ADVERTISEMENT

ಕ್ಷಮೆ ಕೇಳಿದ ಸೇಂಟ್‌ ಜಾನ್ಸ್‌ ಅಕಾಡೆಮಿ

ವೈದ್ಯಕೀಯ ಸ್ನಾತಕೋತ್ತರ ಸೀಟು ವಿವಾದ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:50 IST
Last Updated 23 ಮಾರ್ಚ್ 2017, 19:50 IST
ಬೆಂಗಳೂರು: ‘ವೈದ್ಯಕೀಯ ಸ್ನಾತಕೋತ್ತರ ಪ್ರವೇಶಕ್ಕೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ನ್ಯಾಯಾಂಗದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾಹಿತಿ ಪ್ರಕಟಿಸಲಾಗಿದೆ’ ಎಂಬ ಕಾರಣಕ್ಕೆ  ನಗರದ ಸೇಂಟ್‌ ಜಾನ್ಸ್‌ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಡೀನ್‌ ಡಾ.ಜಾರ್ಜ್‌ ಎ ಡಿಸೋಜಾ ಹೈಕೋರ್ಟ್‌ಗೆ ಬೇಷರತ್‌ ಕ್ಷಮೆ ಕೇಳಿದ್ದಾರೆ.
 
2017–2018ನೇ ಸಾಲಿನ ಸ್ನಾತಕೋತ್ತರ ಪ್ರವೇಶ ಬಯಸಿ ಮಂಗಳೂರಿನ ಡಾ.ರಚನಾ ಕಿಶೋರ ಉಬ್ರಂಗಳ  ಅವರು, ಸೇಂಟ್‌ ಜಾನ್ಸ್ ಕಾಲೇಜಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ‘ನನಗಿಂತಲೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗೆ ಪ್ರವೇಶ ನೀಡಲಾಗಿದೆ’ ಎಂದು ಆಕ್ಷೇಪಿಸಿ ರಚನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
 
ಈ ಅರ್ಜಿಯನ್ನು ನ್ಯಾಯಮೂರ್ತಿ ಜಯಂತ್ ಪಟೇಲ್ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಆಕ್ಷೇಪಾರ್ಹ ವಿವರ ಇದ್ದುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಇದಕ್ಕೆ ಡಿಸೋಜಾ ನ್ಯಾಯಾಲಯದ ಕ್ಷಮೆ ಕೋರಿದರು. 
 
ಸ್ನಾತಕೋತ್ತರ ಪ್ರವೇಶಾತಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಸೇಂಟ್‌ ಜಾನ್ಸ್‌  ಅಕಾಡೆಮಿಗೆ ಪತ್ರ ಬರೆದಿತ್ತು. ಇದಕ್ಕೆ ಉತ್ತರವಾಗಿ ಅಕಾಡೆಮಿ, ‘2017-18ರ ಸ್ನಾತಕೋತ್ತರ ಪ್ರವೇಶಕ್ಕೆ ಸಂಬಂಧಿಸಿದಂತೆ  ನಾವು ಹೈಕೋರ್ಟ್ ಮೆಟ್ಟಿಲೇರುತ್ತಿದ್ದೇವೆ.
 
ಈ ವ್ಯಾಜ್ಯದಲ್ಲಿ ನಾವು ಖಂಡಿತಾ ಅನುಕೂಲಕರ ಆದೇಶ ಪಡೆಯುವ ವಿಶ್ವಾಸವಿದೆ’ ಎಂದು ತಿಳಿಸಲಾಗಿತ್ತು. ಇದನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿತ್ತು.
 
ಮಧ್ಯಂತರ ತಡೆ:  ಸೇಂಟ್‌ ಜಾನ್ಸ್‌ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿಯಲ್ಲಿ ವೈದ್ಯಕೀಯ ಪದವಿಯ ಸ್ನಾತಕೋತ್ತರ ವಿಭಾಗದ  2017–18ನೇ ಸಾಲಿನ ಪ್ರವೇಶಕ್ಕೆ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.  ಮಕ್ಕಳ ತಜ್ಞರ ವಿಭಾಗದಲ್ಲಿ ಒಂದು ಸೀಟನ್ನು ಖಾಲಿ ಇರಿಸಬೇಕು ಎಂದು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.