ADVERTISEMENT

ಡಿಐಜಿ ವರ್ಗಾವಣೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:49 IST
Last Updated 19 ಜುಲೈ 2017, 19:49 IST
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ಆನಂದರಾವ್‌ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಯಿತು.  – ಪ್ರಜಾವಾಣಿ ಚಿತ್ರ
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ಆನಂದರಾವ್‌ ವೃತ್ತದ ಬಳಿಯ ಗಾಂಧಿ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಯಿತು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾರಾಗೃಹಗಳ ಡಿಐಜಿ ಆಗಿದ್ದ ಡಿ.ರೂಪಾ ಅವರ ವರ್ಗಾವಣೆ ವಿರೋಧಿಸಿ ಬಿಜೆಪಿಯ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿ ಸೇರಿದ್ದ ಪ್ರತಿಭಟನಾಕಾರರು, ‘ಪ್ರಾಮಾಣಿಕ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ’ ಎಂಬ ನಾಮಫಲಕ ಪ್ರದರ್ಶಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜೈಲಿನ ಅಕ್ರಮದ ತನಿಖೆ ಮುಗಿಯುವ ಮೊದಲೇ ಡಿಐಜಿ  ರೂಪಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಸರ್ಕಾರವು ಜೈಲಿನ ಅಕ್ರಮಗಳನ್ನು ಮುಂದುವರಿಸುವ ತಂತ್ರ ನಡೆಸಿದೆ’ ಎಂದು ಕಿಡಿಕಾರಿದರು.

ADVERTISEMENT

‘ಪರಪ್ಪನ ಅಗ್ರಹಾರ ಜೈಲಿನ ಅಕ್ರಮದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಮಂಗಳೂರಿನಲ್ಲಿ ರಾಜಕೀಯ ಹತ್ಯೆಗಳು ನಡೆಯುತ್ತಿದ್ದು, ಈ ಹತ್ಯೆಯ ಸತ್ಯಾಂಶಗಳು ಹೊರ ಬರುತ್ತಿಲ್ಲ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಕಚೇರಿ ತೆರೆಯುವಂತೆ ಮನವಿ ಮಾಡಿದ್ದೇವೆ’ ಎಂದು ಯಡಿಯೂರಪ್ಪ ಹೇಳಿದರು.

ಶಾಸಕ ಆರ್‌.ಅಶೋಕ ಮಾತನಾಡಿ, ‘ಸರ್ಕಾರದ ಹುಳುಕು ಹೊರಹಾಕುವ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ.  ಜೈಲುಗಳು ಬಾರ್ ಆಗುತ್ತಿವೆ. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವು ತಮಿಳುನಾಡಿನ ಗೆಸ್ಟ್‌ಹೌಸ್  ಆಗಿ ಮಾರ್ಪಟ್ಟಿದೆ’ ಎಂದು ವ್ಯಂಗ್ಯವಾಡಿದರು.

ಪ್ರತಿಭಟನೆಯಲ್ಲಿ ಶಾಸಕ ಮುನಿರಾಜು, ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ನಗರ ಘಟಕದ ಅಧ್ಯಕ್ಷೆ ಶಾರದಾ ನಾಯಕ, ನಟಿ ಶ್ರುತಿ, ಶಿಲ್ಪಾ ಗಣೇಶ್‌ ಇದ್ದರು.

‘ಕಾರ್ಯಕರ್ತರ ಸಂಖ್ಯೆ ಕಡಿಮೆ’
ಪ್ರತಿಭಟನೆಯಲ್ಲಿ ಕಾರ್ಯಕರ್ತರ ಸಂಖ್ಯೆ ಕಡಿಮೆ ಇದ್ದುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, ‘ಸರ್ಕಾರದ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸುವ ಕೆಲಸವನ್ನು ಮುಖಂಡರು ಮಾಡಬೇಕು’ ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.