ADVERTISEMENT

ತೆಲುಗು ವಿಜ್ಞಾನ ಸಮಿತಿ ಕಾರ್ಯಕ್ರಮದಲ್ಲಿ ನಿಸಾರ್‌ ಪ್ರತಿಪಾದನೆ

‘ಭಾಷಿಕರ ನಡುವೆ ಹೃದಯ ಬೆಸುಗೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:27 IST
Last Updated 29 ಮಾರ್ಚ್ 2015, 20:27 IST

ಬೆಂಗಳೂರು: ದೇಶದಲ್ಲಿ ಭಾಷಾ ವೈಷಮ್ಯ ನೆಲೆಸಿರುವಾಗ ಕನ್ನಡ ಹಾಗೂ ತೆಲುಗು ಭಾಷಿಕರು ಸೇರಿ ಶ್ರೀ ಕೃಷ್ಣ ದೇವ ರಾಯನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ತಿಳಿಸಿದರು.

ತೆಲುಗು ವಿಜ್ಞಾನ ಸಮಿತಿಯು ನಗರ ದಲ್ಲಿ ಭಾನುವಾರ ಆಯೋಜಿಸಿದ್ದ 63ನೇ ಯುಗಾದಿ ಉತ್ಸವ ಹಾಗೂ ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾಷಿಕರ ನಡುವೆ ಹೃದಯ ಬೆಸುಗೆ ಆಗಬೇಕು. ಕಾಕತೀಯರ ಕಾಲದಿಂದಲೇ ಕನ್ನಡ ಹಾಗೂ ತೆಲುಗರ ನಡುವೆ ಉತ್ತಮ ಬಾಂಧವ್ಯ ನೆಲೆಸಿದೆ. ಆದರೆ, ಇತಿಹಾಸ ಇದನ್ನು ಸರಿಯಾಗಿ ದಾಖಲಿ ಸಿಲ್ಲ. ಹಾಗಾಗಿ ಕೃಷ್ಣದೇವರಾಯನ ಕಾಲ ದಿಂದ ಮಾತ್ರ ಉಭಯ ಭಾಷಿಕರ ನಡುವಿನ ಬಾಂಧವ್ಯದ ಚಿತ್ರಣ ನಮಗೆ ಸಿಗುತ್ತದೆ’ ಎಂದರು.

ಆಂಧ್ರಪ್ರದೇಶದ ವಿಧಾನಸಭೆ ಉಪ ಸಭಾಧ್ಯಕ್ಷ ಮಂಡಲಿ ಬುದ್ಧಪ್ರಸಾದ್‌, ‘ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಿದರೆ ಮಾತ್ರ ಭಾಷೆಗಳು ಉಳಿಯು ತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಪ್ರಾದೇಶಿಕ ಭಾಷೆಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಹೇಳಿದರು.

ಸಮಿತಿ ಅಧ್ಯಕ್ಷ ಎ.ರಾಧಾಕೃಷ್ಣರಾಜು ಮಾತನಾಡಿ, ‘ತೆಲುಗು ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯಾಗಿ ತೆಲುಗು ಅಧ್ಯ ಯನಕ್ಕೆ ಅವಕಾಶ ಮಾಡಿಕೊಡ ಬೇಕು. ಹಾಗಾಗಿ ಕರ್ನಾಟಕ ರಾಜ್ಯವು ತ್ರಿಭಾಷಾ ಸೂತ್ರ ಜಾರಿಗೆ ತರಬೇಕು. ತಮಿಳು ನಾಡಿನಲ್ಲಿ ದ್ವಿಭಾಷಾ ಸೂತ್ರದಿಂದಾಗಿ ತೆಲುಗು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು. ಸಮಿತಿಯ ಕೃಷ್ಣದೇವರಾಯ ಕಲಾ ಮಂದಿರ ಆಧು ನೀಕರಣಕ್ಕೆ ಸಿ.ಎಂ ಸಿದ್ದರಾಮಯ್ಯ ₨40 ಲಕ್ಷ ಮಂಜೂರು ಮಾಡಿದ್ದು, ಆಂಧ್ರ  ಸರ್ಕಾರ ಕೂಡ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.