ADVERTISEMENT

ಗುಂಪುಗಾರಿಕೆ ಬದಿಗಿಡೋಣ

ಒಕ್ಕಲಿಗರ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಕರೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:53 IST
Last Updated 1 ಏಪ್ರಿಲ್ 2015, 19:53 IST

ಬೆಂಗಳೂರು: ‘ಒಕ್ಕಲಿಗರ ಸಮುದಾಯದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ. ಇದು ಮುಂದುವರಿಯುವುದು ಬೇಡ. ನಮ್ಮೊಳಗಿನ ಸಣ್ಣ ಪುಟ್ಟ ವೈಮನಸ್ಸನ್ನು ಬದಿಗಿಟ್ಟು ನಾವು ಒಗ್ಗಟ್ಟಾಗಿ ಕೆಲಸ ಮಾಡೋಣ’ ಎಂದು ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಂಘದ ಸಂಸ್ಥಾಪಕರ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸಮುದಾಯದ ಜನರಿಂದಲೇ ಮಾಜಿ ಪ್ರಧಾನಿ ದೇವೇಗೌಡ, ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಎಚ್‌.ಎನ್.ಕೃಷ್ಣ,  ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ಸೇರಿದಂತೆ ಅನೇಕರು ಅನ್ಯಾಯವಾಗಿ ಕಷ್ಟನಷ್ಟ ಅನುಭವಿಸಿದ್ದಾರೆ. ಇನ್ನು ಮುಂದಾದರೂ  ನಮ್ಮ ದೋಷಗಳನ್ನು ಸರಿಪಡಿಸಿಕೊಂಡು ಹೋಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಒಕ್ಕಲಿಗ ಸಮುದಾಯ ಶೈಕ್ಷಣಿಕವಾಗಿ ಸ್ವಲ್ಪ ಮುಂದುವರಿದರೂ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದಿದೆ.  ಬೇರೆ ಸಮುದಾಯಗಳು ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆದುಕೊಂಡು ಮುಂದುವರಿಯುತ್ತಿವೆ. ದುರಾದೃಷ್ಟಕ್ಕೆ ನಾನು ಮುಖ್ಯಮಂತ್ರಿಯಾದರೂ  ನನ್ನ  ಸಮುದಾಯಕ್ಕೆ ಏನು ಮಾಡಲು ಆಗಲಿಲ್ಲ. ಆ ನೋವಿನಿಂದ ಇಂದಿಗೂ ಕೊರಗುತ್ತಿದ್ದೇನೆ’ ಎಂದರು.

ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಅವರು ಮಾತನಾಡಿ, ‘ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಇಂದು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೈಸೂರು, ತುಮಕೂರಿನಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗಿದೆ. ಮಂಡ್ಯದಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ಒಕ್ಕಲಿಗರ ಸಂಘಕ್ಕೆ ವಿಧಾನಸಭೆ, ಲೋಕಸಭೆ ಮೀರಿಸುವಂತಹ ಚುನಾವಣೆ ನಡೆಯುತ್ತಿದೆ. ದುಬಾರಿ ಪ್ರವಾಸ ಆಯೋಜಿಸಿ ಪೈಪೋಟಿ ನಡೆಸುತ್ತಾರೆ. ಈ ಸಂಸ್ಕೃತಿ ಹೋಗಬೇಕು
ಎಚ್‌. ಡಿ. ಕುಮಾರಸ್ವಾಮಿ

ರವಿ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪನೆ
‘ಇತ್ತೀಚೆಗೆ ನಿಧನರಾದ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಹೆಸರನ್ನು ಶಾಶ್ವತವಾಗಿಡಲು ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ರವಿ ಹೆಸರಿನಲ್ಲಿ  ಟ್ರಸ್ಟ್‌ ಸ್ಥಾಪಿಸುವ ಉದ್ದೇಶವಿದೆ. ಐಎಎಸ್‌ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅಂತಿಮ ಪರೀಕ್ಷೆ ಮತ್ತು ಸಂದರ್ಶನಕ್ಕೆ ಸಿದ್ಧತೆ ನಡೆಸುವ ಎಲ್ಲಾ ಸಮುದಾಯಗಳ ಬಡ ಕುಟುಂಬಗಳ ಯುವಕರಿಗೆ ಟ್ರಸ್ಟ್‌ ಮೂಲಕ ಪ್ರತಿ ತಿಂಗಳು ₨ 10 ಸಾವಿರ ಆರ್ಥಿಕ ನೆರವನ್ನು  ನೀಡುವ ಚಿಂತನೆ ಇದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.