ADVERTISEMENT

ತಿಪ್ಪಗೊಂಡನಹಳ್ಳಿ ಜಲಾಶಯ ದಶಕದಲ್ಲೇ ಗರಿಷ್ಠ ಮಟ್ಟ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 20:15 IST
Last Updated 10 ಸೆಪ್ಟೆಂಬರ್ 2017, 20:15 IST
ಮೈದುಂಬಿರುವ ತಿಪ್ಪಗೊಂಡನಹಳ್ಳಿಯ ಚಾಮರಾಜ­ಸಾಗರ ಜಲಾಶಯ
ಮೈದುಂಬಿರುವ ತಿಪ್ಪಗೊಂಡನಹಳ್ಳಿಯ ಚಾಮರಾಜ­ಸಾಗರ ಜಲಾಶಯ   

–ಅಭಿಲಾಷ ಬಿ.ಸಿ

**

ಬೆಂಗಳೂರು: ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ನದಿ ಹಾಗೂ ಸರೋವರಗಳುಡ ಜೀವಕಳೆ ಪಡೆದಿವೆ. ತಿಪ್ಪಗೊಂಡನಹಳ್ಳಿ ಚಾಮ
ರಾಜ­ಸಾಗರ ಜಲಾಶ­ಯದಲ್ಲಿ ದಶಕದಲ್ಲಿಯೇ ಅತ್ಯಧಿಕ (53.10 ಅಡಿ) ನೀರು ಸಂಗ್ರಹವಾಗಿದೆ.

ADVERTISEMENT

ಅರ್ಕಾವತಿ, ಕುಮದ್ವತಿ ನದಿಗಳ ಸಂಗಮ ಸ್ಥಳದಲ್ಲಿರುವ ಈ ಸರೋವರ ಸಾಮಾನ್ಯವಾಗಿ ಅಕ್ಟೋಬರ್‌, ನವೆಂಬರ್‌ ತಿಂಗಳಿನಲ್ಲಿ ತುಂಬಿಕೊಳ್ಳುತ್ತಿತ್ತು. ಈ ಬಾರಿ ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ನೆಲಮಂಗಲ ಹಾಗೂ ಸುತ್ತಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಸಲ ಸೆಪ್ಟೆಂಬರ್‌ ಮೊದಲ ವಾರದಲ್ಲಿಯೇ 53 ಅಡಿಗೆ ಏರಿದೆ.

ನಗರದಿಂದ 30 ಕಿ.ಮೀ. ದೂರದ­ಲ್ಲಿರುವ ಈ ಜಲಾಶಯ 74 ಅಡಿ ನೀರು (3.45 ಟಿಎಂಸಿ ಅಡಿ ನೀರು) ಸಂಗ್ರಹದ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಈಗ 1.98 ಟಿಎಂಸಿ ನೀರಿದೆ. ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಜಲಾಶಯ ಮಟ್ಟ ಇನ್ನಷ್ಟು ಏರುವ ನಿರೀಕ್ಷೆ ಇದೆ.

1974ರಲ್ಲಿ ಕಾವೇರಿ ಮೊದಲನೇ ಹಂತದ ಯೋಜನೆ ಅನುಷ್ಠಾನವಾಗುವವರೆಗೆ ಈ ಜಲಾಶಯವೇ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿತ್ತು. ರಾಜಾಜಿನಗರ, ಸುಂಕದಕಟ್ಟೆ, ಪಶ್ಚಿಮ ಕಾರ್ಡ್ ರಸ್ತೆ, ವಿಜಯನಗರ, ಮಹಾ­ಲಕ್ಷ್ಮಿ ಬಡಾವಣೆ ಹಾಗೂ ಸುತ್ತಮು­ತ್ತಲಿನ ಪ್ರದೇಶಗಳ ಕುಟುಂಬಗಳಿಗೆ ಇಲ್ಲಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು.

1992ರ ಜೂನ್‌ನಲ್ಲಿ ಜಲಾಶಯ ತುಂಬಿತ್ತು. ಮತ್ತೆ 1997–98ರಲ್ಲಿ ನೀರಿನ ಮಟ್ಟ 71 ಅಡಿಗೆ ತಲುಪಿತ್ತು. ಬಳಿಕ ನೀರಿನ ಗರಿಷ್ಠ ಮಟ್ಟ 50 ಅಡಿ ದಾಟಿರಲಿಲ್ಲ.ವರ್ಷದಿಂದ ವರ್ಷಕ್ಕೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂತು. 2012ರ ಅಕ್ಟೋಬರ್‌ ಬಳಿಕ ನಗರಕ್ಕೆ ಇಲ್ಲಿಂದ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿತ್ತು.

‘ಜಲಾಶಯ ಭರ್ತಿ­ಯಾ­ದರೆ ನಗರಕ್ಕೆ ಪ್ರತಿನಿತ್ಯ 13 ಕೋಟಿ ಲೀಟರ್‌ ನೀರು ಪಂಪ್‌ ಮಾಡಲು ಸಾಧ್ಯವಿದೆ. ಜಲಾಶಯ ಪಕ್ಕದಲ್ಲಿರುವ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧಗೊಳಿಸಿ ತಾವರೆಕೆರೆಗೆ ಪಂಪ್‌ ಮಾಡಲಾಗುತ್ತದೆ. ಅಲ್ಲಿನ ಪಂಪಿಂಗ್‌ ಘಟಕದಲ್ಲಿ ಮತ್ತೆ ಶುದ್ಧ­ಗೊಳಿಸಲಾಗುತ್ತದೆ. ಬಳಿಕ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ’ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

‘ಪ್ರಸ್ತುತ ನಗರಕ್ಕೆ 100 ಕಿ.ಮೀ. ದೂರದಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕಾವೇರಿಯ ನಾಲ್ಕು ಹಂತಗಳಿಂದ ನಗರಕ್ಕೆ ಪ್ರತಿ­ನಿತ್ಯ 130 ಕೋಟಿ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದಾಗ ಈ ಜಲಾಶಯದ ನೀರನ್ನು ಬಳಸಿಕೊಳ್ಳಬಹುದು’ ಎಂದು ಅವರು ಹೇಳುತ್ತಾರೆ.

‘ಕಳೆದ ವರ್ಷ ಜಲಾಶಯದಲ್ಲಿ 25 ಅಡಿ ನೀರಿತ್ತು. ಆಗ ಟಿಡಿಎಸ್‌ ಪ್ರಮಾಣ 500ಕ್ಕಿಂತ ಜಾಸ್ತಿ ಇತ್ತು. ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಈಗ ಸಾಕಷ್ಟು ಪ್ರಮಾಣದ ನೀರು ಹರಿದು ಬಂದಿರುವುದರಿಂದ ಮಾಲಿನ್ಯ ಸ್ವಲ್ಪ ಕಡಿಮೆಯಾಗಿದೆ. ಈಗ ಜಲಾಶಯದ ನೀರಿನ ಶುದ್ಧೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡುತ್ತಾರೆ.

**

ತ್ಯಾಜ್ಯ ನೀರಿನ ಸಮಸ್ಯೆ

ದಶಕಗಳ ಹಿಂದೆ ನಗರದ ಜನರ ಜೀವನಾಡಿಯಾಗಿದ್ದ ಸರೋವರ ಕ್ರಮೇಣ ಮಳೆಯ ಕೊರತೆ, ಮಾಲಿನ್ಯದ ಪರಿಣಾಮ ತನ್ನ ವೈಭವವನ್ನು ಕಳೆದುಕೊಂಡಿತು. ನದಿ ಪಾತ್ರದಲ್ಲಿ ತಲೆಯೆತ್ತಿದ ವಾಣಿಜ್ಯ ಚಟುವಟಿಕೆಗಳು ಸರೋವರದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸಿದವು. ಸುತ್ತಲಿನ ನಗರದ ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯ ಸರೋವರದ ಒಡಲನ್ನು ಸೇರಿದ ಬಳಿಕ ಇದರ ನೆನಪು ಜನರ ಮನಸ್ಸಿನಿಂದ ಮರೆಯಾಗತೊಡಗಿತು.

ಮಳೆನೀರಿನೊಂದಿಗೆ ಸೇರುವ ತ್ಯಾಜ್ಯ ಹಾಗೂ ರಾಸಾಯನಿಕ ಮಿಶ್ರಿತ ನೀರು ಕಳೆಯ (ಅಂತರಗಂಗೆ) ಸಮಸ್ಯೆಯನ್ನು ಸೃಷ್ಟಿಸಿತು. ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಮಳೆಯಾದರೆ ಸರೋವರ ತುಂಬುತ್ತದೆ ಎಂಬ ಖುಷಿ ಮಾಯವಾಗಿ ಮಳೆ ನೀರು ಹೊತ್ತು ತರುವ ತ್ಯಾಜ್ಯ, ನೈಟ್ರೇಟ್‌ನಂತಹ ಅಪಾಯಕಾರಿ ಘನವಸ್ತುಗಳು ಭೀತಿ ಮೂಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.