ADVERTISEMENT

ಕ್ಯಾಬ್‌ ಚಾಲಕರ ‘ಪ್ರೋತ್ಸಾಹ ಭತ್ಯೆ’ಗೆ ಕತ್ತರಿ!

‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮ’ ಪಾಲನೆಯ ನೆಪ

ಸಂತೋಷ ಜಿಗಳಿಕೊಪ್ಪ
Published 28 ಜುಲೈ 2016, 19:44 IST
Last Updated 28 ಜುಲೈ 2016, 19:44 IST

ಬೆಂಗಳೂರು: ‘ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ’ ಒದಗಿಸುವ ಕಂಪೆನಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್‌ಗಳ ಚಾಲಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಭತ್ಯೆಗೆ ಕತ್ತರಿ ಬಿದ್ದಿದೆ.

ಆ್ಯಪ್‌ ಆಧಾರಿತ ಕಂಪೆನಿಗಳ ನಿಯಂತ್ರಣಕ್ಕಾಗಿ ಸಾರಿಗೆ ಇಲಾಖೆಯು ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಗಳು– 2016’ ಜಾರಿಗೆ ತಂದಿದೆ. ಈ ನಿಯಮದ ನೆಪದಲ್ಲೇ ಒಲಾ, ಉಬರ್‌ ಸೇರಿ ಇತರೆ ಕಂಪೆನಿಗಳು, ಚಾಲಕರಿಗೆ ನೀಡುತ್ತಿದ್ದ ಭತ್ಯೆಯನ್ನು ಶೇ 50ರಷ್ಟು ಕಡಿತಗೊಳಿಸಿವೆ.

‘ನಗರದಲ್ಲಿ ಕಂಪೆನಿಗಳು ಸೇವೆ ಆರಂಭಿಸಿದಾಗಿನಿಂದ ಸಾರಿಗೆ ಇಲಾಖೆಯ ಹೊಸ ನಿಯಮ ಜಾರಿಯಾಗುವರೆಗೂ ಪ್ರತಿ ಕ್ಯಾಬ್‌ಗೆ ₹6,500ರಿಂದ ₹8,000 ಪ್ರೋತ್ಸಾಹ ಭತ್ಯೆ ಸಿಗುತ್ತಿತ್ತು. ಈಗ ಆ ಭತ್ಯೆ ನೀಡಲು ನಿರಾಕರಿಸುತ್ತಿರುವ ಕಂಪೆನಿಗಳು, ಪ್ರತಿ ಕ್ಯಾಬ್‌ಗೆ ₹3,000 ಮಾತ್ರ ನಿಗದಿಗೊಳಿಸಿವೆ’ ಎಂದು ಒಲಾ ಕಂಪೆನಿ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರಿಗೆ ಇಲಾಖೆಯು ಹೊಸ ನಿಯಮ ಜಾರಿಗೊಳಿಸಿದ ಬಳಿಕ ಕಂಪೆನಿಗಳಿಗೆ ಭಾರಿ ಹೊಡೆತ ಬಿದ್ದಿತ್ತು. ಆಗ ಚಾಲಕರು ಹಾಗೂ ಮಾಲೀಕರು ನಿರಂತರವಾಗಿ ಪ್ರತಿಭಟನೆ ನಡೆಸಿ, ಕಂಪೆನಿಗಳಿಗೆ ಸಾಕಷ್ಟು ವಿನಾಯಿತಿಗಳನ್ನು   ಕೊಡಿಸಿದ್ದಾರೆ. ಆದರೆ ಕಂಪೆನಿಗಳು, ಚಾಲಕರು ಹಾಗೂ ಮಾಲೀಕರನ್ನೇ ಕಡೆಗಣಿಸುತ್ತಿವೆ’ ಎಂದು ಅವರು ದೂರಿದರು.

18 ಟ್ರಿಪ್‌ ಕಡ್ಡಾಯ: ‘ಇದುವರೆಗೂ ಕ್ಯಾಬ್‌ ಚಾಲಕ, ದಿನಕ್ಕೆ  18 ಟ್ರಿಪ್‌ ಓಡಿಸಬೇಕಿತ್ತು.  ಅದು ಕಡ್ಡಾಯವಿರಲಿಲ್ಲ. ಈಗ ಕಂಪೆನಿಗಳು, 18 ಟ್ರಿಪ್‌ ಓಡಿಸುವುದನ್ನು ಕಡ್ಡಾಯಗೊಳಿಸಿವೆ’ ಎಂದು ತನ್ವೀರ್‌ ತಿಳಿಸಿದರು.

‘ನಗರದ ಸಂಚಾರ ದಟ್ಟಣೆಯಲ್ಲಿ ಒಂದು ಟ್ರಿಪ್‌ ಓಡಿಸುವುದೇ ಕಷ್ಟ. ಹೀಗಿರುವಾಗ 18 ಟ್ರಿಪ್‌ ಕ್ಯಾಬ್‌ ಓಡಿಸುವುದಾದರೂ ಹೇಗೆ? ಆಕಸ್ಮಾತ್‌  ನಿರ್ದಿಷ್ಟಪಡಿಸಿದ ಟ್ರಿಪ್‌್ ಪ್ರಕಾರ ಕ್ಯಾಬ್‌ ಓಡಿಸದಿದ್ದರೆ ಪ್ರೋತ್ಸಾಹ ಭತ್ಯೆಯಲ್ಲಿ ಹಣವನ್ನು ಕಡಿತ ಮಾಡಿಕೊಳ್ಳುವುದಾಗಿ ಕಂಪೆನಿ ಹೇಳುತ್ತಿದೆ. ಈ ರೀತಿಯಾದರೆ ಭತ್ಯೆಯಲ್ಲಿ ಕನಿಷ್ಠ 300 ಹಾಗೂ ಗರಿಷ್ಠ 750ರವರೆಗೂ ಕಡಿತವಾಗುತ್ತದೆ’ ಎಂದು ತಿಳಿಸಿದರು.

‘ಬಹುಪಾಲು ಕ್ಯಾಬ್‌ಗಳಲ್ಲಿ ಮಾಲೀಕರೇ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಸಾಲ ಮಾಡಿ ಕ್ಯಾಬ್‌ ಖರೀದಿಸಿದ್ದು, ಅದರ ಮಾಸಿಕ ಕಂತು ಪಾವತಿಸುತ್ತಿದ್ದಾರೆ.

ಇಂದು ಕಂಪೆನಿಗಳ ವರ್ತನೆಯಿಂದಾಗಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ದಿನಕ್ಕೆ ₹8 ಸಾವಿರವರೆಗೆ ದುಡಿಮೆಯಾಗುತ್ತಿದ್ದು, ಈಗ ₹4 ಸಾವಿರಕ್ಕೆ ಬಂದು ನಿಂತಿದೆ. ಮಾಲೀಕರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಂಪೆನಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಂಪೆನಿ ವಿರುದ್ಧವೇ ಗಂಭೀರ ಸ್ವರೂಪದ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತನ್ವೀರ್‌ ಮಾಹಿತಿ ನೀಡಿದರು.

86 ಸಾವಿರ ಗಡಿ ದಾಟಿದ ಕ್ಯಾಬ್‌ಗಳು: ‘ಜುಲೈ 23ರವರೆಗಿನ ಅಂಕಿ– ಅಂಶಗಳ ಪ್ರಕಾರ ನಗರದಲ್ಲಿ ಆ್ಯಪ್‌ ಆಧರಿತ ಕಂಪೆನಿಗಳ ಅಡಿಯಲ್ಲಿ ಸೇವೆ ಒದಗಿಸುತ್ತಿರುವ ಕ್ಯಾಬ್‌ಗಳ ಸಂಖ್ಯೆ 86 ಸಾವಿರ ಗಡಿ ದಾಟಿದೆ.

‘ಒಲಾ ಕ್ಯಾಬ್ಸ್, ಟ್ಯಾಕ್ಸಿ ಫಾರ್‌ ಶೂರ್‌, ಉಬರ್‌ ಕ್ಯಾಬ್ಸ್, ಝೂಮ್‌, ಈಜಿ ಕ್ಯಾಬ್, ಸವಾರಿ ಡಾಟ್‌ ಕಾಂ, ಮೆಗಾ ಕ್ಯಾಬ್ಸ್, ಟ್ಯಾಬ್ ಕ್ಯಾಬ್, ವಿಂಗ್ಸ್ ರೇಡಿಯೊ ಕ್ಯಾಬ್ಸ್ ಹಾಗೂ ಸೆಲ್‌ ಕ್ಯಾಬ್ಸ್  ಸೇರಿ ಹಲವು ಕಂಪೆನಿಗಳು ನಗರದಲ್ಲಿವೆ. ಅವುಗಳಲ್ಲಿ ನೋಂದಣಿಯಾಗುತ್ತಿರುವ  ಕ್ಯಾಬ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದೇ ಕಾರಣಕ್ಕೆ ಭತ್ಯೆಯಲ್ಲೂ ಇಳಿಕೆ ಮಾಡಲಾಗಿದೆ’ ಎಂದು ಕ್ಯಾಬ್‌ ಕಂಪೆನಿಯೊಂದರ ಅಧಿಕಾರಿ ತಿಳಿಸಿದರು.

ಏನಿದು ಪ್ರೊತ್ಸಾಹ ಭತ್ಯೆ?
ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಕ್ಯಾಬ್‌ ಚಾಲಕರಿಗೆ ಕಂಪೆನಿಗಳು ನೀಡುವ ಹಣವೇ ಪ್ರೊತ್ಸಾಹ ಭತ್ಯೆ.

ಆ್ಯಪ್‌ ಮೂಲಕ ಗ್ರಾಹಕರು ಕ್ಯಾಬ್‌್ ಕಾಯ್ದಿರಿಸುತ್ತಾರೆ. ಗ್ರಾಹಕರು ಇರುವ ಸ್ಥಳಕ್ಕೆ ಹೋಗಿ, ಅವರನ್ನು ನಿಗದಿತ ಸ್ಥಳಕ್ಕೆ ಕ್ಯಾಬ್‌ ಚಾಲಕರು ಬಿಟ್ಟು ಬರುತ್ತಾರೆ. ಆಗ ಗ್ರಾಹಕರು, ಚಾಲಕರಿಗೆ ಬಾಡಿಗೆ ನೀಡುತ್ತಾರೆ. ಆ ಬಾಡಿಗೆ  ಹೊರತುಪಡಿಸಿ, ನಿಗದಿತ ಟ್ರಿಪ್‌್ ಪೂರ್ಣಗೊಳಿಸುವ ಚಾಲಕರಿಗೆ ಕಂಪೆನಿಗಳು, ಪ್ರೋತ್ಸಾಹ ಭತ್ಯೆ ನೀಡುತ್ತವೆ.

ಮುಖ್ಯಾಂಶಗಳು
* 86 ಸಾವಿರ ಗಡಿ ದಾಟಿದ ಕ್ಯಾಬ್‌ಗಳ ಸಂಖ್ಯೆ 

* ₹8 ಸಾವಿರದಿಂದ ₹3 ಸಾವಿರಕ್ಕೆ ಭತ್ಯೆ ಇಳಿಕೆ
* ಕಂಪೆನಿಗಳ ವಿರುದ್ಧ ಹೋರಾಟಕ್ಕೆ ಚಾಲಕರು, ಮಾಲೀಕರ ತೀರ್ಮಾನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.