ADVERTISEMENT

ಜೀತ ಕಾರ್ಮಿಕರಿಗೆ ಪುನರ್ವಸತಿ: ಕಾನೂನು ವಿಫಲ

ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 20:04 IST
Last Updated 29 ಅಕ್ಟೋಬರ್ 2014, 20:04 IST

ಬೆಂಗಳೂರು: ‘ಜೀತ ಪದ್ಧತಿಯಿಂದ ಮುಕ್ತರಾದ ಅನೇಕ ಜೀತ ಕಾರ್ಮಿಕರಿಗೆ ಸರ್ಕಾರವು ಪರಿಹಾರ, ಪುನರ್ವಸತಿ ಕಲ್ಪಿಸದೆ ಇರುವುದು ಸರಿಯಲ್ಲ’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಮೀರಾ ಸಿ.ಸಕ್ಸೇನಾ ಅಭಿಪ್ರಾಯಪಟ್ಟರು.
‘ಆ್ಯಕ್ಷನ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌– ಕರ್ನಾಟಕ’ ಸಂಘಟನೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಬುಧವಾರ ನಗರದಲ್ಲಿ ಆಯೋಜಿಸಿದ್ದ ‘ಜೀತ ಕಾರ್ಮಿಕ ನಿರ್ಮೂಲನಾ ಕಾಯ್ದೆ: ಅನುಷ್ಠಾನ– ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 1976ರಲ್ಲಿಯೇ ಜೀತ ಕಾರ್ಮಿಕ ನಿರ್ಮೂಲನಾ ಕಾಯ್ದೆಯನ್ನು  ಜಾರಿಗೊಳಿಸಲಾಗಿದೆ. ಆದರೆ, ಜೀತ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಕಾನೂನು ಮತ್ತು ಸರ್ಕಾರ ಎರಡೂ ವಿಫಲವಾಗಿರುವುದು ಕಂಡುಬರುತ್ತದೆ. ಇನ್ನು ಮುಂದಾದರೂ ಜೀತ ಪದ್ಧತಿಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ’ ಎಂದು  ಹೇಳಿದರು. ‘ಜೀತದಿಂದ ಮುಕ್ತರಾದ ಕಾರ್ಮಿಕರು ಅಗತ್ಯ ಪ್ರಮಾಣಪತ್ರವನ್ನು ನೀಡಿದ್ದರೂ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಇದನ್ನು ಪರಿಶೀಲಿಸಲಾಗುವುದು’ ಎಂದು ಅವರು ಹೇಳಿದರು.

‘ಆ್ಯಕ್ಷನ್‌ ಫಾರ್‌ ಸೋಷಿಯಲ್‌ ಜಸ್ಟೀಸ್‌– ಕರ್ನಾಟಕ’ ಸಂಘಟನೆಯ ಸದಸ್ಯ ಶಿವ ಪ್ರಸನ್ನ ಮಾತನಾಡಿ, ‘ಸಂಘಟನೆಯು ಕಳೆದ 30 ವರ್ಷಗಳಿಂದ ಜೀತ ನಿರ್ಮೂಲನ ಕಾಯ್ದೆ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಹಾಗೂ ಇದರಿಂದ ಪ್ರಯೋಜನ ಪಡೆದವರ ಪರಿಸ್ಥಿತಿಯನ್ನು ತಿಳಿಯುವ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಗಳ ಪೈಕಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಆರ್‌ಟಿಐ ಬಳಸುವುದರ ಮೂಲಕ ಜಿಲ್ಲಾಧಿಕಾರಿಗಳಿಗೆ 13 ಪ್ರಶ್ನೆಗಳನ್ನು ನೀಡಿ ಮಾಹಿತಿ ಕಲೆಹಾಕಲಾಗಿದೆ’ ಎಂದರು.

‘ನಾಲ್ಕು ಜಿಲ್ಲೆಗಳಲ್ಲಿ 1976 ರಿಂದ 2010 ರವರೆಗೆ ಒಟ್ಟು 3,922 ಜೀತ ಕಾರ್ಮಿಕರನ್ನು ಜೀತದಿಂದ ಬಿಡುಗಡೆಗೊಳಿಸಲಾಗಿದೆ. ಪುನರ್ವಸತಿ ಯೋಜನೆಯಡಿ ಜೀತ ಕಾರ್ಮಿಕರಿಗೆ ಜೀವನೋಪಾಯ ಕಲ್ಪಿಸುವಲ್ಲಿ ಕಾನೂನು ವಿಫಲವಾ­-ಗಿರುವ ಅಂಶವು ಈ ವೇಳೆಯಲ್ಲಿ ತಿಳಿದು ಬಂದಿದೆ’ ಎಂದರು.

‘25 ವರ್ಷಗಳ ಕಾಲ ಜೀತ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ವರ್ಷಕ್ಕೆ ₨ 30 ಸಂಬಳ ನೀಡುತ್ತಿದ್ದರು. ಈಗ ಜೀತದಿಂದ ಮುಕ್ತಿ ಪಡೆದಿದ್ದೇನೆ. ಆದರೆ, ಜೀವನೋಪಾಯಕ್ಕೆ ಯಾವುದೇ ಕೆಲಸವಿಲ್ಲದೆ ಪರದಾಡುತ್ತಿದ್ದೇನೆ. ಆಗ, ಅಧಿಕಾರಿಗಳು ಪುನರ್ವಸತಿ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಯಾವುದೇ ಸೌಲಭ್ಯ ದೊರೆತಿಲ್ಲ’ ಎಂದು ತುಮಕೂರು ಜಿಲ್ಲೆಯ ವದಲೂರು ಗ್ರಾಮದಿಂದ ಬಂದಿದ್ದ ಮುತ್ತಯ್ಯ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.