ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಸಿದ್ಧನಯ್ಯ: ಮಹಾಲಕ್ಷ್ಮೀ ಬಡಾವಣೆ ಶಾಸಕ ಕೆ.ಗೋಪಾಲಯ್ಯ

ನಾಗೇಂದ್ರ ಖಾರ್ವಿ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಕೆ. ಗೋಪಾಲಯ್ಯ
ಕೆ. ಗೋಪಾಲಯ್ಯ   

ಬೆಂಗಳೂರು: ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಹಿಂದಿನ ಅವಧಿಯಲ್ಲಿ ವಿಧಾನಸಭಾ ಅಧಿವೇಶನಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಶಾಸಕ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ರಾಜ್ಯಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಅಡ್ಡಮತ ಚಲಾಯಿಸಿದ ಕಾರಣಕ್ಕೆ ಜೆಡಿಎಸ್‌ನಿಂದ ಅಮಾನತುಗೊಂಡಿದ್ದರು. ‌ಬಳಿಕ ಪಕ್ಷದ ಶಿಸ್ತುಸಮಿತಿ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಅಂದು ಇಟ್ಟ ಜಾಣ ನಡೆಯಿಂದಾಗಿ ಇಂದು ರಾಜಕೀಯ ಸಂದಿಗ್ಧತೆಯಿಂದ ಪಾರಾಗಿದ್ದಾರೆ.

‘ಮುಖ್ಯಮಂತ್ರಿ ಕುಮಾರಣ್ಣ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಆಶೀರ್ವಾದದಿಂದಲೇ ರಾಜಕೀಯದಲ್ಲಿ ಈ ಎತ್ತರಕ್ಕೆ ಬೆಳೆದಿದ್ದೇನೆ’ ಎನ್ನುವ ಗೋಪಾಲಯ್ಯ, ಮುಂದಿರುವ ಸವಾಲುಗಳು, ಅಭಿವೃದ್ಧಿ ಯೋಜನೆಗಳ ಬಗ್ಗೆ ’ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ADVERTISEMENT

* ಮುಂದಿನ ಐದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡುತ್ತೀರಿ?
ಕಸದ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಬೇಕು. ಕ್ಷೇತ್ರದಲ್ಲಿ ಗಿಡ ನೆಡುವ ಯೋಜನೆ ಹಾಕಿಕೊಂಡಿದ್ದೇನೆ. ಪಾರ್ಕ್‌ಗಳ ಅಭಿವೃದ್ಧಿ, ಹಿರಿಯ ನಾಗರಿಕರಿಗೆ ವಿಶ್ರಾಂತಿ ಗೃಹ, ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಬೇಕು, ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು.

* ಹಾಗಿದ್ದರೆ, ಈ ಹಿಂದೆ ಐದು ವರ್ಷ ಏಕೆ ಮಾಡಲಿಲ್ಲ?
ಸಾಕಷ್ಟು ಕೆಲಸಗಳನ್ನು ಹಿಂದೆ ಮಾಡಿದ್ದೇನೆ. ಕ್ಷೇತ್ರದ ಶೇಕಡ 95ರಷ್ಟು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಕಮಲಮ್ಮನ ಗುಂಡಿ ಮೈದಾನ ಆಧುನೀಕರಣಕ್ಕೆ ಹಿಂದಿನ ಅವಧಿಯಲ್ಲಿ ಚಾಲನೆ ನೀಡಲಾಗಿತ್ತು, ಶೀಘ್ರದಲ್ಲೇ ಅದು ಪೂರ್ಣಗೊಳ್ಳಲಿದೆ.

* ಯಾವ ನಿರೀಕ್ಷೆಯಿಟ್ಟು ಜನ ನಿಮ್ಮನ್ನು ಗೆಲ್ಲಿಸಿದ್ದಾರೆ?
ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುತ್ತೇನೆ. ಮೊಬೈಲ್‌ಗೆ ಕರೆ ಮಾಡಿದರೆ ನಾನೇ ಅವರೊಂದಿಗೆ ಮಾತನಾಡುತ್ತೇನೆ. ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಏಳು ಬಿಬಿಎಂಪಿ ವಾರ್ಡ್‌ಗಳಿವೆ. ನಾಲ್ಕು ವಾರ್ಡ್‌ಗಳಲ್ಲಿ ಜೆಡಿಎಸ್‌, ಎರಡರಲ್ಲಿ ಕಾಂಗ್ರೆಸ್‌ ಮತ್ತು ಒಂದು ವಾರ್ಡ್‌ನಲ್ಲಿ ಬಿಜೆಪಿ ಸದಸ್ಯರಿದ್ದಾರೆ. ವಿರೋಧ ಪಕ್ಷದ ಸದಸ್ಯರಿರುವ ವಾರ್ಡ್‌ಗಳಲ್ಲೂ ಲೀಡ್‌ ಸಿಕ್ಕಿದೆ.

* ದಿನನಿತ್ಯ ಎಷ್ಟು ಜನರನ್ನು ಭೇಟಿ ಮಾಡುತ್ತೀರಿ. ಅವರು ನಿಮ್ಮ ಮುಂದಿರುವ ಪ್ರಮುಖ ಅಹವಾಲುಗಳೇನು?
ಶಾಲೆಗಳ ಪ್ರವೇಶ ಆರಂಭವಾಗಿರುವುದರಿಂದ ಸುಮಾರು 500ರಿಂದ 1000 ಜನರು ನಿತ್ಯ ಮನೆ, ಕಚೇರಿಗೆ ಬರುತ್ತಾರೆ. ಕೆಲವರು ಪ್ರವೇಶ ಶುಲ್ಕ ಕೇಳಿದರೆ, ಮತ್ತೆ ಕೆಲವರು ಸೀಟ್‌ ಕೊಡಿಸಿ ಎಂದು ಅಹವಾಲಗಳನ್ನು ತೆಗೆದುಕೊಂಡು ಬರುತ್ತಾರೆ. ಚಿಕಿತ್ಸೆಗೆ ನೆರವು ಕೇಳಿಕೊಂಡೂ ಜನ ಬರುತ್ತಾರೆ.

* ಬೆಂಗಳೂರಿನಲ್ಲಿ ಅಧಿವೇಶನ ನಡೆಯುವಾಗ ನಗರದ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ಹಿಂದಿನ ವಿಧಾನಸಭೆಯಲ್ಲಿ ನಿಮ್ಮ ಹಾಜರಾತಿ ಎಷ್ಷಿತ್ತು?
ಬೆಂಗಳೂರಿನಲ್ಲಿ ಅಧಿವೇಶನ ಇದ್ದಾಗ ತಪ್ಪದೇ ಹೋಗುತ್ತೇನೆ. ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಅನಿವಾರ್ಯವಾಗಿ ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕಾದ ಸಂದರ್ಭ ಹೊರತುಪಡಿಸಿ, ಅಧಿವೇಶನಕ್ಕೆ ಹಾಜರಾಗಿದ್ದೇನೆ.

* ಬ್ರ್ಯಾಂಡ್‌ ಬೆಂಗಳೂರಿಗೆ ನೀವು ಏನು ಮಾಡುತ್ತೀರಿ?
ನಗರಕ್ಕೆ ಕೈಗಾರಿಕೆಗಳು ಬರಲು ಪೂರಕ ವಾತಾವರಣ ನಿರ್ಮಿಸಬೇಕು. ಕೈಗಾರಿಕೆಗಳು ಬಂದರೆ ಉದ್ಯೋಗ ಸೃಷ್ಟಿ ಆಗುತ್ತದೆ. ಅಷ್ಟೇ ಅಲ್ಲ, ಪರೋಕ್ಷ ರೀತಿಯಲ್ಲಿ ನಗರದ ಅಭಿವೃದ್ಧಿಯೂ ಆಗುತ್ತದೆ. ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.