ADVERTISEMENT

ಟೋಲ್‌ ಸಂಗ್ರಹ ಆರಂಭ; ಚಿಲ್ಲರೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:53 IST
Last Updated 3 ಡಿಸೆಂಬರ್ 2016, 19:53 IST
ಪೆಟ್ರೋಲ್ ಬಂಕ್‌ವೊಂದರಲ್ಲಿ  ‘ದೊಡ್ಡ ಮುಖಬೆಲೆಯ ಹಳೆ ನೋಟುಗಳನ್ನು ಸ್ವೀಕರಿಸುವುದಿಲ್ಲ’ ಎಂಬ ಭಿತ್ತಿಪತ್ರ ಅಂಟಿಸಿರುವುದು    –ಪ್ರಜಾವಾಣಿ ಚಿತ್ರ
ಪೆಟ್ರೋಲ್ ಬಂಕ್‌ವೊಂದರಲ್ಲಿ ‘ದೊಡ್ಡ ಮುಖಬೆಲೆಯ ಹಳೆ ನೋಟುಗಳನ್ನು ಸ್ವೀಕರಿಸುವುದಿಲ್ಲ’ ಎಂಬ ಭಿತ್ತಿಪತ್ರ ಅಂಟಿಸಿರುವುದು –ಪ್ರಜಾವಾಣಿ ಚಿತ್ರ   

ಬೆಂಗಳೂರು:  ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗೇಟ್‌ಗಳಲ್ಲಿ ಶನಿವಾರದಿಂದ ಟೋಲ್‌ ಸಂಗ್ರಹ ಆರಂಭವಾಗಿದ್ದು, ಹಲವೆಡೆ ಚಿಲ್ಲರೆ ಸಮಸ್ಯೆ ಉಂಟಾಯಿತು.

‘₹500, ₹1,000 ನೋಟುಗಳನ್ನು ರದ್ದುಪಡಿಸಿದಾಗಿನಿಂದ ಟೋಲ್‌ ಪಾವತಿಗೆ ವಿನಾಯಿತಿ ನೀಡಲಾಗಿತ್ತು. ಶನಿವಾರ ಶುಲ್ಕ ವಸೂಲಿ ಮಾಡಲು ಆರಂಭಿಸಿದ್ದರಿಂದ ಟೋಲ್‌ ಸಿಬ್ಬಂದಿ ಹಾಗೂ ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ನೋಟಿನ ಗೊಂದಲದಿಂದಾಗಿ ಹೊಸಕೋಟೆ, ಎಲೆಕ್ಟ್ರಾನಿಕ್‌ ಸಿಟಿ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆಗಳ ಅಕ್ಕ–ಪಕ್ಕದಲ್ಲಿ ವಾಹನಗಳು ಸಾಲಾಗಿ ನಿಂತಿದ್ದು ಕಂಡುಬಂತು. ಕೆಲ ಚಾಲಕರು, ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ ಮೂಲಕ ಶುಲ್ಕ ಪಾವತಿಸಿ ಹೆದ್ದಾರಿ ಪ್ರವೇಶಿಸಿದರು.

‘ಶುಲ್ಕ ವಸೂಲಿ ಮಾಡಲು ಸರ್ಕಾರದಿಂದ ಅನುಮತಿ ಇದೆ. ಕೆಲ ದಿನ ಮಾತ್ರ ವಿನಾಯಿತಿ ನೀಡಲಾಗಿತ್ತು. ಈಗ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳಿಂದಲೂ ಶುಲ್ಕ ಸ್ವೀಕರಿಸಲಾಗುತ್ತಿದೆ. ಕೆಲವರು ₹2,000 ನೋಟು ನೀಡುತ್ತಿದ್ದು, ಅವರಿಗೆ ವಾಪಸ್‌ ಕೊಡಲು ಚಿಲ್ಲರೆ ಇಲ್ಲ.  ಹೀಗಾಗಿ ಗೊಂದಲ ಉಂಟಾಗುತ್ತಿದೆ’ ಎಂದು ಟೋಲ್‌ ಸಿಬ್ಬಂದಿ ಹೇಳಿದರು.

‘ಚಿಲ್ಲರೆ ನೀಡಲು ಹಲವು ಚಾಲಕರ ಬಳಿ ಹಣವಿರಲಿಲ್ಲ. ಹೀಗಾಗಿ ಹೆದ್ದಾರಿಯಲ್ಲೇ ವಾಹನಗಳು ಸಾಲಾಗಿ ನಿಂತುಕೊಂಡಿದ್ದವು. ಅದರಿಂದ ಸಂಚಾರ ದಟ್ಟಣೆ ಉಂಟಾಯಿತು’ ಎಂದು ಚಾಲಕರೊಬ್ಬರು ತಿಳಿಸಿದರು.

ಬಂಕ್‌ನಲ್ಲೂ ಸಮಸ್ಯೆ: ಪೆಟ್ರೋಲ್ ಬಂಕ್‌ ಗಳಲ್ಲೂ  ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಪಡೆಯುವುದನ್ನು ನಿಲ್ಲಿಸಿದ್ದರಿಂದ ಶನಿವಾರ ಗ್ರಾಹಕರು ಸಮಸ್ಯೆ ಎದುರಿಸುವಂತಾಯಿತು. 

ಪೆಟ್ರೋಲ್‌ ಹಾಕಿಸಲು ಬರುತ್ತಿದ್ದ ಗ್ರಾಹಕರು ₹2 ಸಾವಿರ ಮುಖಬೆಲೆಯ ನೋಟುಗಳನ್ನು ನೀಡುತ್ತಿದ್ದರು. ಆದರೆ ಅವರಿಗೆ ವಾಪಸ್‌ ಕೊಡಲು ಸಿಬ್ಬಂದಿ ಬಳಿ ಚಿಲ್ಲರೆ ಇರಲಿಲ್ಲ. ಅದೇ ವಿಷಯಕ್ಕಾಗಿ ಕೆಲವು ಬಂಕ್‌ಗಳಲ್ಲಿ ಮಾತಿನ ಚಕಮಕಿಯೂ ನಡೆಯಿತು. 

‘ಹಳೇ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿರುವುದರಿಂದ ಶೇ 30ರಷ್ಟು ಪೆಟ್ರೋಲ್ ಮಾರಾಟ  ಕುಸಿದಿದೆ. ಸವಾರರು ಹೆಚ್ಚಾಗಿ ₹2 ಸಾವಿರ ನೋಟುಗಳನ್ನು ತರುತ್ತಿದ್ದಾರೆ. ಅವರಿಗೆ ಹಿಂದಿರುಗಿಸಲು ಚಿಲ್ಲರೆ ಇಲ್ಲ’ ಎಂದು ಎಚ್‌ಎಸ್‌ಆರ್‌ ಲೇಔಟ್‌ನ ಬಂಕ್‌ವೊಂದರ ಮಾಲೀಕ ಕೆ.ಕೃಷ್ಣಪ್ಪ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.