ADVERTISEMENT

ತಂಗಿಗೆ ಸಂದೇಶ ಕಳುಹಿಸಿ ಮಹಿಳೆ ಆತ್ಮಹತ್ಯೆ

ಟೆಕಿ ಸತೀಶ್, ಆತನ ತಾಯಿ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 20:11 IST
Last Updated 25 ಫೆಬ್ರುವರಿ 2018, 20:11 IST
ರಶ್ಮಿ
ರಶ್ಮಿ   

ಬೆಂಗಳೂರು:‌ ಸಾಫ್ಟ್‌ವೇರ್ ಉದ್ಯೋಗಿ ಜೆ.ರಶ್ಮಿ (27) ಎಂಬುವರು, ‘ಗಂಡನ ಹಿಂಸೆ ತಾಳಲು ಆಗುತ್ತಿಲ್ಲ. ಇಂದು ನನ್ನ ಕೊನೆ ದಿನ’ ಎಂದು ತಂಗಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮಮೂರ್ತಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ‘ಸಫೈರ್’ ಅ‍ಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ರಶ್ಮಿ, ಅಮೆರಿಕದಲ್ಲಿರುವ ತಂಗಿ ಜಯಶ್ರೀ ಅವರಿಗೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಸಂದೇಶ ಕಳುಹಿಸಿದ್ದರು. ಕೂಡಲೇ ಅವರು ಭಾವ ಸತೀಶ್‌ಗೆ (ರಶ್ಮಿ ಪತಿ) ಕರೆ ಮಾಡಿ ವಿಷಯ ತಿಳಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸತೀಶ್ ಮನೆಗೆ ಹೋಗುವಷ್ಟರಲ್ಲಿ ನೇಣು ಹಾಕಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

(ಸತೀಶ್‌)

ADVERTISEMENT

‘ಅಳಿಯ ಸತೀಶ್ ಹಾಗೂ ಅತ್ತೆ ಗಾಯಿತ್ರಮ್ಮ ವರದಕ್ಷಿಣೆ ತರುವಂತೆ ರಶ್ಮಿಗೆ ಕಿರುಕುಳ ನೀಡುತ್ತಿದ್ದರು. ಅದೇ ಬೇಸರದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತರ ತಾಯಿ ಭಾಗ್ಯಮ್ಮ ರಾಮಮೂರ್ತಿನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ವರದಕ್ಷಿಣೆ ಸಾವು (ಐಪಿಸಿ 304ಬಿ) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಾಯಿ–ಮಗನನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರದ ಭೀರಮಾರನಹಳ್ಳಿ ಗ್ರಾಮದ ಸತೀಶ್, ಮಹದೇವಪುರದ ‘ಎಎನ್‌ಝಡ್‌’ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಅದೇ ಊರಿನವರಾದ ರಶ್ಮಿ ಜತೆ, ಮೂರು ವರ್ಷಗಳ ಹಿಂದೆ ಅವರ ವಿವಾಹವಾಗಿತ್ತು. ದಂಪತಿಗೆ 1 ವರ್ಷ 3 ತಿಂಗಳ ನಿಹಾನ್ ಹೆಸರಿನ ಗಂಡು ಮಗುವಿದೆ. ಮೊದಲು ಮನೆಯಿಂದಲೇ ಆನ್‌ಲೈನ್‌ ಮೂಲಕ ವಿದೇಶಿ ಕಂಪನಿಗೆ ಕೆಲಸ ಮಾಡುತ್ತಿದ್ದ ರಶ್ಮಿ, 15 ದಿನಗಳ ಹಿಂದಷ್ಟೇ ಸಾಫ್ಟ್‌ವೇರ್ ಕಂಪನಿ ಸೇರಿದ್ದರು. ಹೀಗಾಗಿ, ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಎಂದಿನಂತೆ ಶನಿವಾರ ಬೆಳಿಗ್ಗೆಯೇ ಕೆಲಸಕ್ಕೆ ಹೋಗಿದ್ದೆ. ಅಮ್ಮ ಮಧ್ಯಾಹ್ನ 12 ಗಂಟೆಗೆ ಸಂಬಂಧಿಕರ ಮನೆಗೆ ತೆರಳಿದ್ದರು. ಆ ನಂತರ ರಶ್ಮಿ ನೇಣು ಹಾಕಿಕೊಂಡಿದ್ದಾಳೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಿಳಿಯುತ್ತಿಲ್ಲ’ ಎಂದು ಸತೀಶ್ ಹೇಳಿಕೆ ಕೊಟ್ಟಿದ್ದಾಗಿ ‍ಪೊಲೀಸರು ತಿಳಿಸಿದರು.

ಭಾಗ್ಯಮ್ಮ ದೂರಿನ ವಿವರ

‘ಸರ್ಕಾರಿ ನೌಕರರಾಗಿದ್ದ ಪತಿ ಜಯಶಂಕರ್, 30 ವರ್ಷಗಳ ಹಿಂದೆಯೇ ಕೊನೆಯುಸಿರೆಳೆದರು. ಅನುಕಂಪದ ಆಧಾರದ ಮೇಲೆ ಅವರ ಕೆಲಸ ನನಗೆ ಸಿಕ್ಕಿತ್ತು. ಕಷ್ಟ ಪಟ್ಟು ಇಬ್ಬರು ಮಕ್ಕಳಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದೆ. ಅದರ ಫಲವಾಗಿ ಇಬ್ಬರೂ ಈಗ ಲಕ್ಷಾಂತರ ರೂಪಾಯಿ ವೇತನ ಸಿಗುವಂಥ ಹುದ್ದೆಗಳಲ್ಲಿದ್ದರು. ಆದರೆ, ವಿವಾಹದ ಬಳಿಕ ರಶ್ಮಿಯ ಜೀವನ ಬದಲಾಯಿತು.’

‘ಕೇಳಿದಷ್ಟು ಹಣ–ಚಿನ್ನ ನೀಡಿ ಮದುವೆ ಮಾಡಿಕೊಟ್ಟರೂ, ಅಳಿಯನ ಕುಟುಂಬದವರು ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಮಗಳು ತವರು ಮನೆಗೆ ಬಂದಾಗ ಈ ವಿಚಾರ ಹೇಳಿಕೊಂಡು ಅತ್ತಿದ್ದಳು. ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿಯೂ ನಡೆದಿತ್ತು. ಆದರೆ, ಕಿರುಕುಳ ಮಾತ್ರ ನಿಂತಿರಲಿಲ್ಲ. ಶನಿವಾರ ಬೆಳಿಗ್ಗೆ ಕೂಡ ಕರೆ ಮಾಡಿ ಅಳಲು ತೋಡಿಕೊಂಡಿದ್ದಳು. ನಂತರ ತಂಗಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಭಾಗ್ಯಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ಹೀಗಿದೆ ರಶ್ಮಿ ಸಂದೇಶ

‘ನೀವೆಲ್ಲ ಅಂದುಕೊಂಡಂತೆ ಸತೀಶ್ ಮೃದು ಸ್ವಭಾವದವರಲ್ಲ. ಅವರ ನಿಜವಾದ ಮುಖ ನನಗೆ ಮಾತ್ರ ಗೊತ್ತು. ಗಂಡ–ಅತ್ತೆ ಒಟ್ಟಾಗಿ ಹಿಂಸಿಸುತ್ತಿದ್ದಾರೆ. ನಿಹಾನ್‌ನನ್ನು ಅಮ್ಮನ ಬಳಿ ಬಿಟ್ಟಿದ್ದೇನೆ. ಪುನಃ ಈ ಮನೆಗೆ ಕಳುಹಿಸಬೇಡಿ. ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ. ಇಂದು ನನ್ನ ಕೊನೆಯ ದಿನ... ಗುಡ್‌ಬೈ ಟು ಆಲ್‌’ ಎಂದು ರಶ್ಮಿ ಸೋದರಿಗೆ ಸಂದೇಶ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.