ADVERTISEMENT

ಕೊಲೆ ಯತ್ನ ಆರೋಪ: ಉದ್ಯಮಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:36 IST
Last Updated 5 ಮಾರ್ಚ್ 2015, 19:36 IST

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಕೇರಳ ಜೈಲಿನಲ್ಲಿದ್ದ ಉದ್ಯಮಿ ಮಹಮದ್ ನಿಶಾಮ್‌ನನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಪ್ರಕರಣವೊಂದರ ವಿಚಾರಣೆ­ಗಾಗಿ ಬಾಡಿ ವಾರೆಂಟ್‌ ಮೇಲೆ ನಗರಕ್ಕೆ ಕರೆತಂದಿದ್ದಾರೆ.

ಆರೋಪಿಯು, 2014ರ ಡಿಸೆಂಬರ್‌22ರಂದು ನಗರದ ವಿಠಲ್‌ ಮಲ್ಯ ರಸ್ತೆಯಲ್ಲಿ ವ್ಯಾಪಾರಿ ಸುಮನ್‌ ಎಂಬುವರ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ್ದ. ಈ ಬಗ್ಗೆ ಸುಮನ್‌ ಅವರು ಕಬ್ಬನ್‌ಪಾರ್ಕ್‌ ಠಾಣೆಗೆ ದೂರು ಕೊಟ್ಟಿದ್ದರು. ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಕೇರಳದ ಕಿಂಗ್ಸ್‌ ಬೀಡಿ ಕಂಪೆನಿಯ ಮಾಲೀಕನಾಗಿರುವ ಮಹಮದ್‌ ನಿಶಾಮ್‌, ನಗರದ ಅಪಾರ್ಟ್‌ಮೆಂಟ್‌­ವೊಂದ­ರಲ್ಲಿ ವಾಸವಾಗಿದ್ದ. ಡಿ.22ರಂದು ಮಲ್ಯ ರಸ್ತೆಯಲ್ಲಿ ಹೋಗು­ತ್ತಿದ್ದಾಗ ಹಾರ್ನ್‌ ಮಾಡಿದ್ದನ್ನು ಪ್ರಶ್ನಿಸಿದ್ದ ಸುಮನ್‌ ಅವರ ಮೇಲೆ ಕಾರು ಹರಿಸಿ ಪರಾರಿಯಾಗಿದ್ದ.

ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆಗ ಮಹಮದ್, ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಕೇರಳ ಜೈಲಿನಲ್ಲಿ­ರುವುದು ಗೊತ್ತಾಯಿತು. ಆತನ್ನು ಬಾಡಿ ವಾರೆಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾ­ಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಮದ್‌, ತ್ರಿಶೂರ್‌ನ ಅಪಾರ್ಟ್‌ಮೆಂಟ್‌­ವೊಂದ­ರಲ್ಲಿ ವಾಸವಾಗಿದ್ದ. ಜ.29ರ ನಸುಕಿನಲ್ಲಿ ಅಪಾರ್ಟ್‌­ಮೆಂಟ್‌ಗೆ ಬಂದಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ಕೆ.ಚಂದ್ರ­ಬೋಸ್ (50) ಅವರು ಗೇಟ್‌ ತೆಗೆಯಲು ತಡ ಮಾಡಿದ ಎನ್ನುವ ಕಾರಣಕ್ಕೆ ಆತನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದೆ ಅವರು ಫೆ.16ರಂದು ಮೃತಪಟ್ಟಿದ್ದರು. ಆರೋಪಿ ರಾಜ್ಯ, ಕೇರಳ ಮತ್ತು ತಮಿಳುನಾಡಿನಲ್ಲಿ ಬೀಡಿ, ರಿಯಲ್‌ ಎಸ್ಟೇಟ್‌ ಮತ್ತು ಆಭರಣ ಉದ್ಯಮ ಹೊಂದಿ­ದ್ದಾನೆ. ವಿಚಾರಣೆ ಮುಗಿದ ನಂತರ ಆತನನ್ನು ವಾಪಸ್‌ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.