ADVERTISEMENT

ಚಪ್ಪಲಿಯ ರಂಧ್ರಗಳಿಂದ ಸಿಕ್ಕಿಬಿದ್ದ ಹಂತಕ!

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:44 IST
Last Updated 21 ಜೂನ್ 2017, 19:44 IST
ಚಪ್ಪಲಿಯ ರಂಧ್ರಗಳಿಂದ ಸಿಕ್ಕಿಬಿದ್ದ ಹಂತಕ!
ಚಪ್ಪಲಿಯ ರಂಧ್ರಗಳಿಂದ ಸಿಕ್ಕಿಬಿದ್ದ ಹಂತಕ!   

ಬೆಂಗಳೂರು:  ಆಡುಗೋಡಿಯ ಸಮತಾನಗರದಲ್ಲಿ ನಡೆದಿದ್ದ ಗಜಲಕ್ಷ್ಮಿ (65) ಎಂಬುವರ ಕೊಲೆ ರಹಸ್ಯವು ಹತ್ಯೆಯ ಸ್ಥಳದಲ್ಲಿ ಸಿಕ್ಕ ಚಪ್ಪಲಿಗಳ ಸುಳಿವಿನಿಂದ ಬಯಲಾಗಿದೆ.

ಗಜಲಕ್ಷ್ಮಿ ಅವರು ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಜೂನ್ 16ರ ಬೆಳಗಿನ ಜಾವ ಅಂಗಡಿಗೆ ನುಗ್ಗಿದ್ದ ಸೈಯದ್ ನದೀಮ್ ಅಲಿಯಾಸ್ ಚುವ್ವಿ (22) ಎಂಬಾತ, ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಅವರನ್ನು ಕೊಲೆಗೈದಿದ್ದ. ನಂತರ ಮೃತರು ಚೀಲದ ಕೆಳಗಿಟ್ಟಿದ್ದ ₹ 6,800 ತೆಗೆದುಕೊಂಡು ಪರಾರಿಯಾಗಿದ್ದ. ಇದೀಗ ಆಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಕಾದು ಕೊಂದ: ಮೊದಲು ನೀಲಸಂದ್ರದಲ್ಲಿ ನೆಲೆಸಿದ್ದ ಗಜಲಕ್ಷ್ಮಿ, ಗಂಡನ ನಿಧನದ ನಂತರ ವಾಸ್ತವ್ಯವನ್ನು ಸಮತಾನಗರಕ್ಕೆ ಬದಲಾಯಿಸಿದ್ದರು. ಅವರ ಗುಜರಿ ಅಂಗಡಿಯ ಹಿಂಭಾಗದಲ್ಲಿರುವ ಇಡಬ್ಲ್ಯೂಎಸ್‌ ವಸತಿ ಸಮುಚ್ಚಯದಲ್ಲೇ ಆರೋಪಿಯ ಕುಟುಂಬ ನೆಲೆಸಿತ್ತು.
ಆಡುಗೋಡಿಯ ರಾಜೇಂದ್ರನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನದೀಮ್, ಕಬ್ಬಿಣದ ಚೂರುಗಳನ್ನು ಗಜಲಕ್ಷ್ಮಿ ಅವರಿಗೆ ಮಾರಿ ಹಣ ಪಡೆಯುತ್ತಿದ್ದ. ಹೀಗೆ, ಚೀಲದ ಕೆಳಗೆ ಅವರು ಹಣ ಇಡುತ್ತಿದ್ದುದನ್ನು  ಗಮನಿಸಿದ್ದ ಆತ, ಅದನ್ನು ದೋಚಲು ಸಂಚು ರೂಪಿಸಿದ್ದ. ಈ ವಿಚಾರವನ್ನು ಸ್ನೇಹಿತರ  ಬಳಿಯೂ ಹೇಳಿದ್ದ.

ಜೂನ್ 16ರ ನಸುಕಿನ ವೇಳೆ (2.30ರ ಸುಮಾರಿಗೆ) ಅಂಗಡಿ ಬಳಿ ಹೋಗಿದ್ದ ಹಂತಕ, ಸಮೀಪದ ಸುಲಭ್ ಶೌಚಾಲಯದ ಹಿಂಭಾಗದಲ್ಲಿ ಅವಿತುಕೊಂಡಿದ್ದ. ಜನರ ಓಡಾಟ ಕಡಿಮೆ ಆಗುತ್ತಿದ್ದಂತೆಯೇ ಅಂಗಡಿ ಬಳಿ ಹೋಗಿದ್ದ. ಆದರೆ, ಗಜಲಕ್ಷ್ಮಿ ಸಾಕಿದ್ದ ಮೇಕೆಗಳು ಶಬ್ದ ಮಾಡಿದ್ದರಿಂದ ಅವರು ಎಚ್ಚರಗೊಂಡಿದ್ದರು. ಇದರಿಂದ ಹೆದರಿ ಪುನಃ ವಾಪಸ್ ಬಂದಿದ್ದ. ಒಂದು ತಾಸು ಕಾದು 3.30ರ ಸುಮಾರಿಗೆ ಪುನಃ ಅಂಗಡಿಗೆ ನುಗ್ಗಿದ್ದ ನದೀಮ್, ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಹಾಕಿ, ಕಬ್ಬಿಣದ ಸಲಾಕೆಯಿಂದ ಮುಖಕ್ಕೆ ಹೊಡೆದಿದ್ದ. ನಂತರ ಚೀಲದ ಕೆಳಗಿದ್ದ ₹ 6,800 ನಗದು ತೆಗೆದುಕೊಂಡು ಪರಾರಿಯಾಗಿದ್ದ.

ADVERTISEMENT

ಬೆಳಿಗ್ಗೆ 4.30ರ ಸುಮಾರಿಗೆ ಮನೆಗೆ ಮರಳಿದ ನದೀಮ್,  ರಕ್ತಸಿಕ್ತ   ಬಟ್ಟೆಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ನೀಲಸಂದ್ರದ ಮೋರಿಯಲ್ಲಿ ಬಿಸಾಡಿದ್ದ. ದೋಚಿದ್ದ ಹಣದಲ್ಲೇ ಹೊಸ ಬಟ್ಟೆ ಹಾಗೂ ಶೂ ಖರೀದಿಸಿದ್ದ. ಅಲ್ಲದೆ, ಸ್ನೇಹಿತರಿಗೆ ರಾತ್ರಿ ಮದ್ಯಪಾನವನ್ನೂ ಮಾಡಿಸಿದ್ದ.

ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಸ್ಥಳೀಯರೊಬ್ಬರು ಅಂಗಡಿ ಬಳಿ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಹಂತಕನ ಪತ್ತೆಗೆ ಆಡುಗೋಡಿ ಇನ್‌ಸ್ಪೆಕ್ಟರ್ ಟಿ.ಚಲುವೇಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿತ್ತು.

ಚಪ್ಪಲಿಯಲ್ಲಿದ್ದ ರಂಧ್ರಗಳು: ‘ಹತ್ಯೆಗೈದ ಬಳಿಕ ಆರೋಪಿ ಆತುರದಲ್ಲಿ ಚಪ್ಪಲಿಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಆ ಚಪ್ಪಲಿಗಳ ಮುಂಭಾಗದಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದವು. ಅಲ್ಲದೆ, ಅಲ್ಲಲ್ಲಿ ಸುಟ್ಟು ಹೋಗಿದ್ದವು. ಅವುಗಳನ್ನು ನೋಡಿದ ಎಫ್‌ಎಸ್‌ಎಲ್ ಅಧಿಕಾರಿಗಳು, ‘ವೆಲ್ಡಿಂಗ್ ಮಾಡುವಾಗ ಕಿಡಿಗಳು ಹಾರಿ ಚಪ್ಪಲಿಗಳ ಮೇಲೆ ಬಿದ್ದಾಗ ಇಂಥ ರಂಧ್ರಗಳಾಗುತ್ತವೆ’ ಎಂದು ಹೇಳಿದರು. ನಂತರ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಎಲ್ಲ ವೆಲ್ಡಿಂಗ್‌ಶಾಪ್‌ಗಳಿಗೂ ತೆರಳಿ ಅಲ್ಲಿನ ನೌಕರರನ್ನು ವಿಚಾರಣೆ ನಡೆಸಿದೆವು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ರಾಜೇಂದ್ರನಗರದ ಅಮ್ಜಾದ್ ಎಂಬುವರ ಅಂಗಡಿಗೆ ಹೋದಾಗ, ‘ನಮ್ಮ ಬಳಿ ಸೈಯದ್ ನದೀಮ್ ಎಂಬಾತ ಕೆಲಸ ಮಾಡುತ್ತಿದ್ದ. ಇದೇ ಜೂನ್ 13ರಂದು ಆತ ಕೆಲಸ ಬಿಟ್ಟು ಹೋದ’ ಎಂದು ಹೇಳಿಕೆ ಕೊಟ್ಟರು.  ಸ್ಥಳೀಯರನ್ನು ವಿಚಾರಿಸಿದಾಗ, ಆತ ಕಬ್ಬಿಣದ ವಸ್ತುಗಳನ್ನು ಗಜಲಕ್ಷಿ ಅವರಿಗೆ ಮಾರುತ್ತಿದ್ದ ವಿಷಯ ತಿಳಿಯಿತು.  ಅವನನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದೆವು’ ಎಂದು ಮಾಹಿತಿ ನೀಡಿದರು.

ಮೇಕೆ ಮಾರಿದ್ದು ಗೊತ್ತಿತ್ತು
‘ಗಜಲಕ್ಷ್ಮಿ ಅವರು ಇತ್ತೀಚೆಗೆ ಎರಡು ಮೇಕೆಗಳನ್ನು ಮಾರಿದ್ದರು. ಗುಜರಿ ವ್ಯಾಪಾರದಲ್ಲೂ ನಿತ್ಯ ₹ 150 ರಿಂದ ₹ 200 ದುಡಿಯುತ್ತಿದ್ದರು. ಹೇಗಾದರೂ ಮಾಡಿ ಆ ಹಣ ಎಗರಿಸಬೇಕೆಂದು ಪಾನಮತ್ತನಾಗಿ ಅಂಗಡಿಗೆ ಹೋಗಿದ್ದೆ. ಕೊಲೆ ಮಾಡುವ ಉದ್ದೇಶವಿರಲಿಲ್ಲ. ಅವರು ಚೀರಿಕೊಂಡಿದ್ದರಿಂದ ಭಯದಲ್ಲಿ ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿದ್ದೆ’ ಎಂದು ಹಂತಕ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.