು ದೂರ ಸಂಪರ್ಕ ಕಂಪೆನಿಗಳು ನನ್ನ ಒಡಲನ್ನು ಸೀಳುತ್ತಾ, ಅತ್ಯಾಚಾರ ನಡೆಸುತ್ತಿವೆ.  ನನ್ನ ಈ ಸ್ಥಿತಿಗೆ ಯಾರು ಕಾರಣ?
‘ನನ್ನ ಮೇಲೆ ಶಾಮಿಯಾನ ಹಾಕುತ್ತಿದ್ದವರಿಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ‘ಈ ರಸ್ತೆಯೇನು ನಿಮ್ಮಪ್ಪನದೇ’ ಎನ್ನುತ್ತಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸುವವರೂ ‘ನಿಮ್ಮಪ್ಪನದೇ’ ಎಂದು ಪ್ರತಿಯಾಗಿ ಕೇಳುತ್ತಾರೆ. ನಿಜವಾಗಿ ನನ್ನ ಅಪ್ಪ ಯಾರು? ನನ್ನನ್ನು ದುರ್ಬಲ ಮಾಡುವ ವ್ಯಕ್ತಿಗೆ ಏಕೆ ಟೆಂಡರ್‌ ಕೊಡುತ್ತೀರಿ..’ ಆತ್ಮಕಥೆ ಹೀಗೇ ಮುಂದುವರಿಯಿತು.

ಮಧ್ಯದಲ್ಲೇ ನಿಂತ ರಸ್ತೆ!
ವಿಜ್ಞಾನಪುರ ವಾರ್ಡ್‌ ಸದಸ್ಯ ಪಿ.ಸುಗುಮಾರ್‌, ಎರಡು ತುದಿಗಳಲ್ಲಿ ವಿಸ್ತರಣೆಯಾಗಿ ಮಧ್ಯದಲ್ಲೇ ಹಾಗೇ ಉಳಿದ ವಿಜನಾಪುರ ರಸ್ತೆ ಕುರಿತು ಸಭೆಯ ಗಮನ ಸೆಳೆದರು. ‘ರೂ 6.5 ಕೋಟಿ ಮೊತ್ತದ ಈ ಕಾಮಗಾರಿ ಪೂರ್ಣಗೊಳ್ಳದೆ ಜನ ತೊಂದರೆ ಅನುಭವಿಸುತ್ತಿದ್ದಾರೆ. 2.8 ಕಿ.ಮೀ. ಉದ್ದದ ಈ ರಸ್ತೆಯ ಎರಡೂ ತುದಿಗಳಲ್ಲಿ

ವಿಸ್ತರಣೆ ಮಾಡಲಾಗಿದ್ದರೂ ರೈಲ್ವೆ ನಿಲ್ದಾಣದ ಬಳಿ ಕಿಷ್ಕಿಂಧೆಯಂತಹ ರಸ್ತೆ ಹಾಗೇ ಉಳಿದಿದೆ. ಈ ರಸ್ತೆಯಲ್ಲಿ ನಿತ್ಯ ಸರಾಸರಿ 30 ಸಾವಿರ ವಾಹನಗಳು ಸಂಚರಿಸುತ್ತಿದ್ದು ದಟ್ಟಣೆ ಉಂಟಾಗುತ್ತಿದೆ’ ಎಂದು ವಿವರಿಸಿದರು. ‘ಬಾಕಿ ಉಳಿದ ರಸ್ತೆ ವಿಸ್ತರಣೆ ಕೆಲಸವನ್ನು ತಕ್ಷಣ ಮುಗಿಸಲಾಗುವುದು’ ಎಂದು ಆಯುಕ್ತರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.