ADVERTISEMENT

ಜಾತಿ ಕೇವಲ ವ್ಯವಸ್ಥೆ ಅಲ್ಲ, ಸ್ವಭಾವ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:32 IST
Last Updated 28 ಆಗಸ್ಟ್ 2016, 19:32 IST
ಎನ್‌.ಚಿನ್ನಸ್ವಾಮಿ ಸೋಸಲೆ, ಬರಗೂರು ರಾಮಚಂದ್ರಪ್ಪ ಹಾಗೂ ದೇವನೂರ ಮಹಾದೇವ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು–  ಪ್ರಜಾವಾಣಿ ಚಿತ್ರ
ಎನ್‌.ಚಿನ್ನಸ್ವಾಮಿ ಸೋಸಲೆ, ಬರಗೂರು ರಾಮಚಂದ್ರಪ್ಪ ಹಾಗೂ ದೇವನೂರ ಮಹಾದೇವ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತದಲ್ಲಿ ಜಾತಿ ಕೇವಲ ವ್ಯವಸ್ಥೆ ಅಲ್ಲ. ಅದು ಸ್ವಭಾವ ಆಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ  ಅಭಿಪ್ರಾಯಪಟ್ಟರು.
ನವಕರ್ನಾಟಕ ಪ್ರಕಾಶನ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಕಾಂತ ಪೋಕಳೆ ಅನುವಾದಿಸಿರುವ ಮರಾಠಿ ಸಾಹಿತಿ ಡಾ.ಭಾಲಚಂದ್ರ ನೇಮಾಡೆ ಅವರ ‘ಹಿಂದೂ– ಬದುಕಿನ ಸಮೃದ್ಧ ಅಡಕಲು’ ಕಾದಂಬರಿ ಬಿಡುಗಡೆ ಮಾಡಿ ಅವರು ಮಾತನಾಡಿ ದರು.
‘ಜಾತಿ ಕೇವಲ ವ್ಯವಸ್ಥೆ ಆಗಿದ್ದರೆ ಅದನ್ನು ಬದಲಾಯಿಸಬಹುದಾಗಿತ್ತು.  ಸ್ವಭಾವ ಆಗಿರುವುದರಿಂದ ಅದಕ್ಕೆ ಮಾನಸಿಕ ಚಿಕಿತ್ಸೆ ಕೊಡಬೇಕು. ವ್ಯವಸ್ಥೆಗೆ ಹೋಲಿಸಿದರೆ ಸ್ವಭಾವ 10 ಪಟ್ಟು ಬಲಿಷ್ಠವಾಗಿದೆ’ ಎಂದರು.

‘ನೆಮಾಡೆ ಅವರು  ಕಾದಂಬರಿಯಲ್ಲಿ  ಹಿಂದೂವನ್ನು ಸಿಂಧೂ ಮಾಡುತ್ತಾರೆ. ಇಂದು ಅಟ್ಟಹಾಸ ಮಾಡುತ್ತಿರುವ ಮಧ್ಯಯುಗದ ಒರಟು ಪಾಳೆಯಗಾರ ಹಿಂದೂವನ್ನು  ಹೂತು, ಭೂಮಿಯಲ್ಲಿ ಬಲಿಯಾಗಿರುವ  ಸಿಂಧೂವನ್ನು ಬಿಡುಗಡೆ ಮಾಡಲು ಯತ್ನಿಸಿದ್ದಾರೆ’ ಎಂದರು.

‘ಈ ಕಾದಂಬರಿ ಸುಲಲಿತವಾಗಿಲ್ಲ. ಹಿಂದೂ ಪದದ ತರಹವೇ ಗೋಜ ಲಾಗಿದೆ. ಉತ್ಖನನದಲ್ಲಿ ಸಿಗುವ ಅವಶೇಷವನ್ನು ವಾಸ್ತವದಂತೆ, ಇಂದಿನ ಬದುಕನ್ನು  ಅವಶೇಷ ಎಂಬಂತೆ ಕಾದಂಬರಿಯ ಕಥಾನಾಯಕ ಪರಿಭಾವಿಸುತ್ತಾನೆ. ಸತ್ತಿರುವುದನ್ನು ಅಗೆದು, ಜೀವಂತವಾಗಿರುವಂತೆ ತೋರಿಸುವಷ್ಟು ಪರಿಣಾಮ ಬೀರುತ್ತದೆ ಈ ಕಾದಂಬರಿ’ ಎಂದರು. ‘ನುಂಗಲಾರದ ತುತ್ತುಗಳೂ ಕೃತಿಯಲ್ಲಿವೆ.  ಗಾಂಧಿ ಜೋಡಿಸುತ್ತಾರೆ,  ಜಿನ್ನಾ  ಒಡೆಯುತ್ತಾರೆ,  ಅಂಬೇಡ್ಕರ್‌ ಹಿಂದೂ ಸಮಾಜವನ್ನು ಬೇರ್ಪಡಿಸು ತ್ತಾರೆ ಎಂದು ಲೇಖಕ ಒಂದು ಕಡೆ ಉಲ್ಲೇಖಿಸುತ್ತಾರೆ.  ಅವರಿಗೆ   ಅಂಬೇಡ್ಕರ್‌ ಬಗ್ಗೆ ಸ್ವಲ್ಪ ಅಸಹನೆ ಇರುವ ವಾಸನೆ ಇಲ್ಲಿ ಸಿಗುತ್ತದೆ’ ಎಂದರು.

ಎನ್‌.ಚಿನ್ನಸ್ವಾಮಿ ಸೋಸಲೆ ಸಂಪಾದಿಸಿದ ‘ಕರ್ನಾಟಕದ ಸಮಗ್ರ ದಲಿತ ಚರಿತ್ರೆ’ ಕೃತಿಯನ್ನು ಲೋಕಾರ್ಪಣೆ ಮಾಡಿದ ಸಾಹಿತಿ  ಬರಗೂರು ರಾಮ
ಚಂದ್ರಪ್ಪ ಮಾತನಾಡಿ, ‘ಚರಿತ್ರೆ ವಿಮರ್ಶೆ ಅಲ್ಲ. ಅದು ವ್ಯಕ್ತಿನಿಷ್ಠ ಆಗದೆ ವಸ್ತು ನಿಷ್ಠವಾಗಿರಬೇಕು. ಆದರೆ ಕೃತಿಯಲ್ಲಿ ಕೆಲವೆಡೆ ವ್ಯಕ್ತಿನಿಷ್ಠೆ ನುಸುಳಿದೆ. ಇತಿಹಾಸಕಾರ ಸೈದ್ಧಾಂತಿಕ ನಂಬಿಕೆ

ಗಳಿಂದ ಮಾನಸಿಕ ದೂರವನ್ನು ಕಾಯ್ದುಕೊಳ್ಳಬೇಕು. ಭಿನ್ನಾಭಿಪ್ರಾಯ ಹೇಳುವ ಭಾಷೆ  ಅಸಹನೀಯ ಆಗಿರಬಾರದು’ ಎಂದರು.ಡಾ.ಎಚ್‌.ಎಸ್‌. ಗೋಪಾಲರಾವ್‌ ಹಾಗೂ ಡಾ. ಗೀತಾ ಶೆಣೈ ಅವರು ಕೃತಿ ಪರಿಚಯ ಮಾಡಿದರು.   ಚಂದ್ರಕಾಂತ ಪೋಕಳೆ, ಹೊಸತು ಪತ್ರಿಕೆ ಸಂಪಾದಕ ಸಿದ್ದನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.