ADVERTISEMENT

ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಸಾಗಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಜಪ್ತಿ ಮಾಡಿರುವ ಮೊಳೆ ಮಾದರಿಯ ಚಿನ್ನ
ಜಪ್ತಿ ಮಾಡಿರುವ ಮೊಳೆ ಮಾದರಿಯ ಚಿನ್ನ   

ಬೆಂಗಳೂರು: ಗುದದ್ವಾರದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಚೆನ್ನೈನ ಮಹಿಳೆಯನ್ನು ಬಂಧಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು, ಅವರಿಂದ ₹12.84 ಲಕ್ಷ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

‘ನಿಲ್ದಾಣ ವ್ಯಾಪ್ತಿಯಲ್ಲಿ ಗುರುವಾರ ಹಾಗೂ ಶುಕ್ರವಾರ, ಏರ್‌ ಇಂಟೆಲಿಜೆನ್ಸ್‌ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದೆವು. ಈ ವೇಳೆ ಮೂರು ಪ್ರಕರಣಗಳಲ್ಲಿ ನಾಲ್ವರು ಪ್ರಯಾಣಿಕರನ್ನು ಬಂಧಿಸಿದ್ದು, ಅವರಿಂದ ₹37.21 ಲಕ್ಷ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದೇವೆ’ ಎಂದು ಕಸ್ಟಮ್ಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಥಾಯ್‌ ಏರ್‌ಲೈನ್ಸ್‌ನ ಟಿ.ಜಿ. 325 ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬಂದಿದ್ದ  ಮಹಿಳೆಯ ಬಳಿ ಚಿನ್ನವಿರುವ ಬಗ್ಗೆ ಲೋಹ ಶೋಧಕವು ಸುಳಿವು ನೀಡಿತ್ತು. ಅವರ ಬ್ಯಾಗ್‌ ಪರಿಶೀಲಿಸಿದರೂ ಚಿನ್ನ ಪತ್ತೆಯಾಗಿರಲಿಲ್ಲ.’

‘ಬಳಿಕ ಮಹಿಳಾ ಸಿಬ್ಬಂದಿ, ಅವರನ್ನು ಕೊಠಡಿಗೆ ಕರೆದೊಯ್ದು ಹೆಚ್ಚಿನ ತಪಾಸಣೆ ನಡೆಸಿದರು. ಈ ವೇಳೆ ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟುಕೊಂಡಿದ್ದು ಗೊತ್ತಾಯಿತು’ ಎಂದು ಅಧಿಕಾರಿ ತಿಳಿಸಿದರು.

‘ಗುದದ್ವಾರದಲ್ಲಿ ಸಾಗಿಸಲೆಂದೇ ಸಣ್ಣ ಗಾತ್ರದ ಮೊಳೆಗಳ ಮಾದರಿಯಲ್ಲಿ ಚಿನ್ನವನ್ನು ಸಿದ್ಧಪಡಿಸಲಾಗಿತ್ತು. ಅವುಗಳನ್ನು ಗುದದ್ವಾರದಲ್ಲಿ ಇಟ್ಟುಕೊಂಡಿದ್ದ ಮಹಿಳೆಯು ಬ್ಯಾಂಕಾಕ್‌ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಬಂದಿದ್ದರು. ನಮ್ಮ ನಿಲ್ದಾಣದಲ್ಲಿ ಸಿಕ್ಕಿಬಿದ್ದರು’ ಎಂದು  ವಿವರಿಸಿದರು.

ಕಾರು ತೊಳೆಯುವ ಉಪಕರಣದಲ್ಲಿ ಚಿನ್ನ: ‘ಇನ್ನೊಂದು ಪ್ರಕರಣದಲ್ಲಿ ಎಮಿರೇಟ್ಸ್‌ ಇ.ಕೆ. 568 ವಿಮಾನದಲ್ಲಿ  ದುಬೈನಿಂದ ಬಂದಿದ್ದ ಪ್ರಯಾಣಿಕ, ಕಾರು ತೊಳೆಯುವ ಕಬ್ಬಿಣದ ಉಪಕರಣವೊಂದನ್ನು  ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಆ ಉಪಕರಣದಲ್ಲಿ ಚಿನ್ನವಿರುವ ಅನುಮಾನ ಬಂತು. ಬಳಿಕ ಪ್ರಯಾಣಿಕನನ್ನು ವಶಕ್ಕೆ ಪಡೆದು, ಉಪಕರಣವನ್ನು ಬಿಚ್ಚಿ ನೋಡಿದಾಗ ₹14 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಬಿಸ್ಕತ್‌ಗಳು ಪತ್ತೆಯಾದವು.’

‘ಮತ್ತೊಂದು ಪ್ರಕರಣದಲ್ಲಿ ಕೊಲಂಬಿಯಾದಿಂದ ಬಂದಿದ್ದ ಪ್ರಯಾಣಿಕರಿಬ್ಬರ ಟ್ರಾಲಿ ಬ್ಯಾಗ್‌ ಹೊದಿಕೆಯಲ್ಲಿ ₹10.37 ಲಕ್ಷ ಮೌಲ್ಯದ  ಚಿನ್ನದ ಬಿಸ್ಕತ್‌ಗಳು ಸಿಕ್ಕವು’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.