ADVERTISEMENT

ಕೇಂದ್ರದ ಅಧಿಕಾರಿಗಳ ಪರಿಶೀಲನೆ

ರಾಸಾಯನಿಕ ತ್ಯಾಜ್ಯದಿಂದ ಮಲೀನಗೊಂಡ ಕೆರೆ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:30 IST
Last Updated 2 ಮೇ 2015, 19:30 IST

ಬೆಂಗಳೂರು: ರಾಸಾಯನಿಕ ತ್ಯಾಜ್ಯದಿಂದ ಮಲೀನಗೊಂಡಿರುವ ಮಹದೇವಪುರ ಕ್ಷೇತ್ರದ ವರ್ತೂರು ಕೆರೆಗೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವಿಶೇಷ ತಂಡ ಹಾಗೂ ಸಂಸದ ಪಿ.ಸಿ.ಮೋಹನ್‌ ಶನಿವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಡಳಿ ಅಧ್ಯಕ್ಷ ಎಸ್‌. ಸುರೇಶ್, ಪರಿಸರ ವಿಜ್ಞಾನಿ ರಾಧೆ ಶ್ಯಾಮ್‌ ಬಾಲಾಜಿ ಅವರ ನೇತೃತ್ವದ ಅಧಿಕಾರಿಗಳ ತಂಡವು, ಕೆರೆ ಕೋಡಿ ಬಳಿ ಪರೀಶಿಲನೆ ನಡೆಸಿತು. ಈ ವೇಳೆ ಕೆರೆ ನೀರಿನ ಮಾದರಿ ಮತ್ತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲಾಯಿತು.

‘ರಾಜಾಜಿನಗರದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಕೆರೆಯ ನೀರನ್ನು ಕೂಲಂಕುಷವಾಗಿ ಪರೀಕ್ಷಿಸಲಾಗುತ್ತದೆ. ನೀರು ಕಲುಷಿತಗೊಳ್ಳಲು ಕಾರಣವಾದ ಅಂಶಗಳನ್ನು ಪತ್ತೆಮಾಡಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುತ್ತದೆ’ ಎಂದು ತಂಡದ ಅಧಿಕಾರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ‘ಕೆರೆ ಕಲುಷಿತಗೊಂಡಿರುವ ಕುರಿತು ಈಗಾಗಲೇ ಸಂಬಂಧಪಟ್ಟ ಕೇಂದ್ರದ ಸಚಿವರೊಂದಿಗೆ ಚರ್ಚೆ ನಡೆಸಿರುವೆ. ಕೆರೆ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಕೇಂದ್ರದಿಂದ ಹಣ ಬಿಡುಗಡೆಯಾಗಲಿದೆ. ರಾಜ್ಯ ಸರ್ಕಾರ ಕೂಡ ಈ ಕಾರ್ಯದಲ್ಲಿ ಸಹಕಾರ  ನೀಡಬೇಕು’ ಎಂದರು.

‘ಕೆರೆಗೆ ಅಪಾಯಕಾರಿ ಮಾಲಿನ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಸ್ಕರಣಾ ಘಟಕ ಅಳವಡಿಸುವಂತೆ ಆದೇಶ ನೀಡಬೇಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಈಗಾಗಲೇ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಬಿಡಿಎಗೆ ಮನವಿ ಮಾಡಲಾಗಿದೆ. ಆದರೆ,  ಬಿಡಿಎ ಅಧಿಕಾರಿಗಳು ಅದು ಜಲಮಂಡಳಿಗೆ ಸಂಬಂಧಿಸಿದ ವಿಚಾರವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೆರೆ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಕ್ರಮಕೈಗೊಳ್ಳಬೇಕು’ ಎಂದು  ಅಧಿಕಾರಿಗಳಿಗೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.