ADVERTISEMENT

ತಾಂಜೇನಿಯಾ ಪ್ರಜೆಯ ಮತ್ತಷ್ಟು ಕೃತ್ಯ ಬಹಿರಂಗ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:50 IST
Last Updated 27 ಜುಲೈ 2016, 19:50 IST

ಬೆಂಗಳೂರು:  ಮಾಜಿ ಶಾಸಕ ವೆಂಕಟಶಿವರೆಡ್ಡಿ ಮನೆಗಳವು ಪ್ರಕರಣದಲ್ಲಿ ಬಂಧಿತನಾಗಿರುವ ತಾಂಜೇನಿಯಾ ಪ್ರಜೆ ಪೌಲ್ ಕೋಲೆ ಸೈಕಿ ಅಲಿಯಾಸ್ ಸೈಕಿ ಕೋಲ್‌ನ ಮತ್ತಷ್ಟು ಅಪರಾಧ ಕೃತ್ಯಗಳು ಬಹಿರಂಗಗೊಂಡಿವೆ.

ಸದಾಶಿವನಗರದಲ್ಲಿ ಇರುವ ಮನೆಗೆ  ಜೂನ್‌ 11ರಂದು ಬೀಗಹಾಕಿ ಕುಟುಂಬದೊಂದಿಗೆ ವೆಂಕಟಶಿವರೆಡ್ಡಿ ಶ್ರೀನಿವಾಸಪುರಕ್ಕೆ ಹೋಗಿದ್ದರು. ಅದೇ ದಿನ ಸಂಜೆ ಮನೆಗೆ ನುಗ್ಗಿದ್ದ ಮೂವರು ಕಳ್ಳರು, ₹40 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

‘ಪ್ರಕರಣದ ತನಿಖೆ ಕೈಗೊಂಡ ಸದಾಶಿವ ನಗರ ಠಾಣೆ ಇನ್‌ಸ್ಪೆಕ್ಟರ್‌ ತಿಮ್ಮಯ್ಯ, ಸೈಕಿ ಕೋಲ್‌ನನ್ನು ಬಂಧಿಸಿದ್ದರು. ಆತ ನಕಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ಬ್ಯಾಂಕ್ ಗ್ರಾಹಕರನ್ನು ವಂಚಿಸುತ್ತಿದ್ದ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮೆಕ್ಸಿಕೊ ಮತ್ತು ಬ್ರೆಜಿಲ್‌ನ ನಾಲ್ವರು ಪ್ರಜೆಗಳನ್ನು ಸೇರಿಸಿಕೊಂಡು ತಂಡ ಕಟ್ಟಿಕೊಂಡಿದ್ದ ಆರೋಪಿ, ಅವರನ್ನು ಬಳಸಿಕೊಂಡು ದುಷ್ಕೃತ್ಯಗಳನ್ನು ಎಸೆಗುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

‘ನಕಲಿ ಡೆಬಿಟ್/ಕ್ರೆಡಿಟ್ ಕಾರ್ಡ್‌ ಉಪಯೋಗಿಸಿ ಬೆಂಗಳೂರು, ಕೇರಳದ ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ಚಿನ್ನಾಭರಣ, ಕೈಗಡಿಯಾರ ಖರೀದಿಸಿದ್ದ.  ಆತನ ಮನೆಯಲ್ಲಿ ₹15 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಿಲ್‌ಗಳು ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸಿ.ಸಿ.ಟಿವಿ ಸುಳಿವು: ಮಾಜಿ ಶಾಸಕ ವೆಂಕಟಶಿವರೆಡ್ಡಿ ಮನೆಯಲ್ಲಿ ಅಳವಡಿಸಿದ್ದ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಕಳ್ಳರ ಮುಖಗಳು ಸೆರೆಯಾಗಿದ್ದವು. ಬಾಗಿಲು ಒಡೆದು ನೇರವಾಗಿ ಮಾಜಿ ಶಾಸಕರ ಪತ್ನಿಯ ಕೊಠಡಿಗೆ ಹೋಗಿದ್ದ ಆರೋಪಿಗಳು, ಚಿನ್ನಾಭರಣ ದೋಚಿದ್ದರು.

ಈ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿತ್ತು. ಇದುವೇ ಆರೋಪಿಗಳ ಬಂಧನಕ್ಕೆ ನೆರವಾಯಿತು ಎಂದು ಪೊಲೀಸರು ಹೇಳಿದ್ದಾರೆ.

2012ರಲ್ಲಿ ಪುಣೆಗೆ ಬಂದಿದ್ದ ಪೌಲ್, 2015ರಲ್ಲಿ ಬೆಂಗಳೂರಿಗೆ ಬಂದು ತಾಂಜೇನಿಯಾದ ಶಾಮಿನ್ ಸೈಕಿ ಎಂಬಾಕೆಯನ್ನು  ಮದುವೆ ಆಗಿದ್ದ. ಪತ್ನಿ, ಹೆಣ್ಣು ಮಗುವಿನ ಜತೆ ಕೊತ್ತನೂರಿನ ಮುನಿನಂಜಪ್ಪ ಬಡಾವಣೆಯಲ್ಲಿ ನೆಲೆಸಿದ್ದ. 

ಬನ್ನೇರುಘಟ್ಟ ರಸ್ತೆಯ ಖಾಸಗಿ ಕಾಲೇಜಿನಲ್ಲಿ ಬಿಸಿಎ ಪದವಿಗೆ ಸೇರಿದ್ದ ಆರೋಪಿ, ಮೊದಲ ವರ್ಷದ ಬಳಿಕ ಮತ್ತೆ ಕಾಲೇಜಿನತ್ತ ಸುಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ನಂಬರ್‌ ಪ್ಲೇಟ್‌
ಆರೋಪಿಯಿಂದ ₹20.40  ಲಕ್ಷ ಮೌಲ್ಯದ ಚಿನ್ನಾಭರಣ,  ₹3.75 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.  ಆತನ ಇತರ ಕೃತ್ಯಗಳ ಕುರಿತು ತನಿಖೆ ನಡೆಯುತ್ತಿದೆ. ಪಾಸ್‌ಪೋರ್ಟ್‌ ಪರಿಶೀಲನೆಗಾಗಿ ಕಳುಹಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT