ADVERTISEMENT

ಗೋವಾ ಮುತ್ತಿಗೆ ಕಾರ್ಯಕ್ರಮಕ್ಕೆ ರಕ್ಷಣಾ ವೇದಿಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2015, 19:31 IST
Last Updated 26 ಜೂನ್ 2015, 19:31 IST

ಬೆಂಗಳೂರು: ಗೋವಾ ಕನ್ನಡಿಗರ ರಕ್ಷಣೆ ಮತ್ತು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗೋವಾ ಮುತ್ತಿಗೆ ಕಾರ್ಯಕ್ರಮಕ್ಕೆ ನಗರದ ಮೇಖ್ರಿ ವೃತ್ತದ ಬಳಿ ಶುಕ್ರವಾರ ಚಾಲನೆ ನೀಡಲಾಯಿತು.

ಚಾಲನೆ ನೀಡಿ ಮಾತನಾಡಿದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಶೆಟ್ಟಿ, ‘ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೂಡಲೇ ಗೋವಾದ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಬೇಕು. ಜತೆಗೆ, ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಬೇಕು’ ಎಂದು ಅವರು ಹೇಳಿದರು.

‘ಮಹದಾಯಿ ನದಿಯ ನೀರು ಪಡೆಯುವ, ಕಳಸಾ ಬಂಡೂರಿ ಯೋಜನೆ  ಕಾಮಗಾರಿ ಆರಂಭಗೊಂಡು ವರ್ಷಗಳಾದರೂ  ಪೂರ್ಣಗೊಂಡಿಲ್ಲ. ಗೋವಾ ಸರ್ಕಾರ ಅನಗತ್ಯವಾಗಿ ಇದರ ವಿರುದ್ಧ ತಗಾದೆ ತೆಗೆಯುತ್ತಿದೆ. ಕೂಡಲೇ ಈ ವಿವಾದವನ್ನು ಬಗೆಹರಿಸಿ, ಯೋಜನೆಪೂರ್ಣಗೊಳಿಸಬೇಕು’ ಎಂದರು.

‘ಅಲ್ಲದೆ, ರಾಜ್ಯದಲ್ಲಿ ಇದುವರೆಗೆ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಗಳು, ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿವೆ. ಸರ್ಕಾರ ಆ ಭಾಗದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು.  ಮುಂದಿನ ಅಧಿವೇಶನದಲ್ಲಿ ಆ ಭಾಗದ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಪ್ರವೀಣ್‌ ಕುಮಾರ್ ಶೆಟ್ಟಿ ಅವರು ಒತ್ತಾಯಿಸಿದರು.

ಗೋವಾದ ಬೈನಾ ಕಡಲ ತೀರದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಅಲ್ಲಿನ ಸರ್ಕಾರ ಒಕ್ಕಲೆಬ್ಬಿಸುವ ಮೂಲಕ  ರಾಜ್ಯದ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ
ಪ್ರವೀಣ್‌ ಕುಮಾರ್‌ ಶೆಟ್ಟಿ,
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.