ADVERTISEMENT

‘ಕೊಳೆಗೇರಿಗಳಲ್ಲಿ ಹುಟ್ಟಿದವರಿಗೂ ಮಾನ–ಮರ್ಯಾದೆ ಇದೆ’

ಹೆಣ್ಣು ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:18 IST
Last Updated 27 ಆಗಸ್ಟ್ 2016, 20:18 IST
ಕೃಪಾ ಅಮರ್‌ ಆಳ್ವ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು –ಪ್ರಜಾವಾಣಿ ಚಿತ್ರ
ಕೃಪಾ ಅಮರ್‌ ಆಳ್ವ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೊಳೆಗೇರಿಗಳಲ್ಲಿ ಸ್ನಾನದ ಗೃಹಗಳಿಲ್ಲದೆ, ಬಟ್ಟೆ ಕಟ್ಟಿಕೊಂಡು ಸ್ನಾನ ಮಾಡಬೇಕು. ಈ ವೇಳೆ ಪೋಲಿ ಹುಡುಗರು ಕದ್ದು ಮುಚ್ಚಿ ನೋಡುವುದು, ಕಲ್ಲು ಎಸೆಯುವುದನ್ನು ಮಾಡುತ್ತಾರೆ. ಇದರಿಂದ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ನಾವು ಕೊಳೆಗೇರಿಗಳಲ್ಲೇ ಹುಟ್ಟಿರಬಹುದು. ಆದರೆ, ನಮಗೂ ಮಾನ– ಮರ್ಯಾದೆ ಇದೆ.’

ವಿನೋಬಾನಗರದ ಕೊಳೆಗೇರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭವ್ಯ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್‌ ಆಳ್ವ ಅವರ ಮುಂದೆ ಹೇಳಿಕೊಂಡ ಸಮಸ್ಯೆಗಳಿವು.

ಶನಿವಾರ ನಡೆದ ‘ಕೊಳಚೆ ಪ್ರದೇಶಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಆಗುವ ಪರಿಣಾಮಗಳ ಕುರಿತ ಸಂವಾದ’ ದಲ್ಲಿ ಅವರು ಮಾತನಾಡಿದರು.

‘ಕೊಳೆಗೇರಿಗಳಲ್ಲಿ ಶೌಚಾಲಯ, ಸ್ನಾನದ ಗೃಹಗಳನ್ನು ನಿರ್ಮಿಸಬೇಕು. ಗೌರವಯುತವಾಗಿ ಬದುಕುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಜತೆಗೆ  ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣವೊಂದೇ ನಮ್ಮ ಬದುಕನ್ನು ಬದಲಾಯಿಸಬಲ್ಲದು’ ಎಂದರು.

ನಾಯಂಡಹಳ್ಳಿ ಕೊಳೆಗೇರಿಯ ಚಾಂದಿನಿ ಮಾತನಾಡಿ, ‘ಎರಡು ವರ್ಷಗಳ ಹಿಂದೆ ನಮ್ಮ ಗುಡಿಸಿಲುಗಳಿಗೆ ಬೆಂಕಿ ಹಾಕಲಾಯಿತು. ಇದರಿಂದ ಪುಸ್ತಕಗಳು, ಬಟ್ಟೆಗಳು ಸುಟ್ಟು ಹೋದವು. ಪುಸ್ತಕ ಇಲ್ಲದೆ ಶಾಲೆಗೆ ಹೋಗಲು ಹಿಂದೇಟು ಹಾಕುವಂತಾಯಿತು. ಶಾಲಾ ಶಿಕ್ಷಕರು ಸಹ ನಮ್ಮನ್ನು ಕೀಳು ಭಾವನೆಯಿಂದ ನೋಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಶಾಲೆಗೆ ಹೋಗುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಸಂಜಯನಗರದ ಕೊಳೆಗೇರಿಯ ಕಾವ್ಯ ಮಾತನಾಡಿ, ‘ಕೆರೆಯಂಗಳದಲ್ಲಿ ಕಟ್ಟಿರುವ ಮನೆಗಳನ್ನು  ತೆರವುಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಮನೆ ಕಳೆದುಕೊಳ್ಳುವ ಭಯದಲ್ಲೇ ದಿನಗಳನ್ನು ಕಳೆಯುತ್ತಿದ್ದೇವೆ. ಇದರಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ’ ಎಂದು ದೂರಿದರು.

ಗರುಡಾ ಮಾಲ್‌ಗೆ ಜಾಗ: ‘ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೆ (ಇಡಬ್ಲ್ಯುಎಸ್) ಮೀಸಲಾದ ಜಾಗದಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಯಿತು.ಈ ಜಾಗವನ್ನು ಗರುಡಾ ಮಾಲ್‌ಗೆ ನಾಲ್ಕು ವರ್ಷಗಳ ಹಿಂದೆ ನೀಡಲಾಗಿದೆ. ಆ ಜಾಗ ಇಂದಿಗೂ ಖಾಲಿ ಬಿದ್ದಿದೆ’ ಎಂದು ಚೇತನಾ ಮಕ್ಕಳ ಒಕ್ಕೂಟದ ಪ್ರಭಾಕರ್‌, ನಂದಿನಿ ದೂರಿದರು.

***
ಸಿಎಂ ಗಮನಕ್ಕೆ

‘ಕೊಳೆಗೇರಿಗಳಲ್ಲಿ ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ’ ಎಂದು ಕೃಪಾ ಅಮರ್‌ ಆಳ್ವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತ ಪಟ್ಟಿ ನೀಡುವಂತೆ ಚೇತನಾ ಮಕ್ಕಳ ಒಕ್ಕೂಟದ ಸದಸ್ಯರಿಗೆ ಸೂಚಿಸಿದ್ದೇನೆ. ಅಲ್ಲದೆ, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ,  ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಸುತ್ತೇನೆ’ ಎಂದರು.

***
ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 16ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತೇವೆ.
-ಕೃಪಾ ಅಮರ್‌ ಆಳ್ವ, ಅಧ್ಯಕ್ಷೆ,ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT