ADVERTISEMENT

ಕೈಕಾಲು ಕಟ್ಟಿದ್ದಕ್ಕೆ ರಾಯಭಾರಿ ಆಕ್ಷೇಪ

ಉಗಾಂಡ ವಿದ್ಯಾರ್ಥಿನಿಯ ರಂಪಾಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST
ಕೈಕಾಲು ಕಟ್ಟಿದ್ದಕ್ಕೆ ರಾಯಭಾರಿ ಆಕ್ಷೇಪ
ಕೈಕಾಲು ಕಟ್ಟಿದ್ದಕ್ಕೆ ರಾಯಭಾರಿ ಆಕ್ಷೇಪ   

ಬೆಂಗಳೂರು: ಮದಿರೆಯ ನಶೆಯಲ್ಲಿ ನ್ಯಾಷನಲ್ ಮಾರ್ಕೆಟ್ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ರಂಪಾಟ ಮಾಡಿದ ಉಗಾಂಡ ಯುವತಿ ನಂಫ್ಲಿಮಾ ಮರಿಯನ್‌ಳನ್ನು ಕೈ–ಕಾಲು ಕಟ್ಟಿ ನಿಯಂತ್ರಿಸಿದ್ದಕ್ಕೆ ಆಫ್ರಿಕಾ ರಾಯಭಾರಿ ಕಚೇರಿ ಆಕ್ಷೇಪ ವ್ಯಕ್ತಪಡಿಸಿದೆ. ‘ಯುವತಿ ನಡುರಸ್ತೆಯಲ್ಲಿ ದುರ್ವರ್ತನೆ ತೋರಿದ್ದಾಳೆ ನಿಜ. ಹಾಗಂಥ ಕೈ–ಕಾಲಿಗೆ ಹಗ್ಗ ಕಟ್ಟಿದ್ದು ಸರಿಯಲ್ಲ. ಇಂಥ ಅಧಿಕಾರ ಕೊಟ್ಟವರು ಯಾರು’ ಎಂದು ಆಫ್ರಿಕಾ ರಾಯಭಾರಿ ಕಚೇರಿ ಅಧಿಕಾರಿ ಗಳು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ‘ಮರಿಯನ್ ಹಾಗೂ ಆಕೆಯ ಪ್ರಿಯಕರ ಯೇಸುದಾಸ್ ವಿಪರೀತ ಮದ್ಯ ಕುಡಿದಿದ್ದರು. ನಿಯಂತ್ರಿಸಲು ಮುಂದಾದ ಪೊಲೀಸ್ ಹಾಗೂ ಆಟೊ ಚಾಲಕನ ಕೈಯನ್ನೂ ಆಕೆ ಕಚ್ಚಿದ್ದಳು. ರಂಪಾಟ ನೋಡಲಾಗದೆ ಸಾರ್ವಜನಿಕರೇ ಮರಿಯನ್‌ಳ ಕೈ–ಕಾಲು ಕಟ್ಟಿ ಹಾಕಿದರು. ಆ ನಂತರ ಮಹಿಳಾ ಪೊಲೀಸರು ಆಕೆಯನ್ನು ಆಟೊದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ರಾಯಭಾರಿ ಕಚೇರಿಗೆ ವಿವರಣೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಇಳಿದ ಅಮಲು: ‘ಮರಿಯನ್‌ಳನ್ನು ಕೆ.ಸಿ.ಜನರಲ್ ಆಸ್ಪತ್ರೆಯಿಂದ ಸೋಮವಾರ ರಾತ್ರಿ ನಿಮ್ಹಾನ್ಸ್‌ಗೆ ವರ್ಗಾಯಿಸಲಾಗಿತ್ತು. ಮದ್ಯ ನಿರೋಧಕ ಚುಚ್ಚುಮದ್ದು ನೀಡಿದ ಬಳಿಕ ಆಕೆಯ ಅಮಲು ಇಳಿದಿದೆ. ಮಂಗಳವಾರ ಬೆಳಿಗ್ಗೆ ಸಹಜ ಸ್ಥಿತಿಗೆ ಮರಳಿದ್ದಾಳೆ’.

‘ನ್ಯಾಷನಲ್‌ ಮಾರ್ಕೆಟ್‌ನಲ್ಲಿ ಕೈನಿಂದ ಅಂಗಡಿಯ ಗಾಜು ಒಡೆದಿದ್ದರಿಂದ ಆಕೆಯ ಬೆರಳಿಗೆ ಗಾಯವಾಗಿದೆ. ಹೀಗಾಗಿ ನಿಮ್ಹಾನ್ಸ್‌ನಿಂದ ಸಂಜೆ ಸಂಜಯ್‌ಗಾಂಧಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಪ್ರಿಯಕರ ಯೇಸುದಾಸ್ ಸಹ ಆಕೆಯ ಜತೆಗೇ ಇದ್ದಾನೆ. ಬುಧವಾರ ಬೆಳಿಗ್ಗೆ ಅವರಿಬ್ಬರ ಮನೆ ಪರಿಶೀಲಿಸಿ, ವೀಸಾ–ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗುವುದು’.

ಒಬ್ಬರೇ ಸಿಬ್ಬಂದಿ: ‘ಸೋಮವಾರ ಯುವತಿ ರಂಪಾಟ ಸೃಷ್ಟಿಸಿದಾಗ ಉಪ್ಪಾರಪೇಟೆ ಠಾಣೆಯಲ್ಲಿ ಇದ್ದದ್ದು ಒಬ್ಬರೇ ಮಹಿಳಾ ಸಿಬ್ಬಂದಿ. ವಿಷಯ ತಿಳಿದ ಕೂಡಲೇ ಅವರು ಪುರುಷ ಸಿಬ್ಬಂದಿ ಜತೆ ಸ್ಥಳಕ್ಕೆ ಧಾವಿಸಿದ್ದರು. ಆದರೆ, ಮರಿಯನ್‌ಳನ್ನು ನಿಯಂತ್ರಿಸಲು ಅವರಿಂದ ಆಗಲಿಲ್ಲ’.
‘ಪುರುಷ ಸಿಬ್ಬಂದಿ ಆಕೆಯನ್ನು ಬಂಧಿಸುವುದು ಉಲ್ಲಂಘನೆ ಆಗುತ್ತದೆ ಎಂದು ಮತ್ತೆ ವಿವಿಧ ಠಾಣೆಗಳಿಂದ ಎಂಟು ಮಹಿಳಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.