ADVERTISEMENT

ತಾಯಿ ಮೇಲೆ ಹಲ್ಲೆ: ತಂದೆಯನ್ನು ಕೊಂದ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:42 IST
Last Updated 26 ಸೆಪ್ಟೆಂಬರ್ 2016, 19:42 IST
ತಾಯಿ ಮೇಲೆ ಹಲ್ಲೆ: ತಂದೆಯನ್ನು ಕೊಂದ
ತಾಯಿ ಮೇಲೆ ಹಲ್ಲೆ: ತಂದೆಯನ್ನು ಕೊಂದ   

ಬೆಂಗಳೂರು: ರಾಜಗೋಪಾಲನಗರ ಸಮೀಪದ ಅಂಬೇಡ್ಕರ್‌ ಕಾಲೊನಿಯಲ್ಲಿ ರಾಜಣ್ಣ (65) ಎಂಬುವರನ್ನು ಆತನ ಮಗನೇ ಕೊಲೆ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

‘ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದ ರಾಜಣ್ಣ, ಪ್ರತಿದಿನವೂ ಕುಡಿದು ಬಂದು ಪತ್ನಿ ನಾಗಮ್ಮ (50) ಅವರೊಂದಿಗೆ ಜಗಳ ಮಾಡುತ್ತಿದ್ದರು. ಭಾನುವಾರ ತಡರಾತ್ರಿ ನಾಗಮ್ಮ ಅವರಿಗೆ ಕಲ್ಲಿನಿಂದ ಹೊಡೆದಿದ್ದರು. ಅದರಿಂದ ಕೋಪಗೊಂಡ ಮಗ ಹರೀಶ್‌, ರಾಜಣ್ಣ ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತೈಗೆದಿದ್ದಾನೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಯಶವಂತಪುರದ ಮಾರುಕಟ್ಟೆಯಲ್ಲಿ ಹೂವು ಹಾಗೂ ಹಣ್ಣು ಖರೀದಿಸಿಕೊಂಡು ಬರುತ್ತಿದ್ದ ನಾಗಮ್ಮ, ತಮ್ಮ ಮನೆ ಬಳಿ ತಳ್ಳುಗಾಡಿಯಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಅವರಿಗೆ ಹರೀಶ್‌ ಸಹಾಯ ಮಾಡುತ್ತಿದ್ದ. ಅವರು ದುಡಿದ ಹಣ ಕಿತ್ತುಕೊಂಡು ರಾಜಣ್ಣ ಕುಡಿಯುತ್ತಿದ್ದರು. ಅದು ತಾಯಿ, ಮಗ ಕೋಪಕ್ಕೆ ಕಾರಣವಾಗಿತ್ತು’.

‘ಭಾನುವಾರ ಬೆಳಿಗ್ಗೆಯಿಂದಲೇ ಮದ್ಯ ಸೇವಿಸಲು ಶುರು ಮಾಡಿದ್ದ ರಾಜಣ್ಣ, ರಾತ್ರಿ 9ರ ಸುಮಾರಿಗೆ ಮನೆಗೆ ಬಂದು   ₹100 ಕೊಡುವಂತೆ ಪತ್ನಿಯನ್ನು ಒತ್ತಾಯಿಸಿದ್ದರು. ಹಣ ಕೊಡಲು ನಿರಾಕರಿಸುತ್ತಿದ್ದಂತೆ ನಾಗಮ್ಮ ಅವರನ್ನು ಬಾತ್‌ರೂಮ್‌ನಲ್ಲಿ ಕೂಡಿಹಾಕಿ ಬೀಗ ಹಾಕಿದ್ದರು. ಅದೇ ವೇಳೆ ಮನೆಗೆ ಬಂದ ಮಗ ಹರೀಶ್‌, ತಂದೆಯಿಂದ ಬೀಗ ಕಸಿದುಕೊಂಡು ನಾಗಮ್ಮ ಅವರನ್ನು ಹೊರಗೆ ಕರೆತಂದಿದ್ದ’ ‘ಈ ವೇಳೆ ತಂದೆ, ಮಗನ ಮಧ್ಯೆ ಜಗಳ ನಡೆದಿತ್ತು. 

ರಾಜಣ್ಣ, ಮಗನ ಮೇಲೆ ಕಲ್ಲು ಎಸೆಯಲು ಹೋದಾಗ ಅದು ನಾಗಮ್ಮ ಅವರಿಗೆ ತಗುಲಿತ್ತು.  ತಾಯಿ ತಲೆಯಿಂದ ರಕ್ತ ಬರುತ್ತಿರುವುದನ್ನು ಕಂಡ ಮಗ, ಆರೈಕೆ ಮಾಡಿ ಮನೆ ಹತ್ತಿರವೇ ಇದ್ದ ಅಕ್ಕನಿಗೆ ವಿಷಯ ತಿಳಿಸಿದ್ದ. ಮನೆಗೆ ಬಂದ ಅಕ್ಕ, ನಾಗಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು’.

‘ಅದಾದ ಬಳಿಕ ಮನೆ ಎದುರು ಮಲಗಿಕೊಂಡಿದ್ದ ರಾಜಣ್ಣ ಅವರ ತಲೆ ಮೇಲೆ ಹರೀಶ್‌ ಕಲ್ಲು ಎತ್ತಿ ಹಾಕಿದ್ದ. ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿತ್ತು. ಅದನ್ನು ನೋಡಿದ ಸ್ಥಳೀಯರು, ತಳ್ಳುಗಾಡಿಯಲ್ಲಿ ರಾಜಣ್ಣನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಅವರು ಅಸುನೀಗಿದರು’ ಎಂದು ಪೊಲೀಸರು ತಿಳಿಸಿದರು.

ಪೊಲೀಸರಿಗೆ ಶರಣು
ತಂದೆಯು ಮೃತಪಟ್ಟ ವಿಷಯ ಗೊತ್ತಾಗುತ್ತಿದ್ದಂತೆ ಹರೀಶ್‌ ರಾಜಗೋಪಾಲನಗರ ಠಾಣೆಗೆ ಬಂದು ಶರಣಾಗಿದ್ದಾನೆ. ‘ತಂದೆಯು ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ. ಅದರ ಕೋಪದಲ್ಲಿ ಆತನನ್ನು ಕೊಲೆ ಮಾಡಿರುವುದಾಗಿ ಹರೀಶ್‌ ತಿಳಿಸಿದ್ದಾನೆ. ಆತನನ್ನು ಬಂಧಿಸಿ ನ್ಯಾಯಾಲಯದ ಕಸ್ಟಡಿಗೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸದ್ಯ ನಾಗಮ್ಮ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಅವರ ಹೇಳಿಕೆ ಪಡೆದುಕೊಳ್ಳಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT