ADVERTISEMENT

ಡಿಪೊದಲ್ಲೇ ಬಿಎಂಟಿಸಿ ನಿರ್ವಾಹಕ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 20:12 IST
Last Updated 19 ಜುಲೈ 2017, 20:12 IST
ಡಿಪೊದಲ್ಲೇ ಬಿಎಂಟಿಸಿ ನಿರ್ವಾಹಕ ಆತ್ಮಹತ್ಯೆ ಯತ್ನ
ಡಿಪೊದಲ್ಲೇ ಬಿಎಂಟಿಸಿ ನಿರ್ವಾಹಕ ಆತ್ಮಹತ್ಯೆ ಯತ್ನ   

ಬೆಂಗಳೂರು: ಬನಶಂಕರಿಯ ಬಿಎಂಟಿಸಿ ಡಿಪೊ– 13ರ ಆವರಣದಲ್ಲಿ ನಿರ್ವಾಹಕ ರಾಮಕೃಷ್ಣ (35) ವಿಷ ಕುಡಿದು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅಸ್ವಸ್ಥಗೊಂಡಿರುವ ಅವರನ್ನು ಡಿ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರದ ಅವರು ಏಳು ವರ್ಷಗಳ ಹಿಂದೆ ಚಾಲಕ ಕಂ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದ್ದರು. ಸದ್ಯ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಜುಲೈ 8ರಂದು ಕರ್ತವ್ಯದಲ್ಲಿದ್ದ ವೇಳೆ ಬಸ್ಸಿನಲ್ಲಿ ತಪಾಸಣೆಗೆ ಬಂದಿದ್ದ  ಸಂಚಾರ ನಿರೀಕ್ಷಕರು, ಟಿಕೆಟ್‌ ನೀಡುವಲ್ಲಿ ಲೋಪ ಆಗಿದ್ದನ್ನು ಪತ್ತೆ ಮಾಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ನೋಟಿಸ್‌ ನೀಡಿದ್ದರು.

ADVERTISEMENT

ಸಂಚಾರ ನಿರೀಕ್ಷಕರು ನೀಡಿದ್ದ ವರದಿ ಅನ್ವಯ ರಾಮಕೃಷ್ಣ ಅವರನ್ನು ಅಮಾನತು ಮಾಡಲಾಗಿತ್ತು. ಅದರ ಆದೇಶದ ಪ್ರತಿಯನ್ನು ಮಂಗಳವಾರ ರಾಮಕೃಷ್ಣ ಅವರಿಗೆ ನೀಡಲಾಗಿತ್ತು.

ಧರಣಿ, ವಿಷ ಸೇವನೆ: ಆದೇಶದ ಪ್ರತಿ ಸಮೇತ ಬುಧವಾರ ಬೆಳಿಗ್ಗೆ ಡಿಪೊಗೆ ಬಂದಿದ್ದ ರಾಮಕೃಷ್ಣ, ಅಮಾನತು ಪ್ರಶ್ನಿಸಿ ಧರಣಿ ಆರಂಭಿಸಿದ್ದರು. ಅದನ್ನು ನೋಡಿದ ಡಿಪೊ ವ್ಯವಸ್ಥಾಪಕರು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಮೂಲಕ ನಿರ್ವಾಹಕನನ್ನು ಡಿಪೊದಿಂದ ಹೊರಗೆ ಹಾಕಿಸಿದ್ದರು. ಈ ವೇಳೆ ರಾಮಕೃಷ್ಣ  ವಿಷ ಕುಡಿದಿದ್ದರು.

ಬಳಿಕ ಡಿಪೊ ಸಿಬ್ಬಂದಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಹಲವು ಸಿಬ್ಬಂದಿ ಅರ್ಧ ಗಂಟೆ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮರಣಪತ್ರ ಬರೆದಿಟ್ಟಿದ್ದ ನಿರ್ವಾಹಕ: ಆತ್ಮಹತ್ಯೆ ಯತ್ನಿಸಿರುವ ನಿರ್ವಾಹಕ ಮರಣಪತ್ರ ಬರೆದಿಟ್ಟಿದ್ದರು. 

‘ಜುಲೈ 19ರಂದು ಡಿಪೊ–13ರ ಬಾಗಿಲು ಬಳಿ ನನ್ನ ಸಮಸ್ಯೆ ಪರಿಹರಿಸಿಕೊಳ್ಳುವ ಸಲುವಾಗಿ ಧರಣಿ ಕುಳಿತುಕೊಂಡಿದ್ದೆ. ವಿಭಾಗೀಯ ಸಂಚಾರ ಅಧಿಕಾರಿ ರಾಮಚಂದ್ರಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಎನ್‌.ಕೆ.ಬಸವರಾಜಪ್ಪ ನನ್ನ ಬಳಿ ಬಂದು ಸಮಸ್ಯೆ ಆಲಿಸುತ್ತಾರೆ ಎಂದು ತಿಳಿದಿದ್ದೆ. ಆದರೆ, ಅವರು ಬರಲಿಲ್ಲ. ನನ್ನನ್ನು ಬಲವಂತದಿಂದ ಡಿಪೊದಿಂದ ಹೊರಗೆ ಹಾಕಿಸಿದರು’ ಎಂದು ಮರಣಪತ್ರದಲ್ಲಿ ಬರೆದಿದ್ದಾರೆ.

‘ನನಗೆ ಅನ್ಯಾಯವಾಗಿದ್ದು, ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇನ್ನು ಮುಂದೆ ಯಾವ ಕಾರ್ಮಿಕರಿಗೂ ಇಂಥ ಸಾವು ಬರಬಾರದು ಎಂಬುದು ನನ್ನ ಆಸೆ. ಈ ಸಾವಿಗೆ ಅಧಿಕಾರಿಗಳೇ ನೇರ ಹೊಣೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.