ADVERTISEMENT

ತಂತ್ರಜ್ಞಾನದಲ್ಲಿ ಭಾರತೀಯರ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 20:03 IST
Last Updated 24 ಜೂನ್ 2016, 20:03 IST
ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ವಿದ್ಯಾರ್ಥಿಗಳು	 –ಪ್ರಜಾವಾಣಿ ಚಿತ್ರ
ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪದವಿ ಎನ್ನುವುದು ಕಲಿಯುವವರ ಪರವಾನಗಿ ಇದ್ದಂತೆ. ನಾವು ಕಲಿತದ್ದನ್ನು ಸಮಾಜದ ಒಳಿತಿಗೆ ಉಪಯೋಗಿಸಬೇಕು’ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ನಿವೃತ್ತ ಮಹಾನಿರ್ದೇಶಕ ವಾಸುದೇವ್‌ ಕೆ. ಅತ್ರೆ ಹೇಳಿದರು.

ಬಿಎಂಎಸ್‌ ತಾಂತ್ರಿಕ ಮಹಾವಿದ್ಯಾಲಯ (ಬಿಎಂಎಸ್‌ಸಿಇ) ಶುಕ್ರವಾರ ಆಯೋಜಿಸಿದ್ದ ‘ನಾಲ್ಕನೇ ಪದವಿ ಪ್ರದಾನ’ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕಾಲೇಜಿನಲ್ಲಿ ಕಲಿತ ಎಂಜಿನಿಯರಿಂಗ್‌, ತಂತ್ರಜ್ಞಾನದ ಅಂಶಗಳನ್ನು ಮಾನವೀಯತೆಯೊಂದಿಗೆ ಅನ್ವಯಿಸಿಕೊಳ್ಳಬೇಕು’ ಎಂದರು.

‘ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಕೆಲವರಿಗೆ ಮಾತ್ರ ದೊರೆಯುತ್ತಿದೆ. ತಂತ್ರಜ್ಞಾನದ ಬಗ್ಗೆ ಭಾರತೀಯರಿಗಿರುವ ನಿರಾಸಕ್ತಿಯೂ ಇದಕ್ಕೆ ಕಾರಣ’ ಎಂದು ಹೇಳಿದರು.

‘21ನೇ ಶತಮಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದೆ. ಕೋಟ್ಯಂತರ ಕಿ.ಮೀ. ದೂರದಲ್ಲಿರುವ ಗೆಲಾಕ್ಸಿಗಳಲ್ಲಿ ನಡೆಯುತ್ತಿರುವ ಮಾಹಿತಿಯನ್ನು ಲೇಸರ್‌ಗಳ ಮೂಲಕ ತಿಳಿಯಬಹುದು. ಲೇಸರ್‌ ಕಿರಣಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡುವ ಮಟ್ಟಕ್ಕೆ ಬೆಳವಣಿಗೆ ಸಾಧಿಸಲಾಗಿದೆ’ ಎಂದರು.

ಪದವಿ ಪ್ರದಾನ: ಎಂಜಿನಿಯರಿಂಗ್‌ ವಿಭಾಗದ 999 ಹಾಗೂ ವಾಸ್ತುಶಿಲ್ಪ ವಿಭಾಗದ 77 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 850 ವಿದ್ಯಾರ್ಥಿಗಳಿಗೆ  ಗೈರುಹಾಜರಿಯಲ್ಲಿ ಪದವಿ ಪ್ರದಾನ ಮಾಡಲಾಯಿತು. ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಎಸ್‌. ಸುಹಾಸ್‌, ಮೆಕಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಅಂಕಿತ್‌ ರಾಮಗೌಡ ಕೋಟ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಆರ್‌. ರಾಮಸುಬ್ರಮಣಿಯಂ, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ನಲ್ಲಿ ಆರ್‌.ಸಂಗೀತಾ, ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ನಲ್ಲಿ ಕೋಮಲಾ ವೈಷ್ಣವ್‌, ವಾಸ್ತುಶಿಲ್ಪ ವಿಜ್ಞಾನದಲ್ಲಿ ಬಿ.ಅಪೂರ್ವ ಪ್ರಥಮ ರ್‍್ಯಾಂಕ್‌ ಪಡೆದಿದ್ದಾರೆ.

ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ನಲ್ಲಿ ಯು.ಅಭಿಜಿತ್‌, ಟೆಲಿಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ನಲ್ಲಿ ಪದ್ಮಜಾ ರಮೇಶ್‌  ಶಾನಭಾಗ್‌, ಇನ್ಫರ್ಮೇಷನ್‌ ಸೈನ್ಸ್‌ನಲ್ಲಿ ಟಿ. ನಾಗರವಲ್ಲಿ, ಇನ್‌ಸ್ಟ್ರುಮೆಂಟೇಷನ್‌ ಟೆಕ್ನಾಲಜಿಯಲ್ಲಿ ಅಶ್ವಿನ್‌ ಬಾಳಿಗಾ, ಮೆಡಿಕಲ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಮೇಧಾ ಎಸ್‌. ಭಾರದ್ವಾಜ್‌, ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಸ್ನೇಹಾ, ಬಯೋ ಟೆಕ್ನಾಲಜಿಯಲ್ಲಿ ಅರ್ಪಿತಾ ಈಶ್ವರ್‌ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT